ಭಾಗಶಃ ಫಲ ನೀಡಿದ ’ಹೊರಕೇರಿ’ ಕನವರಿಕೆ

7
ನಾಲ್ಕು ದಶಕಗಳ ಹಿಂದೆ ಒಬ್ಬಂಟಿಯಾಗಿಯೇ ಹೋರಾಟ ಕಟ್ಟಿದ್ದ ಮಾಜಿ ಶಾಸಕ

ಭಾಗಶಃ ಫಲ ನೀಡಿದ ’ಹೊರಕೇರಿ’ ಕನವರಿಕೆ

Published:
Updated:
Deccan Herald

ಬಾಗಲಕೋಟೆ: ಮಹದಾಯಿ ನೀರನ್ನು ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುವ ಕನಸು ಕಂಡು, ಅದಕ್ಕೆ ನಾಲ್ಕು ದಶಕಗಳ ಹಿಂದೆಯೇ ಹೋರಾಟದ ಸ್ವರೂಪ ನೀಡಿದ್ದವರು ಗುಳೇದಗುಡ್ಡದ ಮಾಜಿ ಶಾಸಕ ಬಿ.ಎಂ. ಹೊರಕೇರಿ.

ಬಾದಾಮಿ ತಾಲ್ಲೂಕಿನ ಢಾಣಕಶಿರೂರಿನ ಬಸಪ್ಪ ಮಹಾದೇವಪ್ಪ ಹೊರಕೇರಿ 1973ರ ಉಪಚುನಾವಣೆಯಲ್ಲಿ ಗೆದ್ದು ಗುಳೇದಗುಡ್ಡದ ಶಾಸಕರಾಗಿದ್ದರು.

70ರ ದಶಕದಲ್ಲಿ ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ಬಾದಾಮಿ ತಾಲ್ಲೂಕಿಗೆ ನೀರು ಹರಿಸಲು ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಿಸಿದರೂ ಕೊನೆಯ ಭಾಗಕ್ಕೆ ನೀರು ಹರಿದಿರಲಿಲ್ಲ. ಅದೊಮ್ಮೆ ತಮ್ಮ ಆತ್ಮೀಯ ಗೆಳೆಯ, ಅಂದಿನ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಎಸ್.ಜಿ.ಬಾಳೇಕುಂದ್ರಿ ಎದುರು ಹೊರಕೇರಿ ಈ ವಿಚಾರ ಪ್ರಸ್ತಾಪಿಸಿದ್ದರು.

’ಕಾಲುವೆ ನಿರ್ಮಿಸಿ ನಮ್ಮ ಮೂಗಿಗೆ ತುಪ್ಪ ಹಚ್ಚಿದ್ದೀರಿ, ನೀರು ಬರುವುದು ಯಾವಾಗ’ ಎಂದು ಪ್ರಶ್ನಿಸಿದ್ದರು. ಆಗ ಬಾಳೇಕುಂದ್ರಿ, ಮಹದಾಯಿ ನೀರು ತರುವ ವಿಚಾರ ಹೇಳಿದ್ದರು. ’ಮಲಪ್ರಭೆಗೆ ಮಹದಾಯಿ ಜೋಡಿಸಿದರೆ ನಿಮ್ಮೂರಿನ ಕಾಲುವೆಗೂ ನೀರು ಹರಿಯಲಿದೆ’ ಎಂದಿದ್ದರು.

ಅದನ್ನು ಗಂಭೀರವಾಗಿ ಪರಿಗಣಿಸಿದ ಬಿ.ಎಂ.ಹೊರಕೇರಿ, 1976ರಲ್ಲಿ ಮೊದಲ ಬಾರಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದು ಫಲ ನೀಡದಿದ್ದಾಗ ರೈತರನ್ನು ಸಂಘಟಿಸಿ ಹೋರಾಟ ಕಟ್ಟಲು ನಿರ್ಧರಿಸಿದರು. ಗದಗ, ಬಾಗಲಕೋಟೆ, ಧಾರವಾಡ ಜಿಲ್ಲೆಯ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಹಳ್ಳಿ ಹಳ್ಳಿ ಸುತ್ತಿದ್ದರು. ಜಾತ್ರೆ, ಸಂತೆ, ಹಬ್ಬ–ಹರಿದಿನಗಳಲ್ಲಿ ಹೆಚ್ಚು ಜನ ಸೇರುವ ಕಡೆ ಸಭೆಗಳನ್ನು ಮಾಡಿ ನೀರು ತರುವ ಸಾಧ್ಯಸಾಧ್ಯತೆಗಳ ಬಗ್ಗೆ ಮನವರಿಕೆ ಮಾಡಿದ್ದರು.

‘ಮಲಪ್ರಭಾ ನದಿಯಲ್ಲಿ ಮೋಟಾರ್ ಪಂಪ್ ಇಟ್ಟು ಹೊಲಕ್ಕೆ ನೀರು ಹರಿಸಿಕೊಳ್ಳುವ ಕುಟುಂಬಗಳಿಂದ ತಲಾ ಒಬ್ಬರು ನನ್ನೊಂದಿಗೆ ಹೋರಾಟಕ್ಕೆ ಬನ್ನಿ’ ಎಂದು ರೈತರ ಮನೆ ಬಾಗಿಲಿಗೆ ಹೋಗಿ ಕರೆ ಕೊಟ್ಟಿದ್ದರು. ಕರಪತ್ರಗಳನ್ನು ಮಾಡಿ ಮನೆ ಮನೆಗೆ ಹಂಚಿದ್ದರು. 

ಮಹದಾಯಿ ಜಲಾನಯನ ಪ್ರದೇಶದಲ್ಲಿ ಓಡಾಡಿ, ಅಲ್ಲಿನ ಮಳೆ ಪ್ರಮಾಣ, ಗೋವಾದಲ್ಲಿ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ, ಮಹದಾಯಿಯನ್ನು ಮಲಪ್ರಭೆಗೆ ಜೋಡಿಸಿದರೆ ಕುಡಿಯಲು, ನೀರಾವರಿ ಉದ್ದೇಶಕ್ಕೆ ಎಷ್ಟು ನೀರು ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಅಧ್ಯಯನ ಮಾಡಿ ನಕ್ಷೆ ಸಮೇತ ಯೋಜನಾ ವರದಿ ಸಿದ್ಧಪಡಿಸಿಕೊಂಡಿದ್ದರು. ಅದಕ್ಕೆ ಬಾಳೇಕುಂದ್ರಿ ಕೂಡ ನೆರವಾಗಿದ್ದರು.

’ಮಹದಾಯಿ ನೀರು ಹರಿಸುವಂತೆ ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್‌ಸಿಂಗ್, ಪ್ರಧಾನಿ ಇಂದಿರಾಗಾಂಧಿ ಬಳಿ ನಿಯೋಗ ಕೊಂಡೊಯ್ದು ಮನವಿ ಸಲ್ಲಿಸಿದ್ದ ಹೊರಕೇರಿ, 1985ರಲ್ಲಿ ಬನಶಂಕರಿ ಜಾತ್ರೆಯಲ್ಲಿ ಮಹದಾಯಿ ಯೋಜನೆಯ ಸಮಗ್ರ ಚಿತ್ರಣವನ್ನು ವಸ್ತುಪ್ರದರ್ಶನದ ರೂಪದಲ್ಲಿ ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟಿದ್ದರು’ ಎಂದು ಅವರ ಒಡನಾಡಿ ಬಾದಾಮಿಯ  ವೀರ ಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಎ.ಸಿ.ಪಟ್ಟಣದ ನೆನಪಿಸಿಕೊಳ್ಳುತ್ತಾರೆ.

’ಬಾದಾಮಿಗೆ ಯಾರೇ ಮಂತ್ರಿಗಳು ಬರಲಿ ಮನವಿ ಪತ್ರ ಕೊಡುತ್ತಿದ್ದರು. ಸರ್ಕಾರ ಬದಲಾಗಲಿ, ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುತ್ತಿದ್ದರು. ಒಬ್ಬಂಟಿಯಾಗಿಯೇ ತಿರುಗಾಡುತ್ತಿದ್ದ ಹೊರಕೇರಿ ಅವರ ಹೋರಾಟವನ್ನು ಕೆಲವರು ಗಂಭೀರವಾಗಿ ಪರಿಗಣಿಸಿ ಬೆಂಬಲಕ್ಕೆ ನಿಲ್ಲುತ್ತಿದ್ದರು. ಹೆಚ್ಚಿನವರು ಹಾಸ್ಯ ಮಾಡುತ್ತಿದ್ದರು.  ಆದರೂ ಉತ್ಸಾಹ ಕಳೆದುಕೊಳ್ಳುತ್ತಿರಲಿಲ್ಲ’ ಎಂದು ಬಾದಾಮಿಯ ನಿವೃತ್ತ ಶಿಕ್ಷಕ ಎಸ್.ಎಂ. ಹಿರೇಮಠ ಹೇಳುತ್ತಾರೆ.

‘2001ರಲ್ಲಿ ಅವರು ನಿಧನರಾಗುವವರೆಗೂ ಮಹದಾಯಿ ನೀರು ತರುವ ವಿಚಾರವನ್ನೇ ಮಾತಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ನರಗುಂದದ ಕೆಲವು ಹೋರಾಟಗಾರರು ಢಾಣಕಶಿರೂರಿನ ನಮ್ಮ ಮನೆಗೆ ಬಂದು, ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಅಪ್ಪ ಸಂಗ್ರಹಿಸಿದ್ದ ಕೆಲವು ದಾಖಲೆ, ಕಾಗದ ಪತ್ರಗಳನ್ನು ಕೊಂಡೊಯ್ದಿದ್ದರು’ ಎಂದು ಹೊರಕೇರಿ ಅವರ ಪುತ್ರ ಶಿವಪ್ಪ ಹೇಳುತ್ತಾರೆ.

ತಾವು ಓಡಾಡುತ್ತಿದ್ದ ಮಹೀಂದ್ರಾ ಜೀಪಿಗೆ ‘ಮಹದಾಯಿ–ಮಲಪ್ರಭಾ’ ಎಂದೇ ಬರೆಸಿದ್ದ ಬಿ.ಎಂ.ಹೊರಕೇರಿ, ಬದುಕಿನುದ್ದಕ್ಕೂ ಮಹದಾಯಿಯನ್ನೇ ಕನವರಿಸಿದ್ದವರು. ಒಬ್ಬಂಟಿಯಾಗಿ ಹೋರಾಟದ ಬೀಜ ಬಿತ್ತಿದ್ದರು. ಅದೀಗ ಬರೋಬ್ಬರಿ 42 ವರ್ಷಗಳ ನಂತರ ಭಾಗಶಃ ಫಲ ನೀಡಿದೆ.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !