ಹೊಸ ರಕ್ಷಣಾ ಪಡೆಗೆ ‘ಸ್ತ್ರೀಶಕ್ತಿ’

7
ಕೊಡಗು ಪ್ರವಾಹ ಕಲಿಸಿದ ಪಾಠ * ಸಜ್ಜಾಗುತ್ತಿದೆ ವಿಪತ್ತು ನಿರ್ವಹಣಾ ಪಡೆ

ಹೊಸ ರಕ್ಷಣಾ ಪಡೆಗೆ ‘ಸ್ತ್ರೀಶಕ್ತಿ’

Published:
Updated:
Deccan Herald

ಬೆಂಗಳೂರು: ನೆರೆ, ಭೂಕಂಪ, ಅಗ್ನಿ ಅವಘಡಗಳಂತಹ ವಿಪತ್ತುಗಳು ಎದುರಾದಾಗ ತುರ್ತು ಪರಿಹಾರ ಕಾರ್ಯ ಕೈಗೊಂಡು, ಜನರಿಗೆ ನೆರವು ನೀಡಲು 75 ಮಹಿಳಾ ಪೊಲೀಸರನ್ನು ಒಳಗೊಂಡ ‘ಕೆಎಸ್‌ಆರ್‌ಪಿ ವಿಪತ್ತು ನಿರ್ವಹಣಾ ಪಡೆ’ಯನ್ನು ರಾಜ್ಯದಲ್ಲಿ ಅಣಿಗೊಳಿಸಲಾಗುತ್ತಿದೆ.

ಕೊಡಗಿನ ನೆರೆ ಹಾವಳಿ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮಾದರಿಯಲ್ಲೇ ಈ ರಕ್ಷಣಾ ಪಡೆಯನ್ನು ಆರಂಭಿಸುತ್ತಿದೆ. ಜಲಾಶಯಗಳು, ಅರಣ್ಯ ಪ್ರದೇಶಗಳು ಹಾಗೂ ಗುಡ್ಡಗಾಡುಗಳಲ್ಲಿ ಸಿಬ್ಬಂದಿಗೆ ಈಗಾಗಲೇ ತರಬೇತಿಯೂ ಶುರುವಾಗಿದೆ.

150 ಮಂದಿ ಇರುವ ಈ ಕಾರ್ಯಪಡೆಯಲ್ಲಿ, ಅರ್ಧದಷ್ಟು ಮಹಿಳಾ ಸಿಬ್ಬಂದಿಯೂ ಇರುವುದು ವಿಶೇಷ. ‘ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್’ ವತಿಯಿಂದ ಬೆಂಗಳೂರು, ಬಾಗಲಕೋಟೆ, ಚಿತ್ರದುರ್ಗ, ಮೈಸೂರು ಹಾಗೂ ಮಡಿಕೇರಿಯಲ್ಲಿ ಇವರಿಗೆ ತರಬೇತಿ ಕೊಡಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್, ‘ರಾಜ್ಯದಲ್ಲಿ ವಿಪತ್ತು ಸಂಭವಿಸಿದಾಗ ಎನ್‌ಡಿಆರ್‌ಎಫ್ ಬರುವವರೆಗೂ ಕಾಯಬೇಕಾದ ಸ್ಥಿತಿ ಇದೆ. ತುರ್ತು ಸ್ಪಂದನೆ ವಿಳಂಬವಾದಷ್ಟು ಸಾವು–ನೋವುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ, ತಕ್ಷಣಕ್ಕೇ ಕಾರ್ಯಾಚರಣೆಗೆ ಇಳಿಯಲು ಈ ಪಡೆಯನ್ನು ಸಿದ್ಧಗೊಳಿಸುತ್ತಿದ್ದೇವೆ’ ಎಂದರು.

‘ಸಿಬ್ಬಂದಿ ಹಿರಿಯೂರಿನ ವಾಣಿವಿಲಾಸ ಸಾಗರದ ನೂರು ಅಡಿ ಆಳದ ನೀರಿಗೆ ಧುಮುಕಿ ತರಬೇತಿ ಕೊಟ್ಟಿದ್ದಾರೆ. ಹಾಗೆಯೇ, ಹರಿಯುವ ನೀರಿನಲ್ಲಿ ವಾಟರ್‌ಜೆಟ್‌ಗಳ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಬಾಗಲಕೋಟೆಯ ಗುಡ್ಡದ ರಂಗನಾಥ ಗುಡಿ ಹಾಗೂ ಗೋಲ್ಡನ್‌ ಗರ್ಲ್ಸ್‌ ಏರಿಯಾಗಳಲ್ಲಿ ಶಿಲಾರೋಹಣ (ರಾಕ್‌ ಕ್ಲೈಂಬಿಂಗ್‌) ಸಹ ಮಾಡಿಸಲಾಗಿದೆ. ಇನ್ನು 45 ದಿನಗಳಲ್ಲಿ ಪಡೆ ಸಂಪೂರ್ಣ ಸನ್ನದ್ಧವಾಗಲಿದೆ’ ಎಂದು ಮಾಹಿತಿ ನೀಡಿದರು.

ಶವಾಗಾರಗಳಲ್ಲೂ ತರಗತಿ: ‘ವಿಪತ್ತು ಸಂದರ್ಭದಲ್ಲಿ ಹಲವು ಭೀಕರತೆಗಳ ನಡುವೆ ಕೆಲಸ ಮಾಡಬೇಕಾಗುತ್ತದೆ. ರಕ್ತ ಸೋರುತ್ತಿರುವ, ಕೈ–ಕಾಲು ತುಂಡಾದ ಗಾಯಾಳುಗಳನ್ನು ಎತ್ತಿ ಸಾಗಿಸಬೇಕಾಗುತ್ತದೆ. ಶವಗಳನ್ನು ಹೊತ್ತು ತಿರುಗಬೇಕಾಗುತ್ತದೆ. ಇಂಥ ಸನ್ನಿವೇಶ ಎದುರಿಸಲು ಧೈರ್ಯ ಬೇಕು. ಹೀಗಾಗಿ, ಶವಾಗಾರಗಳಲ್ಲೂ ವಿಶೇಷ ತರಗತಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಕೆಎಸ್‌ಆರ್‌ಪಿಯ ಇನ್ನೊಬ್ಬ ಅಧಿಕಾರಿ ಹೇಳಿದರು.

‘ಈ ವಿಶೇಷ ತರಬೇತಿಗಾಗಿ ಈಗಾಗಲೇ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗಳ ವೈದ್ಯರಿಗೆ ಪತ್ರ ಬರೆದಿದ್ದೇವೆ. ಅವರು ನಮ್ಮ ಸಿಬ್ಬಂದಿಯ ಮುಂದೆಯೇ ಮರಣೋತ್ತರ ಪರೀಕ್ಷೆಗಳನ್ನು ಮಾಡಲಿದ್ದಾರೆ. ಹಾಗೆಯೇ ವಾರಕ್ಕೊಮ್ಮೆ (ನಾಲ್ಕು ವಾರ) ಶವಾಗಾರಗಳಿಗೆ ಕರೆದುಕೊಂಡು ಹೋಗಿ ಮೃತದೇಹಗಳನ್ನು ತೋರಿಸಲಿದ್ದೇವೆ. ಈ ಮೂಲಕ ಆತಂಕ ದೂರ ಮಾಡಲು ನಿರ್ಧರಿಸಿದ್ದೇವೆ’ ಎಂದರು.

ಕೇಂದ್ರಪಡೆಗಳಿಗೂ ನೆರವು

‘ರಾಜ್ಯದಲ್ಲಿ ಪ್ರತ್ಯೇಕ ಪಡೆ ರಚನೆಯಾಗುತ್ತಿರುವ ಬಗ್ಗೆ ಕೇಂದ್ರದ ಎಲ್ಲ ರಕ್ಷಣಾ ಪಡೆಗಳಿಗೂ ಮಾಹಿತಿ ನೀಡಲಾಗಿದೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಧಿಕಾರಿಗಳು, ‘ಬೇರೆ ರಾಜ್ಯಗಳಿಗೆ ಕಾರ್ಯಾಚರಣೆಗೆ ಹೋಗುವಾಗ, ಅಗತ್ಯ ಬಿದ್ದರೆ ನಾವೂ ನಿಮ್ಮ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯೆಗಳನ್ನು ಕಳುಹಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

* ಎನ್‌ಡಿಆರ್‌ಎಫ್‌ನಲ್ಲಿ ಸದ್ಯ ಮಹಿಳಾ ಸಿಬ್ಬಂದಿ ಇಲ್ಲ. ಹೀಗಾಗಿ, ನಾವು ಮಹಿಳಾ ಸಿಬ್ಬಂದಿಯನ್ನೂ ಅಣಿಗೊಳಿಸುತ್ತಿದ್ದೇವೆ
- ಭಾಸ್ಕರ್‌ ರಾವ್, ಎಡಿಜಿಪಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !