ಕವಿವಿ: ದೂರ ಶಿಕ್ಷಣ ವಿಭಾಗ ಮುಚ್ಚುವ ಭೀತಿ

7
ಯುಜಿಸಿ ಹೊಸ ನಿಯಮ ತಂದ ಬಿಕ್ಕಟ್ಟು; ಸಿಜಿಪಿಎ ಕಡಿಮೆ ಇದ್ದರೂ ಮಂಗಳೂರು ವಿವಿಗೆ ಮಾನ್ಯತೆ

ಕವಿವಿ: ದೂರ ಶಿಕ್ಷಣ ವಿಭಾಗ ಮುಚ್ಚುವ ಭೀತಿ

Published:
Updated:

ಧಾರವಾಡ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಾವಳಿಯಿಂದಾಗಿ ಕರ್ನಾಟಕ ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗ ಮುಚ್ಚುವ ಭೀತಿ ಎದುರಿಸುತ್ತಿದೆ.

ದೂರ ಶಿಕ್ಷಣಕ್ಕೆ ಇದ್ದ 1985ರ ಕಾಯ್ದೆಯನ್ನು ರದ್ದುಪಡಿಸಿ, 2017ರಲ್ಲಿ ಹೊಸದೊಂದು ಕಾಯ್ದೆಯನ್ನು ಯುಜಿಸಿ ಜಾರಿಗೆ ತಂದಿತು. ಅದರ ಅನ್ವಯ ನ್ಯಾಕ್ (ನ್ಯಾಷನಲ್‌ ಅಸಸ್ಮೆಂಟ್ ಮತ್ತು ಅಕ್ರಿಡೇಷನ್ ಕೌನ್ಸಿಲ್‌) ನೀಡುವ ಶ್ರೇಯಾಂಕದಲ್ಲಿ ‘ಎ’ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು. ಅದರ ಆಧಾರದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯವೂ ಅರ್ಜಿ ಹಾಕಿತ್ತು.

ಆದರೆ, 2018ರಲ್ಲಿ ಮತ್ತೊಂದು ತಿದ್ದುಪಡಿ ತಂದ ಯುಜಿಸಿ, 3.26 ಕ್ಕೂ ಅಧಿಕ ಸಿ.ಜಿ.ಪಿ.ಎ (ಕ್ಯುಮಿಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್‌)  ಗ್ರೇಡ್‌ ಹೊಂದಿದ ವಿಶ್ವವಿದ್ಯಾಲಯಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು. ಕರ್ನಾಟಕ ವಿಶ್ವವಿದ್ಯಾಲಯದ ಸಿ.ಜಿ.ಪಿ.ಎ 3.15 ಇದ್ದ ಕಾರಣ ಅರ್ಜಿ ಸಲ್ಲಿಸುವ ಅವಕಾಶವನ್ನೇ ಅದು ಕಳೆದುಕೊಂಡಿತು.

ಆದರೆ, 3.09 ಸಿ.ಜಿ.ಪಿ.ಎ ಹೊಂದಿರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಕ್ಕಿದೆ. ಇದನ್ನು ಪ್ರಶ್ನಿಸಿ ಯುಜಿಸಿಗೆ ಪತ್ರ ಬರೆದಿರುವ ಕರ್ನಾಟಕ ವಿಶ್ವವಿದ್ಯಾಲಯ, ತನಗೂ ದೂರ ಶಿಕ್ಷಣ ಕೊಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸದ್ಯ 11 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೂರ ಶಿಕ್ಷಣದ ಮೂಲಕ ಕಲಿಯುತ್ತಿದ್ದಾರೆ. ಒಂದೊಮ್ಮೆ ಇದನ್ನು ರದ್ದುಗೊಳಿಸಿದಲ್ಲಿ ಅವರೆಲ್ಲರೂ 2021ರೊಳಗೆ ಪದವಿ ಮುಗಿಸಿಕೊಳ್ಳಬೇಕು. ಈಗಾಗಲೇ ನೋಂದಾಯಿಸಿಕೊಂಡು, ಅರ್ಧಕ್ಕೆ ಬಿಟ್ಟವರು ಮುಂದಿನ ಎರಡು ವರ್ಷಗಳ ಒಳಗಾಗಿ ಪದವಿ ಪೂರ್ಣಗೊಳಿಸಿಕೊಳ್ಳಬೇಕು.

**

ಸಂಸದ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವ ಪ್ರಕಾಶ ಜಾವಡೇಕರ್‌ ಅವರನ್ನು ಸೆ. 9ರಂದು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

–ಡಾ. ಮಲ್ಲಿಕಾರ್ಜುನ ಪಾಟೀಲ, ಕುಲಸಚಿವ (ಆಡಳಿತ) ಕವಿವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !