ದಸರಾ ಉತ್ಸವ: ಗಾಜಿನ ಮನೆಯಲ್ಲಿ ಲೋಟಸ್ ಮಹಲ್

7
ಎರಡನೇ ದಿನ ವೈವಿಧ್ಯಮಯ ಕಾರ್ಯಕ್ರಮ l ಸುಡುಬಿಸಿಲಿಗೂ ಕುಗ್ಗದ ಜನರ ಉತ್ಸಾಹ

ದಸರಾ ಉತ್ಸವ: ಗಾಜಿನ ಮನೆಯಲ್ಲಿ ಲೋಟಸ್ ಮಹಲ್

Published:
Updated:

ಮೈಸೂರು: ಅರಮನೆ ನಗರಿಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿದವು. ಒಂದೆಡೆ ಐತಿಹಾಸಿಕ ಮಹತ್ವ ಸಾರುವ ಕಟ್ಟಡಗಳ ದರ್ಶನಕ್ಕೆ ‘ಪಾರಂಪರಿಕ ನಡಿಗೆ’ ಹಮ್ಮಿಕೊಂಡಿದ್ದರೆ, ಮತ್ತೊಂದೆಡೆ ರಂಗೋಲಿಯ ಸೊಬಗು ಮೇಳೈಸಿತ್ತು.

ದಸರಾ ಮಹೋತ್ಸವದ ಎರಡನೇ ದಿನ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸುಡುಬಿಸಿಲು ಅಡ್ಡಿಯಾದರೂ ಜನರ ಉತ್ಸಾಹಕ್ಕೆ ಕೊರತೆ ಇರಲಿಲ್ಲ.

ಪುರಭವನದಿಂದ ಆರಂಭಗೊಂಡ ನಡಿಗೆಯಲ್ಲಿ ಜನರು ಸಾಂಪ್ರದಾಯಿಕ ಉಡುಪು ಧರಿಸಿ ಭಾಗವಹಿಸಿದ್ದರು. ಪ್ರಮುಖ ರಸ್ತೆಗಳಲ್ಲಿ
ಸಾಗಿ ಪಾರಂಪರಿಕ ಕಟ್ಟಡ ವೀಕ್ಷಿಸಿ, ರಕ್ಷಣೆಗೆ ಜಾಗೃತಿ ಮೂಡಿಸಿದರು.

ವಿಶ್ವಪ್ರಸಿದ್ಧ ಅರಮನೆ ಎದುರು ಮಹಿಳೆಯರು ರಂಗೋಲಿಯ ಚಿತ್ತಾರ ಮೂಡಿಸಿದರು. ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ನಟಿ, ಸಚಿವೆ ಜಯಮಾಲಾ ಸಹ ರಂಗೋಲಿ ಬಿಡಿಸಿ ಹುರುಪು ತುಂಬಿದರು.

ಜನ ದಾಂಗುಡಿ: ಗಾಜಿನ ಮನೆಯಲ್ಲಿ ನಾಲ್ಕು ಲಕ್ಷ ಗುಲಾಬಿ ಹೂಗಳಿಂದ ನಿರ್ಮಿಸಿರುವ ಲೋಟಸ್‌ ಮಹಲ್‌ಗೆ ಪ್ರವಾಸಿಗರು ಮಾರು ಹೋಗಿದ್ದಾರೆ. ಒಂದು ಲಕ್ಷ ಸೇವಂತಿ ಬಳಸಿ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರ, 22 ಸಾವಿರ ಗುಲಾಬಿ ಹೂಗಳಿಂದ ಅಮರ್‌ ಜವಾನ್‌ ಕಲಾಕೃತಿ ನಿರ್ಮಿಸಲಾಗಿದೆ. ಫಲಪುಷ್ಪ ಪ್ರದರ್ಶನದೊಂದಿಗೆ ಚಿಣ್ಣರಿಗಾಗಿ ನಿರ್ಮಿಸಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌, ಸಂಗೀತ ಕಾರಂಜಿ ಪ್ರವಾಸಿಗರನ್ನು ಸೆಳೆಯುತ್ತಿವೆ.

ಮಹಿಳೆಯರ ಕೌಶಲ: ಮಹಿಳೆಯರೇ ತಯಾರಿಸಿದ ಕರಕುಶಲ ವಸ್ತುಗಳು ಮಹಿಳಾ ದಸರೆಯ ಪ್ರಧಾನ ಆಕರ್ಷಣೆ ಆಗಿವೆ. ಸ್ತ್ರಿಶಕ್ತಿ ಸಂಘಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ. ಟೆರಾಕೋಟ ಆಭರಣ, ಮುಸುಕಿನ ಜೋಳದ ಎಲೆಯಿಂದ ಮಾಡಿದ ಅಲಂಕಾರಿಕಾ ಸಾಮಗ್ರಿಗಳು, ದೀಪಗಳು, ಹತ್ತಿಯ ಬ್ಯಾಗುಗಳು, ಮರದ ಆಟಿಕೆಗಳು ಗಮನ ಸೆಳೆಯುತ್ತಿವೆ.

ದಸರೆ ಪ್ರಯುಕ್ತ ₹ 999 ದರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬೆಂಗಳೂರು– ಮೈಸೂರು ವಿಮಾನ ಸೇವೆಗೆ ಚಾಲನೆ ಲಭಿಸಿದೆ. 375 ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಾರೆ.

ಚಾಮುಂಡಿವಿಹಾರದಲ್ಲಿ ಕ್ರೀಡಾ ಕಲರವ ಮುಂದುವರೆದರೆ, ಡಿ.ದೇವರಾಜ ಅರಸು ವಿವಿಧೋದ್ದೇಶ ಅಖಾಡದಲ್ಲಿ ಪೈಲ್ವಾನವರು ದೂಳೆಬ್ಬಿಸಿದರು.

ಸಾಂಸ್ಕೃತಿಕ ಸಂಗಮ: ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಅರಮನೆ ಮುಂಭಾಗ ಸಂಜೆ ಕೊಳಲು ವಾದನದ ಜುಗಲ್‌ಬಂದಿ, ನೃತ್ಯ ವೈಭವ, ಶಾಸ್ತ್ರೀಯ ಮ್ಯಾಂಡೋಲಿನ್‌ ವಾದನ, ಗೀತ ಗಾಯನ ಮನಸೂರೆಗೊಂಡಿತು.

ದಸರಾ ಕಾರ್ಯಕ್ರಮಗಳು ರಂಗೇರುತ್ತಿದ್ದು, ಪ್ರವಾಸಿಗರು ಇನ್ನೂ ಅಷ್ಟಾಗಿ ಸೇರಿಲ್ಲ. ಆದರೆ, ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಸಾಂಸ್ಕೃತಿ ನಗರಿಯತ್ತ ಹೆಜ್ಜೆ ಇಡುವ ನಿರೀಕ್ಷೆ ಇದೆ.

ಯಶ್‌, ಅರ್ಮಾನ್‌ ಝಲಕ್‌

ಯುವ ಮನಸ್ಸುಗಳಲ್ಲಿ ನವೋಲ್ಲಾಸ ಮೂಡಿಸುವ ಯುವ ದಸರೆ ಕಾರ್ಯಕ್ರಮಕ್ಕೆ ಈ ಬಾರಿ ಯಶ್‌, ರಾಗಿಣಿ, ರಚಿತಾ ರಾಮ್‌, ಹರಿಪ್ರಿಯಾ, ಸಾನ್ವಿ ಶ್ರೀವಾಸ್ತವ್‌, ಶುಭಾ ಪೂಂಜಾ, ಗಾಯಕ ವಿಜಯಪ್ರಕಾಶ್‌ ರಂಗು ತುಂಬಲಿದ್ದಾರೆ.

ಬಾಲಿವುಡ್‌ ಗಾಯಕರಾದ ಅರ್ಮಾನ್‌ ಮಲಿಕ್‌, ಬಾದ್‌ಶಾ, ನೇಹಾ ಕಕ್ಕರ್‌ ಅವರು ಯುವಕರ ಎದೆಬಡಿತ ಹೆಚ್ಚಿಸಲಿದ್ದಾರೆ. ಯುವ ದಸರೆ ಅ. 12ರಿಂದ 17ವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಬಂಬೂ ಬಿರಿಯಾನಿಗೆ ಬೇಡಿಕೆ

ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಬೇಡಿಕೆ ಹೆಚ್ಚಾಗಿದೆ. ಬಿರಿಯಾನಿ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ನಾಗರಹೊಳೆ ಕಾಡಂಚಿನಲ್ಲಿ ವಾಸಿಸುವ ಸೋಲಿಗರು ಬಂಬೂ ಬಿರಿಯಾನಿ ತಯಾರು ಮಾಡುತ್ತಿದ್ದಾರೆ. ಅಲ್ಲದೆ, ಏಡಿ ಸಾರು, ಮುದ್ದೆ ಊಟಕ್ಕೂ ಬೇಡಿಕೆ ಇದೆ.

ಮಹಿಳೆಯರಿಗಾಗಿ ಬೆಂಕಿ ರಹಿತ ಅಡುಗೆ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರಿಗಾಗಿ ಏರ್ಪಡಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ವೀಕ್ಷಿಸಲು ಜನರು ಮುಗಿಬಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !