ಬುಧವಾರ, ಮೇ 12, 2021
18 °C

ಮಹದಾಯಿ; ಒಂದೂವರೆ ತಿಂಗಳಿನಲ್ಲಿ ಮೇಲ್ಮನವಿ: ಡಿ.ಕೆ. ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ನ್ಯಾಯಮಂಡಳಿಯ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಇನ್ನೂ ಒಂದೂವರೆ ತಿಂಗಳು ಸಮಯವಿದ್ದು, ಅಷ್ಟರೊಳಗೆ ರಾಜ್ಯ ಸರ್ಕಾರ ಸಲ್ಲಿಸಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿರುವ ಕಳಸಾ ನಾಲಾ ತಿರುವು ಯೋಜನೆಯ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಮಹದಾಯಿ ನದಿಯಲ್ಲಿ 188 ಟಿಎಂಸಿ ಅಡಿ ನೀರು ಲಭ್ಯ ಇರುವುದನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ. ಈಗ ಲಭ್ಯವಿರುವ ನೀರಿನ ಪೈಕಿ ಕರ್ನಾಟಕಕ್ಕೆ 13.24 ಟಿಎಂಸಿ ಅಡಿ, ಗೋವಾಕ್ಕೆ 24 ಟಿಎಂಸಿ ಅಡಿ ಹಾಗೂ ಮಹಾರಾಷ್ಟ್ರಕ್ಕೆ 1.30 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಇನ್ನುಳಿದ ನೀರು ಸಮುದ್ರಕ್ಕೆ ಹೋಗಿ ಸೇರುತ್ತಿದೆ. ಈ ನೀರಿನಲ್ಲಿ ನಮಗೆ ಪಾಲು ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ’ ಎಂದು ವಿವರಿಸಿದರು.

‘ಬೇರೆ ರಾಜ್ಯದವರು ಎಷ್ಟು ಬೇಕಾದರೂ ನೀರು ಉಪಯೋಗಿಸಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರಿಗೆ ಕೊಡಬಾರದು, ಇವರಿಗೆ ಕೊಡಬಾರದು ಎಂದೂ ನಾವು ಹೇಳುತ್ತಿಲ್ಲ. ಅಕ್ಕಪಕ್ಕದ ರಾಜ್ಯಗಳ ಜೊತೆ ಜಗಳವಾಡುವ ಅವಶ್ಯಕತೆ ನಮಗಿಲ್ಲ. ಸಮುದ್ರಕ್ಕೆ ಸೇರುವ ನೀರನ್ನು ಕಳಸಾ– ಬಂಡೂರಿ ನಾಲಾ ಮೂಲಕ ಮಲಪ್ರಭಾಗೆ ತಿರುಗಿಸಿದರೆ ಈ ಭಾಗದ ಜನರಿಗೆ ಉಪಯೋಗವಾಗಲಿದೆ’ ಎಂದು ಹೇಳಿದರು.

‘ನ್ಯಾಯಮಂಡಳಿ ತೀರ್ಪಿನಿಂದ ನಮಗೆ ಹಂಚಿಕೆಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಇದಕ್ಕಾಗಿ ಸೇತುವೆಗಳ ನಿರ್ಮಾಣ ಹಾಗೂ ನಾಲಾ ಜೋಡಣೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುತ್ತಿದ್ದೇವೆ. ಇದಕ್ಕೆ ಬೇಕಾದ ಅನುದಾನವನ್ನು ಬಜೆಟ್‌ನಲ್ಲಿ ತೆಗೆದಿರಿಸುತ್ತೇವೆ’ ಎಂದು ತಿಳಿಸಿದರು.

‘ನಾಲಾ ಜೋಡಣೆಯಿಂದ ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯುಂಟಾಗುವುದಿಲ್ಲ. ನಾವು ಕೂಡ ಪರಿಸರ ಪ್ರೇಮಿಗಳಾಗಿದ್ದೇವೆ. ಪರಿಸರ ರಕ್ಷಿಸಲು ನಾವು ಕೂಡ ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು