ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂಕೋರ್ಟ್‌ ತೀರ್ಪು ಪೂರ್ವಗ್ರಹ’

Last Updated 4 ಏಪ್ರಿಲ್ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಮಾತ್ರ ಅರ್ಜಿದಾರರು ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಇಡೀ ಕಾಯ್ದೆಯನ್ನೇ ಮರುರಚಿಸುವ ತೀರ್ಪು ನೀಡಿದೆ’ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ದೂರಿದರು.

ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವುದನ್ನು ವಿರೋಧಿಸಿದ್ದಕ್ಕಾಗಿ 9 ದಲಿತರನ್ನು ಹತ್ಯೆಗೈದಿದ್ದನ್ನು ಖಂಡಿಸಿ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ ವತಿಯಿಂದ ಪುರಭವನ ಎದುರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.

‘ಕಾಯ್ದೆ ಮರುರಚಿಸುವ ಬಗ್ಗೆ ಯಾರೊಬ್ಬರೂ ಸುಪ್ರೀಂ ಕೋರ್ಟ್‌ ಕೇಳಿರಲಿಲ್ಲ. ಈ ತೀರ್ಪು ಪೂರ್ವಗ್ರಹ ಪೀಡಿತವಾಗಿದೆ. ಅ‌ರ್ಜಿದಾರರು ಕೇಳಿದ್ದೊಂದು, ಸುಪ್ರೀಂ ಆದೇಶಿಸಿದ್ದೊಂದು ಎಂಬಂತಾಗಿದೆ’ ಎಂದು ದೂರಿದರು.

‘ಇದೇ ಪ್ರಕರಣ ಸಂಬಂಧ ಸುಪ್ರೀಂ, ಅಟಾರ್ನಿ ಜನರಲ್‌ಗೆ ನೋಟಿಸ್‌ ನೀಡಿತ್ತು. ದಲಿತರು ಹಾಗೂ ಆದಿವಾಸಿಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಬಗ್ಗೆ ಅವರು ನ್ಯಾಯಾಲಯಕ್ಕೆ ತಿಳಿಸಬಹುದಿತ್ತು. ಆ ಕೆಲಸಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಅಡ್ಡಿಪಡಿಸಿದೆ. ಹೀಗಾಗಿಯೇ ದಲಿತ ವಿರೋಧಿ ತೀರ್ಪು ಬಂದಿದೆ’ ಎಂದು ಹೇಳಿದರು.

‘ಬಿ.ಆರ್. ಅಂಬೇಡ್ಕರ್‌ ಅವರ ಆದರ್ಶಗಳನ್ನು ಪಾಲಿಸುತ್ತೇವೆ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಅಂಥ ಆದರ್ಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದಲಿತ ನಾಯಕರ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಜಾಗೃತರಾಗಬೇಕಿದೆ’ ಎಂದು ಅವರು ಹೇಳಿದರು.

ನಿಮಿಷಕ್ಕೆ 15 ಪ್ರಕರಣ: ‘ದೇಶದಲ್ಲಿ ನಿಮಿಷಕ್ಕೆ 15 ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಆ ‍ಪೈಕಿ ಶೇಕಡ 3ರಿಂದ 8ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್‌, ಅಸಂವಿಧಾನಿಕವಾಗಿ ತೀರ್ಪು ನೀಡಿದೆ’ ಎಂದು ಮೇವಾನಿ ದೂರಿದರು.

‘ನಂದಿತ್‌ ಕುಮಾರ್‌ ವರ್ಸಸ್‌ ಬಿಹಾರ ರಾಜ್ಯ ಪ್ರಕರಣದಲ್ಲಿ ಸುಪ್ರೀಂ, ‘ದಲಿತರ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಹೇಳಿಕೆ ಆಧರಿಸಿ ಮೊದಲಿಗೆ ಎಫ್‌ಐಆರ್‌ ದಾಖಲಿಸಿ
ಕೊಳ್ಳಬೇಕು’ ಎಂದು ತೀರ್ಪು ನೀಡಿತ್ತು. 

ಅದೇ ಸುಪ್ರೀಂ ಕೋರ್ಟ್‌ ಈಗ, ‘ಸಂತ್ರಸ್ತರು ದೂರು ಕೊಟ್ಟ ತಕ್ಷಣ ಎಫ್‌ಐಆರ್‌ ದಾಖಲಿಸಿಕೊಳ್ಳಬಾರದು. ಎಸ್ಪಿ ವಿಚಾರಣೆ ಮಾಡಿದ ಬಳಿಕ, ದೂರಿನಲ್ಲಿ ಸತ್ಯವಿದ್ದರೆ ಮಾತ್ರ  ದಾಖಲಿಸಿಕೊಳ್ಳಬೇಕು’ ಎಂದಿದೆ. ಒಂದೇ ನ್ಯಾಯಾಲಯ, ಎರಡು ರೀತಿ ತೀರ್ಪು ನೀಡುವುದು ಹೇಗೆ’ ಎಂದು ಪ್ರಶ್ನಿಸಿದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್, ‘ಸಂವಿಧಾನ ಬದಲಾವಣೆಯ ಮೊದಲ ಹೆಜ್ಜೆ ಈ ತೀರ್ಪು. ಇದನ್ನು ನಾವೆಲ್ಲರೂ ತಿರಸ್ಕರಿಸಬೇಕು. ಅಂಬೇಡ್ಕರ್‌ ರಚಿಸಿರುವ ರಥವನ್ನು ಒಗ್ಗಟ್ಟಾಗಿ ಎಳೆಯಬೇಕಿದೆ’ ಎಂದರು.

ಮೇವಾನಿ ಪ್ರವಾಸ
ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿರುವ ಜಿಗ್ನೇಶ್ ಮೇವಾನಿ, ಏ. 5ರಂದು ಬೆಳಿಗ್ಗೆ 10.30ಕ್ಕೆ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 6.30ಕ್ಕೆ ಶಿವಮೊಗ್ಗದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಏ. 6ರಂದು ಬೆಳಿಗ್ಗೆ ಚಿತ್ರದುರ್ಗ ಹಾಗೂ ಸಂಜೆ ಗಂಗಾವತಿಗೆ ಹೋಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT