ಮಂಗಳವಾರ, ಆಗಸ್ಟ್ 20, 2019
27 °C
2011ನೇ ಸಾಲಿನ ನೇಮಕ l ಹೊಸ ಅಧಿಸೂಚನೆ ಅನಿವಾರ್ಯ

ಕೆ‍ಪಿಎಸ್‌ಸಿ: ಆಯ್ಕೆಯಾದವರ ಕನಸು ಭಗ್ನ

Published:
Updated:

ಬೆಂಗಳೂರು: ‌2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಗೊಂಡವರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಮೂರನೇ ಬಾರಿಗೆ ಸುಪ್ರೀಂ ಕೋರ್ಟ್‌ ಕದ ತಟ್ಟಿದ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ.

ಆ ಮೂಲಕ, ಈ ಸಾಲಿನಲ್ಲಿ ಆಯ್ಕೆಯಾಗಿ ಹುದ್ದೆ ಗಿಟ್ಟಿಸಿಕೊಳ್ಳಬಹುದೆಂಬ ಅಭ್ಯರ್ಥಿಗಳ ಕನಸು ಭಗ್ನಗೊಂಡಿದೆ.

ಇದೀಗ, ಅನ್ಯಮಾರ್ಗವಿಲ್ಲದೆ ಈ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗದ
(ಕೆಪಿಎಸ್‌ಸಿ) ಮೂಲಕ ಸರ್ಕಾರ ಹೊಸತಾಗಿ ಅಧಿಸೂಚನೆ ಹೊರಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರಿ ಅಕ್ರಮ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ ಈ ಸಾಲಿನ ನೇಮಕಾತಿಯನ್ನು 2017 ಮಾರ್ಚ್‌ 9ರಂದು ಹೈಕೋರ್ಟ್‌ ರದ್ದುಪಡಿಸಿತ್ತು. ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್‌ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌, ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ತೀರ್ಪು ನೀಡುವಂತೆ ಆದೇಶಿಸಿತ್ತು.

ಲಿಖಿತ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆಒಳಪಡಿಸಲು ಸಾಧ್ಯವಿಲ್ಲವೆಂದು
ಅಭಿಪ್ರಾಯಪಟ್ಟು ಈ ಸಂಬಂಧ ಸಲ್ಲಿಕೆಯಾಗಿದ್ದ ಎಲ್ಲ ಮಧ್ಯಂತರ ಅರ್ಜಿಗಳನ್ನು ಇದೇ ಜುಲೈ 13ರಂದು ಹೈಕೋರ್ಟ್‌ ವಜಾಗೊಳಿಸಿತ್ತು. ಆದರೂ, ಈ ನೇಮಕಾತಿಯ ಹಿಂದೆ ಭಾರಿ ಲಾಬಿ ಮತ್ತು ಪ್ರಭಾವ ಇದ್ದುದರಿಂದ ಈ ಹಿಂದಿನ ಸಮ್ಮಿಶ್ರ ಸರ್ಕಾರ, ನೇಮಕಗೊಂಡವರನ್ನು ಉಳಿಸಿಕೊಳ್ಳಲು ಮುಂದಾಗಿತ್ತು.

ಅಂದಿನ ಅಡ್ವೊಕೇಟ್‌ ಜನರಲ್‌ ಸಲಹೆಯಂತೆ 10 ತಿಂಗಳ ಬಳಿಕ ಸುಪ್ರೀಂ ಕೋರ್ಟ್‌ಗೆ ಸರ್ಕಾರ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಿತ್ತು. ಈ ಮೇಲ್ಮನವಿ ಆಗಸ್ಟ್‌ 9ರಂದು ವಜಾಗೊಂಡಿದೆ.

ಆದರೆ, ಈ ಸಾಲಿನಲ್ಲಿ ಆಯ್ಕೆಯಾಗಿದ್ದ91 ಅಭ್ಯರ್ಥಿಗಳು 2014ನೇ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ.ಉಳಿದ, ಅಭ್ಯರ್ಥಿಗಳು ಕೋರ್ಟ್‌ ಹೋರಾಟದ ಮೂಲಕ 2011ನೇ ಸಾಲಿನ ನೇಮಕಾತಿಯನ್ನು ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅದೀಗ ಹುಸಿಯಾಗಿದೆ.

ಹೊಸ ಅಧಿಸೂಚನೆ: ‘ಈ ಸಾಲಿನ 362 ಹುದ್ದೆಗಳಲ್ಲಿರುವ ಪೈಕಿ ಸಚಿವಾಲಯದ ಶಾಖಾಧಿಕಾರಿ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಗ್ರೂಪ್‌ ‘ಬಿ’ ಹುದ್ದೆಗಳಿಗೆ ಸಂಬಂಧಪಟ್ಟಂತೆ ವೃಂದ ಮತ್ತು ನೇಮಕಾತಿ ನಿಯಮ ಇತ್ತೀಚೆಗೆ ಬದಲಾಗಿದೆ. ಹೀಗಾಗಿ, ಆ ಹುದ್ದೆಗಳನ್ನು ಕೈ ಬಿಟ್ಟು ಮತ್ತು ಹೊಸತಾಗಿ ರಚನೆಯಾದ ತಾಲ್ಲೂಕುಗಳಿಗೆ ಅಗತ್ಯವಾದ ಹುದ್ದೆಗಳನ್ನು ಸೇರಿಸಿ ಸರ್ಕಾರ ನೇಮಕಾತಿ ನಡೆಸಬೇಕು’ ಎಂದು ರಾಜ್ಯ ಪದವೀಧರರ ಸಂಘದ ವಿ. ಲೋಕೇಶ ಮತ್ತು ಪ್ರಕಾಶ್ ಆಗ್ರಹಿಸಿದರು.

‘2011ನೇ ಸಾಲಿನ ಅಧಿಸೂಚನೆಯೇ ರದ್ದುಗೊಂಡಿರುವುದರಿಂದ ಆ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ, ವಯೋಮಿತಿ ಸಡಿಲಿಸಿ ಮತ್ತೊಮ್ಮೆ ಅವಕಾಶ ನೀಡಬೇಕೆಂಬ ಮನವಿ ಕೂಡಾ ಸಚಿವ ಸಂಪುಟದ ಮುಂದಿದೆ. ಹಾಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ನಿಟ್ಟಿನಲ್ಲಿ ಸಕಾರಾತ್ಮವಾಗಿ ಸ್ಪಂದಿಸುವ ನಿರೀಕ್ಷೆ ಇದೆ’ ಎನ್ನಲಾಗಿದೆ.

Post Comments (+)