ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲೀಗ ಸತ್ತ ಮಂಗಗಳ ಶೋಧ!

Last Updated 8 ಜನವರಿ 2019, 19:21 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮಂಗಗಳ ನೋಡಿದಿರಾ... ಇಲ್ಲಿ ಎಲ್ಲಾದರೂ ಸತ್ತ ಮಂಗಗಳ ನೋಡಿದಿರಾ?’–ಯುವಕರು, ಕೂಲಿ ಕಾರ್ಮಿಕರು, ಅರಣ್ಯ ಉತ್ಪನ್ನ ಸಂಗ್ರಹಿಸುವ ಅನೇಕರು ಈಗ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಸತ್ತ ಮಂಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಎದುರಿಗೆ ಸಿಕ್ಕವರಿಗೆ ನೀವು ನೋಡಿದಿರಾ ಎಂಬ ಪ್ರಶ್ನೆ ಇಟ್ಟು ಮುಂದೆ ಸಾಗುತ್ತಾರೆ.

ಮಲೆನಾಡಿನಲ್ಲಿ ಮಹಾಮಾರಿಯಂತೆ ಹಬ್ಬುತ್ತಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಸಮರೋಪಾದಿ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಸ್ಥಳೀಯ ಪಂಚಾಯಿತಿಗಳು ಸತ್ತ ಮಂಗನ ಪತ್ತೆ ಮಾಡಿ, ಮಾಹಿತಿ ನೀಡಿದವರಿಗೆ ₹ 500 ಬಹುಮಾನ ನೀಡುತ್ತಿವೆ. ಇದರಿಂದ ಹಲವರು ತಂಡ ಕಟ್ಟಿಕೊಂಡು ಹುಡುಕಾಟಕ್ಕೆ ಇಳಿದಿದ್ದಾರೆ. ಕಾಡಿನ ಒಳಗೆ ಹೋಗುವ ತಂಡಗಳ ಸದಸ್ಯರಿಗೆ ಕೈ, ಮೈಗಳಿಗೆ ಹಚ್ಚಿಕೊಳ್ಳಲು ಡಿಎಂ‍ಪಿ ಎಣ್ಣೆ, ಸಂರಕ್ಷಣಾ ಪರಿಕರಗಳನ್ನು ಆರೋಗ್ಯ ಇಲಾಖೆ ವಿತರಿಸುತ್ತಿದೆ.

ಕೆಲವು ತಂಡಗಳು ಒಂದೇ ದಿನದಲ್ಲಿ ನಾಲ್ಕೈದು ಮಂಗಗಳ ಮೃತದೇಹ ಪತ್ತೆ ಮಾಡಿವೆ. ಮಾಹಿತಿ ಸಿಕ್ಕ ತಕ್ಷಣ ಅಲ್ಲಿಗೆ ತೆರಳುವ ಅರಣ್ಯ ಸಿಬ್ಬಂದಿ ಮೃತ ಮಂಗಗಳನ್ನು ಸುಡುತ್ತಿದ್ದಾರೆ.

‘ಮಂಗಗಳ ಮೃತದೇಹ ಸುಡಬೇಕು.ಉಣಗು ಇದ್ದರೆ ಸುಟ್ಟು ಹೋಗುತ್ತವೆ. ಅವುಗಳ ಅಂಗಾಂಗಗಳಲ್ಲೂ ವೈರಸ್‌ ಇರುತ್ತದೆ. ಮಣ್ಣಿನಲ್ಲಿ ಹೂತರೆ ಬೆಕ್ಕುಗಳು ಮಾಂಸತಿಂದು ಮನೆಯ ಒಳಗೆ ಬರಬಹುದು.ಇತರೆ ಪ್ರಾಣಿಗಳು ಎಳೆದಾಡಬಹುದು. ಹಾಗಾಗಿ, ಮೃತದೇಹ ಸುಡಲು ಸೂಚಿಸಲಾ
ಗಿದೆ’ ಎಂದು ಮಾಹಿತಿ ನೀಡುತ್ತಾರೆ ವೈದ್ಯಾಧಿಕಾರಿ ಡಾ.ಕಿರಣ್.

47 ಮಂಗಗಳ ಮೃತದೇಹ ಪತ್ತೆ: ಸಾಗರ, ಹೊಸನಗರ ತಾಲ್ಲೂಕಿನ ಹಲವು ಭಾಗಗಳಲ್ಲಿ ಈವೆರೆಗೆ 47 ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ವನ್ಯಜೀವಿ ವಿಭಾಗದಲ್ಲೇ 26 ಸತ್ತ ಮಂಗಗಳನ್ನು ಪತ್ತೆ ಹಚ್ಚಲಾಗಿದೆ. ಸಾಗರತಾಲ್ಲೂಕಿನ ಅರಲಗೋಡು,ಮಂಡವಳ್ಳಿ, ತುಮರಿ, ಹೊಳೆಬಾಗಿಲು, ಮುಪ್ಪಾನೆ, ಹೊಸನಗರ ತಾಲ್ಲೂಕಿನ ಸಂಪೆಕಟ್ಟೆ, ಮುತ್ತಿಕೈ ಬಳಿ ಸುತ್ತ ಮಂಗಗಳು ಪತ್ತೆಯಾಗಿವೆ. ಪ್ರತಿವರ್ಷ ಮಂಗನ ಕಾಯಿಲೆಗೆ ತುತ್ತಾಗುತ್ತಿದ್ದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ಬಾರಿ ಇಬ್ಬರಲ್ಲಿಕಾಯಿಲೆ ಕಾಣಿಸಿಕೊಂಡಿದೆ.ಘಂಟೆಜನಗಲ್ ಗ್ರಾಮದ ಸುಂದರಿ ಎಂಬ ಮಹಿಳೆ ಮೃತಪಟ್ಟಿದ್ದರೂ, ಮಂಗನ ಕಾಯಿಲೆಯಿಂದ ಎನ್ನುವುದು ದೃಢಪಟ್ಟಿಲ್ಲ.

ಸ್ವಾಭಾವಿಕ ಅರಣ್ಯ ನಾಶ ಉಲ್ಬಣಕ್ಕೆ ಕಾರಣ: ಮಲೆನಾಡಿನ ಭಾಗದಲ್ಲಿ 1991ರ ನಂತರ ಇದೇ ಮೊದಲ ಬಾರಿ ಹೆಚ್ಚಿನ ಸಂಖ್ಯೆಯ ಜನರು ಮಂಗನ ಕಾಯಿಲೆಗೆ ತುತ್ತಾಗಿದ್ದಾರೆ. ದಿನಗಳು ಕಳೆದಂತೆ ರೋಗ ಉಲ್ಬಣಗೊಳ್ಳುತ್ತಿದೆ. ಇದಕ್ಕೆ ಇರುವ ಹಲವು ಕಾರಣಗಳಲ್ಲಿ ಸ್ವಾಭಾವಿಕ ಅರಣ್ಯ ನಾಶವೂ ಒಂದು ಎಂದು ಅರಣ್ಯಾಧಿಕಾರಿಗಳು, ಪರಿಸರ ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ.

ವಿಭಿನ್ನ ಜಾತಿಯ ಮರಗಳು, ಹುಲ್ಲುಗಾವಲು ಸೇರಿ ಸ್ವಾಭಾವಿಕ ಅರಣ್ಯ ಇರುವ ಭಾಗಗಳಲ್ಲಿ ಕಾಯಿಲೆಗೆ ಕಾರಣವಾಗುವ ‘ಝೈಕಾ’ ಪ್ರಭೇದಕ್ಕೆ ಸೇರಿದ ಈ ವೈರಸ್‌ಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಿಗಿಯುವ ಮಂಗಗಳಿಗೆ ಸುಲಭವಾಗಿ ತಾಕುವುದಿಲ್ಲ.

‘ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕುವುದರಿಂದ ಅಲ್ಲಿನ ಹುಲ್ಲು ನಾಶವಾಗಿ ಉಣ್ಣೆಗಳು ಸಹಜವಾಗಿ ಬಯಲಿಗೆ ತೆರೆದುಕೊಳ್ಳುತ್ತವೆ. ಆಗ ಆ ಪ್ರದೇಶದಲ್ಲಿ ಸಾಗುವ ಮಂಗಗಳ ದೇಹಕ್ಕೆ ಸೇರುತ್ತವೆ. ಮಂಗ ಸತ್ತು ಬಿದ್ದ ತಕ್ಷಣ ಅದರ ದೇಹದ ಮೇಲಿದ್ದ ವೈರಸ್‌ ಹೊತ್ತ ಉಣ್ಣೆಗಳು (ಉಣಗು) ಕಾಡಿನಲ್ಲಿ ಓಡಾಡುವ ಜನರಿಗೆ ಕಚ್ಚಿದರೆ ರೋಗ ಹರಡುತ್ತವೆ’ ಎಂದು ವಿವರ ನೀಡುತ್ತಾರೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜೆ. ಚಂದ್ರಶೇಖರ್.

ರೋಗ ಲಕ್ಷಣಗಳು ಕಾಣಿಸಿಕೊಂಡ ಪ್ರದೇಶದ ಎಲ್ಲ ಗ್ರಾಮಗಳ ಜನರಿಗೆ ಕೆಎಫ್‌ಡಿ ನಿರೋಧಕ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ತೀರ್ಥಹಳ್ಳಿ, ಸಾಗರ ತಾಲ್ಲೂಕಿನ 40 ಸಾವಿರ ಜನರಿಗೆ ಮೊದಲ ಹಂತದ ಲಸಿಕೆ ಹಾಕಲಾಗಿದೆ.

ಐವರ ಪೈಕಿ ಮೂವರಲ್ಲಿ ಪತ್ತೆ

ಸಾಗರ ತಾಲ್ಲೂಕು ಅರಲಗೋಡಿನ ರಾಮಚಂದ್ರಶಾಸ್ತ್ರಿ, ಮಂಡವಳ್ಳಿಯ ಸೋಮವತಿ, ಕಾಳಮಂಜಿಯ ಮಹಾಲಕ್ಷ್ಮಿ ಅವರಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿದ್ದು, ಮೂವರನ್ನೂ ಮಣಿಪಾಲ್‌ನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೋಣಂದೂರಿನ ಇಬ್ಬರು ಬಾಲಕರಿಗೆ ರೋಗ ಇರುವುದು ಪತ್ತೆಯಾಗಿದ್ದು, ತೀರ್ಥಗಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ ಒಟ್ಟು 24 ಜನರಲ್ಲಿ ಕಾಯಿಲೆ ದೃಢಪಟ್ಟಿದ್ದು, 6 ಜನರು ಮೃತಪಟ್ಟಿದ್ದಾರೆ.

ಕೆಎಂಸಿಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ

ಉಡುಪಿ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರದವರೆಗೂ 42 ಶಂಕಿತ ಮಂಗನ ಕಾಯಿಲೆ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪೈಕಿ 14 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಮೂವರು ಗುಣಮುಖರಾಗಿದ್ದು, ಮನೆಗೆ ಕಳುಹಿಸಲಾಗಿದೆ. ಉಳಿದ 11 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಕಾಯಿಲೆಯಿಂದ ಇದುವರೆಗೆ ಆಸ್ಪತ್ರೆಯಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT