ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಮತ್ತೆ ಸಭೆ, ದೇವೇಗೌಡ ಜೊತೆ ಚರ್ಚೆ: ದಿನೇಶ್‌ ಗುಂಡೂರಾವ್

ಲೋಕಸಭೆ ಚುನಾವಣೆ
Last Updated 21 ಫೆಬ್ರುವರಿ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಹಂಚಿಕೆ ಸಂಬಂಧಿಸಿದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿದ ದಿನೇಶ್‌, ಒಂದೂಕಾಲು ಗಂಟೆ ಮಾತುಕತೆ ನಡೆಸಿದರು. ಆದರೆ, ಸೀಟು ಹಂಚಿಕೆ ವಿಷಯದಲ್ಲಿ ಉಭಯ ನಾಯಕರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಬಳಿಕ ಮಾತನಾಡಿದ ದಿನೇಶ್, ‘ಯಾರಿಗೆ ಎಷ್ಟು ಸೀಟು ಎಂಬ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಶೀಘ್ರದಲ್ಲೇ ಮತ್ತೆ ಸಭೆ ನಡೆಸುವಂತೆ ದೇವೇಗೌಡರು ಸಲಹೆ ನೀಡಿದ್ದಾರೆ. 2–3 ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರು ಮಾತುಕತೆ ನಡೆಸುತ್ತೇವೆ. ಆ ಬಳಿಕ ಹೈಕಮಾಂಡ್‌ಗೆ ಮಾಹಿತಿ ಸಲ್ಲಿಸುತ್ತೇವೆ’ ಎಂದರು.

‘ಪಕ್ಷದ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟು ಕೊಡಬಾರದು ಎಂಬ ಬಗ್ಗೆ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ಆಗಿತ್ತು. ಅದು ನಮ್ಮ ಪಕ್ಷದ ನಿರ್ಧಾರ. ಹಾಸನ, ಮಂಡ್ಯ ಕ್ಷೇತ್ರಗಳ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದರು.

ಅದಕ್ಕೂ ಮೊದಲು ದೇವೇಗೌಡ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‍ ಜತೆ ಸೀಟು ಹೊಂದಾಣಿಕೆ, ಚುನಾವಣಾ ಸಿದ್ಧತೆ ಮತ್ತು ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ಮೈತ್ರಿ ಆಗದ್ದರೆ ಸೌಹಾರ್ದಯುತ ಸ್ಪರ್ಧೆ ಬಗ್ಗೆ ಜೆಡಿಎಸ್‌ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಬೆಂಗಳೂರು ಉತ್ತರ, ಬೀದರ್ ಸೇರಿದಂತೆ ಜೆಡಿಎಸ್ ಸ್ಪರ್ಧಿಸಲು ಬಯಸಿರುವ ಕ್ಷೇತ್ರಗಳ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳುತಿಳಿಸಿವೆ. ನಿಗಮ-ಮಂಡಳಿ, ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿಗಳ ನೇಮಕದ ಬಗ್ಗೆಯೂ ದೇವೇಗೌಡರ ಜೊತೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಸೀಟು ಹಂಚಿಕೆ ಸಂದರ್ಭದಲ್ಲಿ ನಮ್ಮನ್ನು ಭಿಕ್ಷುಕರಂತೆ ಪರಿಗಣಿಸಬೇಡಿ, ಗೌರವಯುತವಾಗಿ ನೋಡಿ ಎಂದು ಅಂದಿದ್ದೆ ಅಷ್ಟೇ. ಸಮನ್ವಯ ಸಾಧಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದೆ. ಯಾರನ್ನೂ ಬೊಟ್ಟು ಮಾಡಿ ಈ ಮಾತು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಅಂಬರೀಷ್‌ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, ‘ನನಗೂ ಅದಕ್ಕೂ ಸಂಬಂಧ ಇಲ್ಲ. ಸ್ಪರ್ಧಿಸಲು ಎಲ್ಲರೂ ಸ್ವತಂತ್ರರು’ ಎಂದರು.

ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಹಾಲಿ ಪ್ರತಿನಿಧಿಸುತ್ತಿರುವ 10 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇರಾದೆಯನ್ನು ಕಾಂಗ್ರೆಸ್‌ ಹೊಂದಿದೆ.‌ ಆದರೆ, ಕಾಂಗ್ರೆಸ್‌ ಸಂಸದರಿರುವ ಒಂದೆರಡು ಕ್ಷೇತ್ರಗಳನ್ನು ಬಿಡುವಂತೆ ಜೆಡಿಎಸ್‌ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ, ಎರಡೂ ಪಕ್ಷಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

**

ಸೀಟು ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ.‌ 3–4 ದಿನಗಳಲ್ಲಿ ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

**

ಶೀಘ್ರ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಲು ದೇವೇಗೌಡರು ಸೂಚಿಸಿದ್ದಾರೆ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾ‌ನ ತೆಗೆದುಕೊಳ್ಳಲಿದೆ
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT