ಕರ್ಣಾಟಕ ಬ್ಯಾಂಕ್‌ಗೆ ₹163.24 ಕೋಟಿ ಲಾಭ

7
ಬ್ಯಾಂಕ್‌ ಇತಿಹಾಸದಲ್ಲಿ ಸಾರ್ವಕಾಲಿಕ ಗರಿಷ್ಠ ಲಾಭ: ಮಹಾಬಲೇಶ್ವರ್‌

ಕರ್ಣಾಟಕ ಬ್ಯಾಂಕ್‌ಗೆ ₹163.24 ಕೋಟಿ ಲಾಭ

Published:
Updated:

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಈ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಶೇ 21.96 ರ ವೃದ್ಧಿಯೊಂದಿಗೆ ₹163.24 ಕೋಟಿ ನಿವ್ವಳ ಲಾಭ ಘೋಷಿಸಿದೆ. ಕಳೆದ ವರ್ಷ ಇದೇ ಅವಧಿಗೆ ಲಾಭ ₹133.85 ಕೋಟಿಗಳಷ್ಟಿತ್ತು.

ಈ ತ್ರೈಮಾಸಿಕದ ಲಾಭವು ಬ್ಯಾಂಕಿನ ಇತಿಹಾಸದಲ್ಲಿಯೇ ಸರ್ವಾಧಿಕವಾಗಿದ್ದು, ಈ ಹಿಂದೆ ಬ್ಯಾಂಕಿನ ಉತ್ತಮ ಲಾಭವು ₹138.37 ಕೋಟಿ ಆಗಿದ್ದು, 2016-17 ವಿತ್ತೀಯ ವರ್ಷದ 4ನೇ ತ್ರೈಮಾಸಿಕದಲ್ಲಿ ದಾಖಲಾಗಿತ್ತು.

ಬ್ಯಾಂಕಿನ ನಿರ್ವಹಣಾ ಲಾಭವು ಹಿಂದಿನ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಇದ್ದ ₹309.70 ಕೋಟಿಯಿಂದ ₹368.88 ಕೋಟಿಗೆ ತಲುಪಿದ್ದು, ಶೇ 19.11ರ ದರದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕಿನ ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ 10.40ರ ದರದಲ್ಲಿ ಹೆಚ್ಚಳಗೊಂಡು ₹468.58 ಕೋಟಿ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಬಡ್ಡಿ ಲಾಭವು ₹424.42 ಕೋಟಿಗಳಾಗಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರವು ₹1,10,456 ಕೋಟಿ  ತಲುಪಿದ್ದು, ಇದು ವಾರ್ಷಿಕ ಶೇ 16.72 ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿ ಮೊತ್ತವು ₹56,227 ಕೋಟಿಯಿಂದ ₹62,725 ಕೋಟಿ ತಲುಪಿದ್ದು, ವಾರ್ಷಿಕ ಶೇ 11.56ರ ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಮುಂಗಡವು ₹38,405 ಕೋಟಿಯಿಂದ ₹47,731 ಕೋಟಿ ತಲುಪಿದ್ದು, ಶೇ 24.28ರ ದರದಲ್ಲಿ ವೃದ್ಧಿಯನ್ನು ಸಾಧಿಸಿದೆ.

‘ಈ ತ್ರೈಮಾಸಿಕದಲ್ಲಿ ಲಾಭವು ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಐತಿಹಾಸಿಕ ಹೆಚ್ಚಳ ಹೊಂದಿದ ಸಿ.ಡಿ. ಅನುಪಾತ, ಅನುತ್ಪಾದಕ ಸ್ವತ್ತುಗಳಲ್ಲಿನ ಗಣನೀಯ ಕಡಿತ (ಎನ್‌ಪಿಎ), ಉತ್ತಮ ಸುಧಾರಿತ ನಿವ್ವಳ ಬಡ್ಡಿ ಆದಾಯ (ಎನ್‌ಐಐ) ಹಾಗೂ ನಿವ್ವಳ ಬಡ್ಡಿ ಲಾಭಾಂಶ (ಎನ್‌ಐಎಂ) ಇತ್ಯಾದಿಗಳು ಬ್ಯಾಂಕಿನ ಸದೃಢ ಬೆಳವಣಿಗೆ ಹಾಗೂ ಉತ್ತಮ ಭವಿಷ್ಯದ ದ್ಯೋತಕವಾಗಿವೆ. ಬ್ಯಾಂಕ್‌ ಮುಂಬರುವ ದಿನಗಳಲ್ಲಿ ಗ್ರಾಹಕರ ಸೇವೆಗೆ ಇನ್ನೂ ಹೆಚ್ಚು ಒತ್ತು ಕೊಡುತ್ತ ನಿರಂತರ ಬೆಳವಣಿಗೆಯ ಛಾಪನ್ನು ಮೂಡಿಸುವ ಬಗ್ಗೆ ಭರವಸೆ ಇದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.

ಗುರುವಾರ ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅನುಮೋದಿಸಲಾಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !