ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದ ಹಿರೇನಂದಿಹಳ್ಳಿ ಕೆರೆ

ಹೂಳಿನಿಂದ ತುಂಬಿದ ಕೆರೆ ಅಂಗಳ; ಒತ್ತುವರಿ ಆರೋಪ
Last Updated 15 ಜೂನ್ 2018, 12:24 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಹಿರೇನಂದಿಹಳ್ಳಿ ಕೆರೆ ತುಂಬಿದರೆ ಸುತ್ತಲಿನ ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳು ಪುನಶ್ಚೇತಗೊಳ್ಳುತ್ತವೆ. ಸಾವಿರಾರು ಎಕರೆ ಹೊಲಗಳು ಹಸಿರಿನಿಂದ ಕಂಗೊಳಿಸುತ್ತವೆ. ಹಿರೇನಂದಿಹಳ್ಳಿ, ಮಾಸಣಗಿ ಮತ್ತು ಅಂಗರಗಟ್ಟಿ ಹಾಗೂ ಸುತ್ತಲ ಗ್ರಾಮಗಳ ರೈತರ ಮೊಗದಲ್ಲಿ ಸಂತಸ ಮನೆ ಮಾಡುತ್ತದೆ. ಆದರೆ, ಸುಮಾರು 631 ಎಕರೆ ವಿಸ್ತೀರ್ಣದ ಕೆರೆಯು ಖಾಲಿಯಾಗಿದೆ.

ಹೀಗಾಗಿ, ಸುತ್ತಲಿನ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ನೀರಿನ ಬವಣೆ ಹೆಚ್ಚಿದೆ. ನೀರಿಲ್ಲದ ಕಾರಣ ಶೇ 70ಕ್ಕೂ ಹೆಚ್ಚು ಭಾಗ ಒತ್ತುವರಿಯಾಗಿದೆ.

ಕಳೆದ ಬಾರಿ ನದಿ ನೀರು ತುಂಬಿಸುವ ಯೋಜನೆ ಸಿದ್ಧಗೊಂಡಿದ್ದು, ನನೆಗುದಿಗೆ ಬಿದ್ದಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆಯ ಹೂಳೆತ್ತುವ ಅಥವಾ ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿಲ್ಲ.

ಈ ಹಿಂದೆ ಸುಣಕಲ್ ಬಿದರಿ, ಅಸುಂಡಿ, ಬೆನಕನಕೊಂಡ, ಆಣೂರು, ಹಿರೇನಂದಿಹಳ್ಳಿ, ಶಿಡೇನೂರ, ಕೆರವಡಿ, ಬುಡಪನಹಳ್ಳಿ, ಬಿದರಕಟ್ಟಿ, ಬಿಸಲಳ್ಳಿ, ಕೆಂಗೊಂಡ ಹಾಗೂ ಹೆಗ್ಗೇರಿ ಕೆರೆಯನ್ನು ತುಂಬಿಸುವ ಯೋಜನಾ ವರದಿ ಸಿದ್ಧಗೊಂಡಿತ್ತು.

ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಆಣೂರು ಗ್ರಾಮದ ಹತ್ತಿರದ ಗುಡ್ಡದಲ್ಲಿ ಸಂಗ್ರಹಿಸಿಕೊಂಡು, ನೈಸರ್ಗಿಕವಾಗಿ ಗುರುತ್ವಾಕರ್ಷಣ ಬಲದ ಆಧಾರದಲ್ಲಿ ಕಾಲುವೆಗಳ ಮೂಲಕ ಹರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಸಿದ್ಧಗೊಂಡಿತ್ತು.

ಆದರೆ, ಅದನ್ನು ಕೊನೆ ಗಳಿಗೆಯಲ್ಲಿ ಬದಲಾಯಿಸಿ ತಾಲ್ಲೂಕಿನ ಜನತೆಗೆ ನಿರಾಶೆಯನ್ನುಂಟು ಮಾಡಲಾಯಿತು ಎಂದು ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಬನ್ನಿಹಟ್ಟಿ ಆರೋಪಿಸುತ್ತಾರೆ.

1996–97ರಲ್ಲಿ ಸುರಿದ ಮಳೆಗೆ ಕೆರೆ ಸಂಪೂರ್ಣವಾಗಿ ತುಂಬಿತ್ತು. ನಾಲ್ಕು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಅಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಆದರೆ, ಈಗ ಕೆರೆಯಲ್ಲಿ ನೀರು ಇಲ್ಲದೇ ಶೇ 70ರಷ್ಟು ಒತ್ತುವರಿಯಾಗಿದೆ.

ಕೆರೆ ಪಾತ್ರದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಸ್ವಚ್ಛಗೊಳಿಸಿ ದಂಡೆಯನ್ನು ಗಟ್ಟಿಗೊಳಿಸಬೇಕಾಗಿದೆ. ಮಳೆಗೆ ಗುಡ್ಡದಿಂದ ಹರಿದು ಬರುವ ನೀರಿಗೆ ಕಾಲುವೆ ಮಾಡಬೇಕು. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಮುಂದಾಗಬೇಕು ಎಂದು ಸದಸ್ಯ ಈರಪ್ಪ ಬನ್ನಿಹಟ್ಟಿ ಒತ್ತಾಯಿಸಿದರು.

ನದಿಯಿಂದ ನೀರು ತರುವ ಉದ್ದೇಶಿತ ಯೋಜನೆಗೆ ಸರ್ಕಾರ ₹ 400 ಕೋಟಿ ಕಲ್ಪಿಸಬೇಕಾಗಿದೆ. ಇತರ ಅನುದಾನ ಬಳಸಿಕೊಂಡು ನರೇಗಾ ಯೋಜನೆಯಡಿ ಕೆರೆಗೆ ಕಾಯಕಲ್ಪ ಕಲ್ಪಿಸುವ ಕೆಲಸವಾಗಬೇಕು.

ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಆಸಕ್ತಿ ವಹಿಸುವುದು ಅಗತ್ಯ ಎಂದು ಪರಮೇಶ ಮುಳಗುಂದ, ಶಿವು ಪುಟ್ಟಣ್ಣನವರ, ಚಂದ್ರು ಮುಳಗುಂದ, ಶಿವರಾಜ ಎಮ್ಮೆರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಶ್ರೀ‌

ತಾಲ್ಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸಲು ಯೋಜನೆ ಸಿದ್ಧಪಡಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ. ಕೆರೆ ತುಂಬಿಸಲು ಪ್ರಯತ್ನಿಸಲಾಗುವುದು
ವಿರೂಪಾಕ್ಷಪ್ಪ, ಬಳ್ಳಾರಿ ಶಾಸಕ 

ಪ್ರಮೀಳಾ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT