ಶುಕ್ರವಾರ, ಜೂನ್ 25, 2021
21 °C
ಕೆಎಂಎಫ್‌ ನಿರ್ದೇಶಕರಿಗೂ ರೆಸಾರ್ಟ್‌ ಭಾಗ್ಯ–ದ್ವೇಷದ ರಾಜಕಾರಣ ಆರೋಪ

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆ ದಿಢೀರ್‌ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆಯನ್ನು ದಿಢೀರ್‌ ರದ್ದುಪಡಿಸಲಾಗಿದೆ. ಇದು ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್‌ ಶಾಸಕ ಭೀಮಾ ನಾಯ್ಕ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಬಿಜೆಪಿಯ ಯೋಜನೆ ಎಂದು ಹೇಳಲಾಗಿದೆ.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದ್ವೇಷದ ರಾಜ ಕಾರಣದ ಫಲವಿದು’ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿರುವ ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

‘ಡೇರಿಗೆ ಒಂದು ಲೀಟರ್‌ ಹಾಲನ್ನೂ ಹಾಕದವರ ಒತ್ತಡ ತಂತ್ರಕ್ಕೆ ಸರ್ಕಾರ ತಲೆಬಾಗಿದೆ. ನಿರ್ದೇಶಕರ ಸಲಹೆ ಪಡೆದು ಕಾನೂನು ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ಕೆಎಂಎಫ್‌ ನಿರ್ದೇಶಕರಲ್ಲಿ ನಾಲ್ವರನ್ನು ರೆಸಾರ್ಟ್‌ನಲ್ಲಿ ಕೂಡಿಟ್ಟು ಮತ ಹಾಕಿಸುವ ಹುನ್ನಾರ ನಡೆದಿದೆ ಎಂದು ದೂರಿರುವ ಭೀಮಾ ನಾಯ್ಕ್‌, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಸರ್ಕಾರ ವಿಶ್ವಾಸಮತ ಪಡೆಯುತ್ತಿದ್ದಂತೆಯೇ ಚುನಾವಣೆ ಮುಂದೂಡುವ ಆದೇಶವೂ ಹೊರಬಿದ್ದಿದೆ.

ಇದೀಗ ಅನರ್ಹಗೊಂಡಿರುವ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿದ್ದ ಭೀಮಾ ನಾಯ್ಕ್‌ ಅವರು ಅತೃಪ್ತರ ಗುಂಪನ್ನು ಸೇರದೆ ಇರುವುದಕ್ಕೆ ಅವರಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಮಿಷ ನೀಡಿದ್ದೇ ಕಾರಣ ಎಂದು ಹೇಳಲಾಗಿತ್ತು. ಆದರೆ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೇ ಜೆಡಿಎಸ್‌ ಅಭ್ಯರ್ಥಿ ರೇವಣ್ಣರತ್ತ ವಾಲಿದ್ದರಿಂದ ಅವರ ನಿರೀಕ್ಷೆಗಳೆಲ್ಲ ತಲೆಕೆಳಗಾಗಿವೆ.

‘ಭೀಮಾ ನಾಯ್ಕ್‌ ಅವರನ್ನು ಬಿಜೆಪಿ ತೆಕ್ಕೆಯೊಳಗೆ ಸೆಳೆದುಕೊಂಡು, ಅವರಿಗೆ ಮತ ಹಾಕುವ ನಿರ್ದೇಶಕರನ್ನೂ ಒಟ್ಟು ಮಾಡಲು ಒಂದಿಷ್ಟು ಸಮಯ ಬೇಕು. ಅದಕ್ಕಾಗಿಯೇ ಚುನಾವಣೆ ದಿಢೀರ್ ಆಗಿ ಮುಂದಕ್ಕೆ ಹೋಗಿದೆ’ ಎಂದು ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಮನಿರ್ದೇಶಕರೊಬ್ಬರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ತುಮಕೂರು, ಮಂಡ್ಯ ಹಾಲು ಒಕ್ಕೂ ಟಗಳಿಂದ ನಿರ್ದೇಶಕರ ನಿಯೋಜನೆ ಆಗಿರಲಿಲ್ಲ. ಆದರೂ ಈ ಬಾರಿ 15 ಮಂದಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದರು. ಕೊನೆಯ ಹಂತದಲ್ಲಿ ಚುನಾವಣೆ ರದ್ದಾಗಿದೆ’ ಎಂದು ಶಾಸಕ ಡಿ.ಕೆ.ಶಿವಕುಮಾರ್‌ ಅವರಿಗೆ ನಿಷ್ಠರಾದ ಇನ್ನೊಬ್ಬ ನಿರ್ದೇಶಕರು ಹೇಳಿದರು.

18 ಮಂದಿಗೆ ಮತ ಹಕ್ಕು

ಕೆಎಂಎಫ್‌ನಲ್ಲಿ 12 ಮಂದಿ ನಿರ್ದೇಶಕರು, ಒಬ್ಬರು ಸರ್ಕಾರಿ ನಾಮ ನಿರ್ದೇಶಿತರು, ಎನ್‌ಡಿಡಿಬಿಯ ಇಬ್ಬರು ಪ್ರತಿನಿಧಿಗಳು ಹಾಗೂ ಮೂವರು ಅಧಿಕಾರಿಗಳು ಸೇರಿ ಒಟ್ಟು 18 ಮಂದಿಗೆ ಮತ ಚಲಾಯಿಸುವ ಹಕ್ಕು ಇದೆ.

 

ಇನ್ನಷ್ಟು...

ಕೆಎಂಎಫ್‌ ಗಾದಿ ಮೇಲೆ ಎಚ್‌.ಡಿ. ರೇವಣ್ಣ ಕಣ್ಣು: ನಾಲ್ವರು ‘ಕೈ’ ನಿರ್ದೇಶಕರ ಹೈಜಾಕ್‌?

ಕೆಎಂಎಫ್‌ ನಿರ್ದೇಶಕ ಸ್ಥಾನಕ್ಕೂ ಜಾರಕಿಹೊಳಿ ಪುತ್ರ ಅವಿರೋಧ ಆಯ್ಕೆ

'ನಂದಿನಿ'ಯಲ್ಲಿ ಇನ್ನು ವಿಟಮಿನ್ 'ಎ', 'ಡಿ'!

ರಾಜ್ಯದ ಕೆಎಂಎಫ್ 'ನಂದಿನಿ' ಹಾಲಿಗೆ ದೆಹಲಿಯಲ್ಲಿ ಬೇಡಿಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು