ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನೆಂದರೆ ಯಾರು?

ಅಕ್ಷರ ಗಾತ್ರ

ಭರ್ತೃಹರಿಯ ನೀತಿಶತಕದ ಪದ್ಯವೊಂದು ಹೀಗಿದೆ:

ಯೇಷಾಂ ನ ವಿದ್ಯಾ ನ ತಪೋ ನ ದಾನಂ
ಜ್ಞಾನಂ ನ ಶೀಲಂ ನ ಗುಣೋ ನ ಧರ್ಮಃ |
ತೇ ಮರ್ತ್ಯಲೋಕೇ ಭುವಿ ಭಾರಭೂತಾ
ಮನುಷ್ಯರೂಪೇಣ ಮೃಗಾಶ್ಚರಂತಿ ||

‘ಯಾರಲ್ಲಿ ವಿದ್ಯೆಯಾಗಲಿ, ತಪಸ್ಸಾಗಲಿ, ದಾನವಾಗಲಿ, ಜ್ಞಾನವಾಗಲಿ, ಶೀಲವಾಗಲಿ, ಗುಣವಾಗಲಿ, ಧರ್ಮವಾಗಲಿ ಇಲ್ಲವೋ ಅವರು ಈ ಮನುಷ್ಯಲೋಕದಲ್ಲಿ ಭೂಮಿಗೆ ಭಾರವಾಗಿ ಮನುಷ್ಯರೂಪದಲ್ಲಿ ಸಂಚರಿಸುವ ಮೃಗಗಳು ಮಾತ್ರ.’

ಇದು ಈ ಶ್ಲೋಕದ ಅರ್ಥ.

ಮನುಷ್ಯ ಎಂದರೆ ಯಾರು ಎಂಬುದನ್ನು ಲಕ್ಷಣೀಕರಿಸುವ ಸೂತ್ರವಾಗಿ ಈ ಶ್ಲೋಕ ನಿಲ್ಲುತ್ತದೆ. ಮನುಷ್ಯನೂ ಪ್ರಾಣಿಯೇ ಹೌದು; ಆದರೆ ಅವನನ್ನು ‘ಪಶುತ್ವ’ದಿಂದ ಕಾಪಾಡುತ್ತಿರುವ ಸಂಗತಿಗಳು ಯಾವುವೆಂದರೆ – ‘ವಿದ್ಯೆ, ತಪಸ್ಸು, ದಾನ, ಜ್ಞಾನ, ಶೀಲ, ಗುಣ, ಧರ್ಮ’ – ಇವೇ ಅವು ಎನ್ನುವುದನ್ನು ಅದು ನಿರೂಪಿಸುತ್ತಿದೆ.

ಮೇಲೆ ಹೇಳಿರುವ ಎಲ್ಲ ಗುಣಗಳು ಕೂಡ ಸಹಜವಾಗಿಯೇ ನಮಗೆ ಹುಟ್ಟಿನಿಂದ ಬರುವಂಥದ್ದು ಅಲ್ಲ; ಅವನ್ನು ನಾವು ರೂಢಿಸಿಕೊಳ್ಳಬೇಕು. ಹೀಗೆ ರೂಢಿಸಿಕೊಳ್ಳಲು ಯೋಚನಾಶಕ್ತಿ ಬೇಕು. ಈ ಶಕ್ತಿ ನಮಗೆ ಇದೆ; ಪ್ರಾಣಿಗಳಿಗೆ ಇಲ್ಲ. ಪ್ರಾಣಿಗಳು ಆ ಕ್ಷಣಕ್ಕೆ ಪ್ರತಿಕ್ರಿಯಿಸುತ್ತವೆಯೇ ಹೊರತು, ಆ ಕ್ಷಣವನ್ನು ವಿಶ್ಲೇಷಿಸಿ ಸ್ಪಂದಿಸಲಾರವು. ಇದೇ ಮನುಷ್ಯನ ಹೆಚ್ಚುಗಾರಿಕೆ. ಮಾತ್ರವಲ್ಲ, ಈ ಗುಣಗಳನ್ನು ರೂಢಿಸಿಕೊಂಡವನೇ ಮನುಷ್ಯ ಎಂದೆನಿಸಿಕೊಳ್ಳಲು ಅರ್ಹ. ಇದನ್ನು ನಾವಿಲ್ಲಿ ಗಮನಿಸಬೇಕು.

ಮನುಷ್ಯನನ್ನು ಈ ಸೃಷ್ಟಿಯ ಶಿಖರ ಎನ್ನುವುದುಂಟು. ಅವನಿಗೆ ಈ ಪಟ್ಟ ಒದಗಿದ್ದೇ ಮೇಲೆ ತಿಳಿಸಿರುವ ಗುಣಗಳನ್ನು ಅವನು ಒಗ್ಗಿಸಿಕೊಂಡದ್ದರಿಂದ.

ವಿದ್ಯೆ – ಎಂದರೆ ನನ್ನನ್ನೂ ನನ್ನ ಸುತ್ತಲಿನ ಪರಿಸರವನ್ನೂ ತಿಳಿಯಬಲ್ಲ ಸಾಮರ್ಥ್ಯ. ನನ್ನ ಹಿಂದಿನವರ ತಿಳಿವಳಿಕೆಯನ್ನೂ ಬಳಸಿಕೊಳ್ಳುವ ಜಾಣ್ಮೆ; ಈ ತಿಳಿವಳಿಕೆಯನ್ನು ನನ್ನ ಮುಂದಿನವರಿಗೆ ದಾಟಿಸುವ ಕಲೆ.

ತಪಸ್ಸು – ಎಂದರೆ ನನ್ನನ್ನು ನಾನು ಸಿದ್ಧಗೊಳಿಸಿಕೊಳ್ಳುವುದು; ಸಾಧನೆಯನ್ನು ಮಾಡಿ, ಶ್ರಮದಿಂದ ಅರಿವನ್ನೂ ಅರ್ಥವನ್ನೂ ಆನಂದವನ್ನೂ ಸಂಪಾದಿಸುವ ಮಾರ್ಗ.

ದಾನ – ಇದು ಸಹಬಾಳ್ವೆಗೆ ಸಂಕೇತ. ಇಲ್ಲಿರುವುದು ನಾನೊಬ್ಬನೇ ಅಲ್ಲ; ನನ್ನಂತೆ ಇನ್ನೂ ಹತ್ತು ಜನರು ಇದ್ದಾರೆ ಎಂಬ ವಾಸ್ತವನ್ನು ಗ್ರಹಿಸಿ ಅದಕ್ಕೆ ಸ್ಪಂದಿಸುವ ಕ್ರಿಯಾಶೀಲತೆಯೇ ದಾನ. ಇದು ಆತ್ಮಶಿಕ್ಷಣ. ನನ್ನಲ್ಲಿರುವುದೆಲ್ಲವೂ ನನಗೊಬ್ಬನಿಗೇ ಅಲ್ಲ – ಎಂಬ ಅರಿವೇ ನಮ್ಮ ಸಮಾಜವನ್ನು ವಿಸ್ತರಿಸುವ ವಿಧಾನ; ಅದು ಒದಗುವುದೇ ದಾನಶೀಲತೆಯಿಂದ.

ಜ್ಞಾನ – ಇದು ನನ್ನಲ್ಲಿರುವ ಮಾಹಿತಿಯ ಸಾಧಕ–ಬಾಧಕಗಳನ್ನು ತೂಗಿನೋಡುವ ಬುದ್ಧಿ. ಕತ್ತಿಯನ್ನು ಕೊಲ್ಲಲೂ ರಕ್ಷಿಸಲೂ ಬಳಸಲು ಸಾಧ್ಯ; ಆಯಾ ಸಂದರ್ಭಕ್ಕೆ ತಕ್ಕಂತೆ ಅದನ್ನು ಬಳಸುವ ಎಚ್ಚರಿಕೆಯೇ ಜ್ಞಾನ ಎಂದೆನಿಸಿಕೊಳ್ಳುತ್ತದೆ.

ಶೀಲ – ಎನ್ನುವುದು ನನ್ನ ಶಕ್ತಿಯನ್ನೂ ಬುದ್ಧಿಯನ್ನೂ ಅಗತ್ಯವನ್ನೂ ಅಪಾಯವನ್ನೂ ಉಪಾಯವನ್ನೂ ಬೇರೊಬ್ಬರಿಗೂ ನನಗೂ ತೊಂದರೆಯಾಗದಂತೆ ನಿರ್ವಹಿಸುವ ಅಂತರಂಗದ ಕುಶಲತೆ. ಬೇರೆ ಯಾರೋ ನನ್ನನ್ನು ಗಮನಿಸುತ್ತಿದ್ದಾರೆ ಎಂದು ನಾನು ರಸ್ತೆಯಲ್ಲಿ ಸರಿಯಾಗಿ ನಡೆಯುವುದು ‘ನಿಯಮ’ ಎಂದೆನಿಸಿಕೊಳ್ಳುತ್ತದೆ; ಯಾರೂ ಗಮನಿಸಿಸದಿದ್ದರೂ, ಹೀಗೆ ಸರಿಯಾಗಿ ನಡೆಯುವುದೇ ನನ್ನ ಕರ್ತವ್ಯ ಎಂದು ತಿಳಿದುಕೊಂಡು ಅದರಂತೆ ಹೆಜ್ಜೆ ಹಾಕುವುದು ‘ಶೀಲ’ ಎಂದೆನಿಸಿಕೊಳ್ಳುತ್ತದೆ.

ಗುಣ – ಮೇಲೆ ಹೇಳಿದ ಎಲ್ಲ ವಿವರಗಳೂ ಗುಣಗಳೇ ಹೌದು. ಜಗತ್ತಿನ ಜೊತೆಗೆ ನಾನು ಇಷ್ಟುಕೊಳ್ಳುವ ಒಳ್ಳೆಯ ಸಂಪರ್ಕವಿಧಾನಗಳೆಲ್ಲವೂ ‘ಗುಣ’ದ ವ್ಯಾಪ್ತಿಗೆ ಅಳವಡಿಸಲು ಸಾಧ್ಯ. ಬಟ್ಟೆಯೊಂದು ಹಲವು ದಾರಗಳ ನೇಯ್ಗೆಯಲ್ಲಿ ಹೇಗೆ ಸಿದ್ಧವಾಗುತ್ತದೆಯೋ ಹಾಗೆಯೇ ‘ಮನುಷ್ಯ’ ಎಂಬುವನು ನಿರ್ಮಾಣವಾಗುವುದೇ ಹಲವು ಗುಣಗಳ ಸಂಯೋಗದಿಂದಾಗಿ.

ಧರ್ಮ – ಇದು ಬಹಳ ಗಹನವಾದ, ಹಲವು ಸ್ತರಗಳ ಅರ್ಥಗಳನ್ನುಳ್ಳ ವಿವರ. ಯಾವುದು ಸರಿ, ಯಾವುದು ತಪ್ಪು; ನನಗೂ ಇತರಿರಿಗೂ ಯಾವುದು ಹಿತ, ಯಾವುದು ಹಿತ; ಯಾವ ಸಂದರ್ಭದಲ್ಲಿ ನನ್ನ ಗುಣ ಹೇಗಿರಬೇಕು – ಇಂಥ ಸೂಕ್ಷ್ಮ ವಿವೇಚನಶಕ್ತಿಯನ್ನೂ ಕಾರ್ಯೋನ್ಮುಖತೆಯನ್ನೂ ‘ಧರ್ಮ’ ಎಂದು ಸರಳೀಕರಿಸಿ ಹೇಳಬಹುದು.

ಮೇಲೆ ಪಟ್ಟಿಮಾಡಿರುವ ವಿಶೇಷ ವಿವರಗಳು ನಮ್ಮಲ್ಲಿ ಯಾವ ಪ್ರಮಾಣದಲ್ಲಿ ಜೀವಂತವಾಗಿವೆ – ಎನ್ನುವುದನ್ನು ನಾವೇ ಮೌಲ್ಯಮಾಪನ ಮಾಡಿಕೊಳ್ಳಬಹುದು; ಆ ಮೂಲಕ ನಮ್ಮ ಮನುಷ್ಯತ್ವದ ಪ್ರಮಾಣವನ್ನೂ ಕಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT