ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

7
ಶಿಕ್ಷಣ, ಆರೋಗ್ಯಕ್ಕೆ ಅನುದಾನ ಹೆಚ್ಚಳವಿಲ್ಲ

ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

Published:
Updated:

ಬೆಂಗಳೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಲವು ‘ಆಕರ್ಷಣೀಯ’ ಅಂಶಗಳು ಗೋಚರಿಸಿದರೂ, ಇವೆರಡೂ ವಲಯಗಳಿಗೆ ಅನುದಾನ ಹಂಚಿಕೆಯಲ್ಲಿ ಮಹತ್ವದ ಏರಿಕೆಯೇನೂ ಸಿಕ್ಕಿಲ್ಲ.

ಆದರೆ, ಲಭ್ಯವಿರುವ ಅನುದಾನವನ್ನು ಆದ್ಯತಾ ಕಾರ್ಯಗಳಿಗೆ ಮೀಸಲಿಡಲಾಗಿದೆ. ಮುಖ್ಯವಾಗಿ, ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ಹಾಗೂ ಅಂಗನವಾಡಿಗಳ ಅಭಿವೃದ್ಧಿಗೆ ಒತ್ತು, 1 ಸಾವಿರ ಪಬ್ಲಿಕ್‌ ಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ.

ಶಿಕ್ಷಣ ವಲಯಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ₹1,570 ಕೋಟಿ ಅಧಿಕ ಮೊತ್ತ ನಿಗದಿ ಮಾಡಲಾಗಿದೆ. ಮುಖ್ಯಮಂತ್ರಿ ತಮ್ಮ ತವರು ಜಿಲ್ಲೆ ಹಾಸನಕ್ಕೆ ಹೊಸ ತಾಂತ್ರಿಕ ವಿಶ್ವವಿದ್ಯಾಲಯದ ಕೊಡುಗೆ ನೀಡಿರುವುದು ವಿಶೇಷ. 

ಮುಂದಿನ ನಾಲ್ಕು ವರ್ಷಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ 1000 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. 6500 ಶಾಲೆಗಳಲ್ಲಿ ಮೂಲಸೌಕರ್ಯ ಆಧುನೀಕರಣ, ಕೊಠಡಿಗಳ ಉನ್ನತೀಕರಣಕ್ಕೆ ₹1200 ಕೋಟಿ ನಿಗದಿ ಮಾಡಲಾಗಿದೆ.

ಸಿಇಟಿ ಆನ್‌ಲೈನ್‌:  ಸಿಇಟಿ ಪರೀಕ್ಷೆ ಆನ್‌ಲೈನ್‌ ಮೂಲಕ ನಡೆಸಲಾಗುವುದು. ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಬೇಕು ಎಂಬ ಬೇಡಿಕೆ ಬಹಳ ಕಾಲದಿಂದಲೂ ಇತ್ತು. ಅಲ್ಲದೆ, ವಿದ್ಯಾರ್ಥಿಗಳಿಗೆ ಆಧಾರ್‌ ಸಂಖ್ಯೆ ಆಧಾರಿತ ಡಿಜಿಟಲ್‌ ಅಂಕಪಟ್ಟಿ ವಿತರಣೆ ಮತ್ತು ಪದವಿ ಪ್ರಮಾಣ ಪತ್ರವನ್ನು ಆನ್‌ಲೈನ್‌ ಮೂಲಕವೇ ವಿತರಿಸುವ ಹೊಸ ಪ್ರಸ್ತಾವ ಮುಂದಿಡಲಾಗಿದೆ. ಇದು ಪರೀಕ್ಷಾ ನಿರ್ವಹಣಾ ವ್ಯವಸ್ಥೆಯಲ್ಲಿ ರಾಜ್ಯ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.

ನಿರುದ್ಯೋಗ ಸಮಸ್ಯೆ ದಟ್ಟವಾಗಿ ಕಾಡುತ್ತಿರುವ ಬೆನ್ನಲ್ಲೇ, ರಾಜ್ಯದ ಎಲ್ಲ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ನೀಡಲು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲು ತೀರ್ಮಾನಿಸಿದೆ.

ಕಾರವಾರ ಮತ್ತು ಕೊಡಗಿನಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸರ್ಕಾರ ಆರಂಭಿಸಿದ್ದರೂ ಆಸ್ಪತ್ರೆ, ಹಾಸ್ಟೆಲ್‌ ಸೌಲಭ್ಯ ಇರಲಿಲ್ಲ. ಕಾರವಾರ ವೈದ್ಯಕೀಯ ಕಾಲೇಜಿಗೆ ₹150 ಕೋಟಿ ವೆಚ್ಚದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಮತ್ತು ಹಾಸ್ಟೆಲ್‌, ಕೊಡಗಿನಲ್ಲಿ ₹100 ಕೋಟಿ ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.

ಆಯುಷ್ಮಾನ್‌ ಭಾರತ್‌: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ ಆಯುಷ್ಮಾನ್ ಭಾರತ್‌– ಆರೋಗ್ಯ ಕರ್ನಾಟಕಕ್ಕೆ ₹950 ಕೋಟಿ ನಿಗದಿ ಮಾಡಿದ್ದು, ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಅನುದಾನ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ₹ 409 ಕೋಟಿ ನೀಡಿದೆ.

ಅಲ್ಲದೆ, ಹಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಹಾಗೂ ದೊಡ್ಡ ಬಳ್ಳಾಪುರ ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ನೀಡಲಾಗಿದೆ. ಬೆಂಗಳೂರಿನ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಕ್ರೀಡಾ ರೋಗಿಗಳ ವಿಭಾಗ ಪ್ರಾರಂಭ ಮತ್ತು ರೋಬೋಟಿಕ್‌ ಶಸ್ತ್ರ ಚಿಕಿತ್ಸೆ ಒದಗಿಸಲು ₹10 ಕೋಟಿ ಒದಗಿಸಲಾಗಿದೆ. ತುಮಕೂರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸಲು ಹಣ ಕಾಯ್ದಿರಿಸಲಾಗಿದೆ.

ಮಾತೃಶ್ರೀ ಸಹಾಯ ಧನವನ್ನು ₹2,000ಕ್ಕೆ ಏರಿಕೆ, ಅಂಗವಾಡಿ ಕಾರ್ಯಕರ್ತೆಯರಿಗೆ ಗೌರವಧನ ₹500, ಸಹಾಯಕಿಯರಿಗೆ ₹250 ಹೆಚ್ಚಿಸುವ ಪ್ರಸ್ತಾವನೆ ಮಂಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಬೇಕು ಎಂಬ ದೊಡ್ಡ ಹೋರಾಟವೇ ನಡೆದಿತ್ತು. ಆದರೆ, ಅವರು ಕೇಳಿದಷ್ಟು ಮೊತ್ತವನ್ನು ನಿಗದಿ ಮಾಡಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈ ಹಿಂದೆ ಇದ್ದ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಲು ತೀರ್ಮಾನಿಸಿದ್ದಾರೆ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ಈ ಕಾರ್ಯಕ್ರಮ ಆರಂಭಿಸಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಕಾರ್ಯಕ್ರಮವೂ ನಿಂತು ಹೋಗಿತ್ತು.

ಕನ್ನಡ ಸಂಸ್ಕೃತಿ ಹಳೆ ಮೈಸೂರಿಗೆ ಮಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಕಟಿಸಿದ ಎಲ್ಲ ಕಾರ್ಯಕ್ರಮಗಳೂ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿದೆ. ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗ ಕಲೆ ಸಂಸ್ಕೃತಿಗಳಿಗಾಗಿ ಹೊಸ ಯೋಜನೆ ಪ್ರಕಟಿಸಿಲ್ಲ. ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೊಡಗು ಮತ್ತು ತುಮಕೂರಿಗೆ ಮಾತ್ರ ಮೀಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !