ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಂಕಿಗೆ ಕುಸಿತ: ಕಾಂಗ್ರೆಸ್‌ಗೆ ಎಚ್ಚರಿಕೆ

ಹುಬ್ಬಳ್ಳಿಯಲ್ಲಿ ನಡೆದ ರೋಡ್‌ ಷೋನಲ್ಲಿ ಅಮಿತ್‌ ಶಾ ತೀವ್ರ ವಾಗ್ದಾಳಿ
Last Updated 12 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಧಾರವಾಡ: ‘ಧರ್ಮ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿದರೆ, ಸದ್ಯ 48 ಸಂಸದರನ್ನು ಹೊಂದಿರುವ ಕಾಂಗ್ರೆಸ್‌ ನಾಲ್ಕು ಸ್ಥಾನಕ್ಕೆ ಕುಸಿಯುವ ದಿನ ದೂರವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಇಲ್ಲಿ ಎಚ್ಚರಿಸಿದರು.

ಸಂಸತ್ತಿನ ಸುಗಮ ಕಲಾಪಕ್ಕೆ ಕಾಂಗ್ರೆಸ್‌ ಅವಕಾಶ ನೀಡದಿರುವುದನ್ನು ಖಂಡಿಸಿ ಬಿಜೆಪಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಗುಜರಾತ್, ಮಹಾರಾಷ್ಟ್ರ, ಹರಿ
ಯಾಣ ಮತ್ತು ಕರ್ನಾಟಕದಲ್ಲಿ ಧರ್ಮ ಹಾಗೂ ಜಾತಿಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇವರ ತಂತ್ರದ ಅರಿವು ಜನರಿಗಿದೆ. ಹೀಗಾಗಿ, ಜನರ ಬಳಿಯೇ ತೆರಳಿ ಅವರಿಗೆ ನೈಜ ಮಾಹಿತಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಪ್ರಜಾಪ್ರಭುತ್ವವನ್ನು ನೆಹರೂ ಕುಟುಂಬ ತಮ್ಮ ಮನೆಯೊಳಗೆ ಬಂಧಿಸಿಟ್ಟಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ನಂತರ ಇನ್ನು ಯಾವ ಗಾಂಧಿ ಬರುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಉಳಿಯುವುದು ಪುದುಚೇರಿ ಮಾತ್ರ: ‘ದೇಶದಾದ್ಯಂತ ನಾವು ಒಂದೊಂದೇ ರಾಜ್ಯವನ್ನು ಗೆಲ್ಲುತ್ತಾ ಬರುತ್ತಿದ್ದೇವೆ. ಇನ್ನು 30 ದಿನಗಳಲ್ಲಿ ಕರ್ನಾಟಕವೂ ಕಾಂಗ್ರೆಸ್‌ ಮುಕ್ತವಾಗಲಿದೆ. ಆ ಪಕ್ಷಕ್ಕೆ ಪುದುಚೇರಿಯೊಂದೇ ಉಳಿಯಲಿದೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಂಗ್ರೆಸ್‌ನ ಎಟಿಎಂ ಯಂತ್ರವಿದ್ದಂತೆ. ಕೊನೆಯ ಸರ್ಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರಾಹುಲ್‌ ಬಾಬಾ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ’ ಎಂದು ಟೀಕಿಸಿದರು.

‘ರೋಡ್‌ ಷೋಗೆ ಸಾವಿರಾರು ಜನ ಸೇರಿದ್ದೀರಿ. ನೀವೆಲ್ಲ ನಿಮ್ಮ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಬೇಕು. 7 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 5 ಕೋಟಿ ಜನ ಬಿಜೆಪಿಗೆ ಮತ ಹಾಕುವಂತೆ ಮಾಡಬೇಕು. ಆದಾಗ ಮಾತ್ರ ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗುತ್ತದೆ’ ಎಂದು ಹೇಳಿದರು.

ಮಠ–ಮಂದಿರ ಪ್ರದಕ್ಷಿಣೆ ಹಾಕಿದ ಶಾ

ಹುಬ್ಬಳ್ಳಿ: ಮುಂಬೈ ಕರ್ನಾಟಕ ಭಾಗದಲ್ಲಿ ಎರಡನೇ ಹಂತದ ಪ್ರಚಾರವನ್ನು ಗುರುವಾರ ಆರಂಭಿಸಿದ ಅಮಿತ್‌ ಶಾ ವಿವಿಧ ಮಠಗಳು, ದೇವಸ್ಥಾನಗಳಿಗೆ ಭೇಟಿ ನೀಡಿದರು.

ನಗರದಲ್ಲಿರುವ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟು, ಸಿದ್ಧಾರೂಢರ, ಗುರುನಾಥರೂಢರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದ ಪದಾಧಿಕಾರಿಗಳು, ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಬೇಕು ಎನ್ನುವ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸುವ ಭರವಸೆಯನ್ನು ಅವರು ನೀಡಿದರು.

ನಂತರ ಧಾರವಾಡಕ್ಕೆ ತೆರಳಿದ ಅವರು, ಅಲ್ಲಿಯ ಮುರುಘಾ ಮಠಕ್ಕೆ ಭೇಟಿ ನೀಡಿ, ಮಹಾಂತಪ್ಪ, ಮೃತ್ಯುಂಜಯಪ್ಪ, ಶಿವಯೋಗಿ ಮಹಾಂತ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಶಾ ಅವರಿಗೆ ‘ಲಿಂಗಾಯತ್ಸ್‌ ಆರ್‌ ನಾಟ್‌ ಹಿಂದೂಸ್’ ಪುಸ್ತಕವನ್ನು ಕೊಟ್ಟು ಸನ್ಮಾನಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಸ್ವಾಮೀಜಿ ಸಲ್ಲಿಸಿದ ಮನವಿಗೆ, ಈ ನಿಟ್ಟಿನಲ್ಲಿ ಕೈಲಾಗುವ ಪ್ರಯತ್ನ ಮಾಡುವುದಾಗಿ ಶಾ ಭರವಸೆ ನೀಡಿದರು. ವರಕವಿ ದ.ರಾ.ಬೇಂದ್ರೆ ಅವರಿದ್ದ ನಿವಾಸ ಹಾಗೂ ಬೇಂದ್ರೆ ಭವನಕ್ಕೆ ಭೇಟಿ ನೀಡಿದರು.

ಅಲ್ಲಿಂದ ಗದುಗಿಗೆ ತೆರಳಿದ ಅವರು, ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಭೇಟಿ ನೀಡಿದರು. ನಂತರ ವೀರ ನಾರಾಯಣ ದೇವಸ್ಥಾನ ಹಾಗೂ ಕವಿ ಕುಮಾರವ್ಯಾಸ ಸನ್ನಿಧಿಗೂ ತೆರಳಿದ್ದರು.

ಸಂಜೆ ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠಕ್ಕೆ ಭೇಟಿ ನೀಡಿ, ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರಿಂದ ಆಶೀರ್ವಾದ ಪ‍ಡೆದರು.

ಸುಟ್ಟಿರುವ ಟ್ರಾನ್ಸ್‌ಫಾರ್ಮರ್ ಕಿತ್ತೊಗೆಯಿರಿ: ಶಾ

ಗದಗ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿದ್ಯುತ್‌ ಸ್ಥಾವರ ಇದ್ದಂತೆ. ಅಲ್ಲಿಂದ ರಾಜ್ಯಕ್ಕೆ ವಿದ್ಯುತ್‌ ಪೂರೈಸಲಾಗಿದೆ. ಆದರೆ, ಇಲ್ಲಿನ ಸಿದ್ದರಾಮಯ್ಯ ಸರ್ಕಾರ ಎಂಬ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ಸುಟ್ಟು ಹೋಗಿದೆ. ಈ ಟ್ರಾನ್ಸ್‌ಫಾರ್ಮರ್‌ ಕಿತ್ತೊಗೆದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ’ ಎಂದು ಅಮಿತ್‌ ಶಾ ಹೇಳಿದರು.

ಕರುನಾಡ ಜಾಗೃತಿ ಯಾತ್ರೆ ಅಂಗವಾಗಿ ಗುರುವಾರ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೆರೆ ಗ್ರಾಮದಲ್ಲಿ ನಡೆದ ಮುಷ್ಟಿ ಧಾನ್ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಾವರಿ ಯೋಜನೆಗಾಗಿ ಕೇಂದ್ರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ಎಷ್ಟು ಪರ್ಸೆಂಟೇಜ್‌ ಪಡೆಯಬೇಕು ಎನ್ನುವುದು ತೀರ್ಮಾನವಾಗದ ಕಾರಣ ಇದರ ಪ್ರಯೋಜನ ರೈತರಿಗೆ ಲಭಿಸಿಲ್ಲ. ಸಿದ್ದರಾಮಯ್ಯ ಅವರೇ ನೀವು ಮನೆಗೆ ಹೋಗುವ ಸಮಯ ಸನ್ನಿಹಿತವಾಗಿದೆ’ ಎಂದು ಶಾ ವಾಗ್ದಾಳಿ ನಡೆಸಿದರು.

ಅಬ್ಬಿಗೆರೆ ಗ್ರಾಮದ ದೇವಮ್ಮ ಬಾಚಲಾಪುರ ಮತ್ತು ಸಾವಿತ್ರಮ್ಮ ಅವರಿಂದ ಐದು ಮುಷ್ಟಿ ಅಕ್ಕಿಯನ್ನು ಜೋಳಿಗೆಗೆ ಹಾಕಿಸಿಕೊಂಡ ಅವರು, ‘ಈ ಅಕ್ಕಿಯಿಂದ ಅನ್ನಮಾಡಿ, ಅದನ್ನು ಪ್ರಸಾದದಂತೆ ಸ್ವೀಕರಿಸುತ್ತೇವೆ. ಮಾಧ್ಯಮದವರಿಗೆ ಹಾಗೂ ಕಾಂಗ್ರೆಸ್‌ನವರಿಗೆ ಇದು ಪ್ರಚಾರ ತಂತ್ರದಂತೆ ಕಾಣುತ್ತದೆ. ಇದು ನಮ್ಮ ರಕ್ತದಲ್ಲಿ ಸೇರುತ್ತದೆ. ರೈತನ ಅನ್ನದ ಋಣವನ್ನು ತೀರಿಸಲು ಸಂಕಲ್ಪ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT