ಜಂಗಮೇತರ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ

7
ಶಿವಯೋಗ ಮಂದಿರಕ್ಕೆ ಪರ್ಯಾಯ : ಕನ್ಹೇರಿ ಮಠದಲ್ಲಿ ಸಮಾವೇಶ

ಜಂಗಮೇತರ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ

Published:
Updated:
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಬೆಳಗಾವಿ: ‘ಬಾದಾಮಿಯ ಶಿವಯೋಗ ಮಂದಿರದಲ್ಲಿ ಜಂಗಮರಿಗೆ ಮಾತ್ರ ಅವಕಾಶ ಕೊಡಲಾಗುತ್ತಿದೆ. ಹೀಗಾಗಿ, ಇದಕ್ಕೆ ಪರ್ಯಾಯವಾಗಿ ಸಹೃದಯಿ ಮಠಾಧಿಪತಿಗಳ ಒಕ್ಕೂಟ ಅಸ್ತಿತ್ವಕ್ಕೆ ತರಲಾಗಿದೆ’ ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಸಿದ್ಧಗಿರಿ (ಕನ್ಹೇರಿ) ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

‘ಒಕ್ಕೂಟದಲ್ಲಿ 50 ಮಹಿಳಾ ಮಠಾಧಿಪತಿಗಳೂ ಸೇರಿದಂತೆ ವಿವಿಧ ಜಾತಿಗಳ 400ಕ್ಕೂ ಹೆಚ್ಚು ಪೀಠಾಧಿಪತಿಗಳಿದ್ದಾರೆ. ಈ ಬಗ್ಗೆ ತಿಳಿಸಲು  ಜುಲೈ 10 ಹಾಗೂ 11ರಂದು ಕನ್ಹೇರಿ ಮಠದಲ್ಲಿ ಭಕ್ತರ ಸಮಾವೇಶ ಆಯೋಜಿಸಲಾಗಿದೆ. 300ಕ್ಕೂ ಹೆಚ್ಚು ಶ್ರೀಗಳು ಹಾಗೂ 10 ಸಾವಿರ ಭಕ್ತರು ಭಾಗವಹಿಸಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ವಿವರಿಸಿದರು.

‘ಒಕ್ಕೂಟದಲ್ಲಿ ಸಿದ್ಧಾರೂಢ ಸಂಪ್ರದಾಯ, ಮುಗಳಖೋಡ, ಇಂಚಗೇರಿ ಸಂಪ್ರದಾಯದ ಮಠಾಧೀಶರು, ಹಡಪದ ಅಪ್ಪಣ್ಣ ಮೊದಲಾದ ಸಮಾಜದ ಮಠಾಧಿಪತಿಗಳು ಇದ್ದಾರೆ. ಒಕ್ಕೂಟದಿಂದ ಗುರುಕುಲ ಸ್ಥಾಪಿಸಲಾಗುವುದು. ಎಲ್ಲ ಜಾತಿ, ಪಂಥದ ವಟುಗಳಿಗೂ ಲಿಂಗಾಯತ ಪಂಥ ಹಾಗೂ ಅದ್ವೈತ ವೇದಾಂತ ಸಿದ್ಧಾಂತದ ಬಗ್ಗೆ ಕಲಿಸಲಾಗುವುದು. ದೀಕ್ಷೆ, ಸಾಮಾಜಿಕ ಕಾರ್ಯ, ಸಾವಯವ ಕೃಷಿ, ಗೋವುಗಳ ಸಂರಕ್ಷಣೆ, ಪೋಷಣೆ ಮತ್ತು ಅರ್ಚಕರ ತರಬೇತಿ ನೀಡಲಾಗುವುದು’ ಎಂದರು.

ಶಿವಯೋಗ ಮಂದಿರ ವಿರುದ್ಧ ಕಿಡಿ: ‘ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದ ಶ್ರೀಗಳೆಷ್ಟು, ಅದರಲ್ಲಿ ಜಂಗಮೇತರರೆಷ್ಟು, ಎಷ್ಟು ಮಂದಿ ಜಂಗಮೇತರರನ್ನು ವಿರಕ್ತ ಹಾಗೂ ಹಿರೇಮಠಗಳಿಗೆ ನೇಮಿಸಲಾಗಿದೆ ಎನ್ನುವುದನ್ನು ಮಂದಿರದ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ 2017ರ ಫೆಬ್ರುವರಿಯಲ್ಲಿ ನಡೆದ ಸ್ವಾಮೀಜಿಗಳ ಸಭೆಯಲ್ಲಿ ತೆಗೆದುಕೊಂಡ 11 ನಿರ್ಣಯಗಳು, ಶಿವಯೋಗ ಮಂದಿರದ ಬೈಲಾ (ಉಪವಿಧಿ) ಏನು ಎಂಬುದನ್ನು ಬಹಿರಂಗಪಡಿಸಬೇಕು. ಅದರಲ್ಲಿ ವಿದ್ಯಾರ್ಜನೆಗಿರುವ ಅವಕಾಶಗಳನ್ನು ಸಮಾಜಕ್ಕೆ ತಿಳಿಸಬೇಕು. ಮಂದಿರದಲ್ಲಿ 2 ವರ್ಷ ಅಧ್ಯಕ್ಷರಾಗಿದ್ದ ನಾಗನೂರ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರನ್ನು ಪದವಿಯಿಂದ ತೆಗೆದಿದ್ದಕ್ಕೆ ಕಾರಣ ತಿಳಿಸಬೇಕು’ ಎಂದರು.

ಲಿಂಗಾಯತ ಧರ್ಮ: ರಾಜಕೀಯ ಉದ್ದೇಶ

‘ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ನೀಡಬೇಕು ಎನ್ನುವುದು ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ. ಜಾಮದಾರ ಮತ್ತು ಕೆಲವು ಸ್ವಾಮೀಜಿಗಳ ರಾಜಕೀಯ ಉದ್ದೇಶದ ಬೇಡಿಕೆಯಾಗಿದೆ. ಇದರಿಂದ ಸಮಾಜಕ್ಕೆ ಪ್ರಯೋಜನ ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ನಾವೆಲ್ಲರೂ ಹಿಂದೂ ಧರ್ಮವನ್ನೇ ಅನುಸರಿಸಬೇಕು. ಸ್ವತಂತ್ರ ಧರ್ಮ ಬೇಕು ಎನ್ನುವವರು ಗೊಂದಲದಲ್ಲಿದ್ದಾರೆ. ಬಸವಣ್ಣ ಹಿಂದೂ ಧರ್ಮದಿಂದ ಹೊರಬಂದಿರಲೇ ಇಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದರು.

**

ಒಕ್ಕೂಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ನಿರ್ಧಾರಕ್ಕೆ ಕಾರಣವೇನು ಎನ್ನುವುದು ಸಮಾಜದಲ್ಲಿ ಚರ್ಚೆಯಾಗಲಿ
- ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕನ್ಹೇರಿ ಮಠ ‌

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !