ಶನಿವಾರ, ಜನವರಿ 18, 2020
27 °C

ಸಿಎಎ ಬಗ್ಗೆ ಮುಸ್ಲಿಮರು ಹೆದರಬೇಕಿಲ್ಲ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಮುಸ್ಲಿಮರು ಹೆದರಬೇಕಿಲ್ಲ. ಅದರಿಂದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಭಾನುವಾರ ನಗರದಲ್ಲಿ ಸಿಎಎ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಿದ್ದಾಗ ಸಂಸತ್ತಿನಲ್ಲಿ ಈ ಕಾಯ್ದೆಯ ಪ್ರಸ್ತಾವ ಇಟ್ಟಿದ್ದರು. ಆದರೆ, ಈಗ ಕಾಂಗ್ರೆಸ್ಸಿನವರೇ ವಿರೋಧಿಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ದಿಕ್ಕು ತಪ್ಪಿಸಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಮಾಯಕರ ದಿಕ್ಕು ತಪ್ಪಿಸಿ ಪೊಲೀಸರು, ಸೈನಿಕರ ಮೇಲೆ ಕಲ್ಲು ಹೊಡೆಸುವ ಕೆಲಸ ಕಾಂಗ್ರೆಸ್‌ನವರು ಮಾಡಿಸುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಗೆ ಇದೇ ಕುತಂತ್ರ ಮಾಡುತ್ತಿದ್ದಾರೆ. ಅವರ ಕುತಂತ್ರಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕಾಂಗ್ರೆಸ್‌ನವರು ಅವರ ಅಸ್ತಿತ್ವ ಉಳಿಸಿಕೊಳ್ಳಲು ಜನರಿಗೆ ಪ್ರಚೋದಿಸುತ್ತಿದ್ದಾರೆ’ ಎಂದರು.

ಇದನ್ನೂ ಓದಿ: ಸಿಎಎ ವಿರೋಧಿ ಗಲಭೆಗೆ ರಾಹುಲ್, ಪ್ರಿಯಾಂಕಾ ಪ್ರಚೋದನೆ: ಅಮಿತ್ ಶಾ ಆರೋಪ

‘ದೇಶದ ಆರ್ಥಿಕ ಸ್ಥಿತಿ ಸದ್ಯ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಆದರೆ, ಅದು ಕ್ಷಣಿಕ ಮಾತ್ರ. ಕಪ್ಪು ಹಣ, ಖೋಟಾ ನೋಟು ತಡೆಯುವ ಉದ್ದೇಶದಿಂದ ನೋಟು ರದ್ದತಿ ಮಾಡಲಾಗಿತ್ತು. ಆರ್ಥಿಕ ಸ್ಥಿತಿ ಸುಭದ್ರಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲವೂ ಬರುವ ದಿನಗಳಲ್ಲಿ ಸುಧಾರಿಸಲಿದೆ’ ಎಂದು ಭವಿಷ್ಯ ನುಡಿದರು.

‘ಕಾಂಗ್ರೆಸ್‌ ಟೀಕಿಸಲು ಹೋಗಿ ರೆಡ್ಡಿ ಆವೇಶದ ಮಾತು’

‘ಸಿಎಎ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು ಹೋಗಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು, ‘ಹಿಂದೂಗಳನ್ನು ಕೆಣಕಿದರೆ ಸುಮ್ಮನಿರಲ್ಲ’ ಎಂದು ಆವೇಶದಿಂದ ಮಾತಾಡಿದ್ದಾರೆಯೇ ಹೊರತು ಯಾವುದೇ ದುರುದ್ದೇಶವಿರಲಿಲ್ಲ’ ಎಂದು ಲಕ್ಷ್ಮಣ ಸವದಿ ಹೇಳಿದರು.

‘ರೆಡ್ಡಿ ಹೇಳಿಕೆಯನ್ನು ಸಮರ್ಥಿಸುವುದು ಅಥವಾ ವಿರೋಧಿಸುವ ಪ್ರಶ್ನೆಯಿಲ್ಲ. ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಪ್ರಚೋದನಕಾರಿ ಭಾಷಣ ಮಾಡಿದ್ದರ ಬಗ್ಗೆ ಕಾಂಗ್ರೆಸ್‌ನವರೇಕೇ ಮಾತನಾಡುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

ಸೋಮಶೇಖರ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

‘ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಮಾತನಾಡಿರುವ ಶಾಸಕ ಜಿ. ಸೋಮಶೇಖರ ರೆಡ್ಡಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ತಕ್ಷಣವೇ ಅವರನ್ನು ಬಂಧಿಸಬೇಕು’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ರಾಜ್ಯಸಭೆ ಸದಸ್ಯ ನಾಸೀರ್‌ ಹುಸೇನ್‌, ವಿಧಾನ ಪರಿಷತ್‌ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಮಾಜಿಶಾಸಕರಾದ ಸೂರ್ಯನಾರಾಯಣ ರೆಡ್ಡಿ, ಆಂಜನೇಯಲು ಭಾನುವಾರ ಬಳ್ಳಾರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು