ಭಾನುವಾರ, ಆಗಸ್ಟ್ 18, 2019
26 °C
ಪ್ರವಾಹ ಇಳಿದರೂ ನೆಮ್ಮದಿ ದೂರ: 4,267 ಹೆಕ್ಟೇರ್‌ ಬೆಳೆಹಾನಿ

ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು; ಇನ್ನಷ್ಟು ಮನೆಗಳಿಗೆ ಹಾನಿ

Published:
Updated:

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟ ಪರಿಣಾಮ ಉಂಟಾದ ಪ್ರವಾಹ ಇಳಿದರೂ, ಪ್ರವಾಹದಿಂದ ಜಿಲ್ಲೆಯ ಹಡಗಲಿಯಲ್ಲಿ ಎರಡು ದಿನಗಳ ಅವಧಿಯಲ್ಲಿ ಇನ್ನಷ್ಟು ಮನೆಗಳಿಗೆ ಹಾನಿಯಾಗಿದೆ.

ಹರಪನಹಳ್ಳಿ ಎರಡನೇ ಸ್ಥಾನದಲ್ಲೇ ಇದೆ. ಈ ಎರಡೂ ತಾಲ್ಲೂಕುಗಳಿಗೆ ಮಾತ್ರ ಇದುವರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿದ್ದರೂ ಹರಪನಹಳ್ಳಿ ತಾಲ್ಲೂಕಿಗೆ ₨ 11.29 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಹಡಗಲಿ ತಾಲ್ಲೂಕಿನಲ್ಲಿ ₨ 7.07 ಲಕ್ಷ ವಿತರಿಸಲಾಗಿದೆ.

ಬೆಳೆ ಹಾನಿಯೂ ಹೆಚ್ಚು: ಈ ಎರಡೂ ತಾಲ್ಲೂಕುಗಳಲ್ಲೇ ಅತಿ ಹೆಚ್ಚು ಪ್ರಮಾಣದ ಬೆಳೆಹಾನಿಯಾಗಿದೆ. ಹರಪನಹಳ್ಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಬೆಳೆಹಾನಿ ಹಡಗಲಿಯಲ್ಲಿ ಆಗಿದ್ದರೂ, ಎರಡನೇ ಹಂತದಲ್ಲೂ, ಅಲ್ಲಿಗೆ ಹೆಚ್ಚಿನ ಪರಿಹಾರ ನೀಡದೆ, ಹರಪನಹಳ್ಳಿಗೇ ನೀಡಲಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ ಅತಿಹೆಚ್ಚು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಇಲ್ಲಿ ಹಡಗಲಿ ಎರಡನೇ ಸ್ಥಾನದಲ್ಲಿದೆ.

ಪರಿಹಾರ ಕೇಂದ್ರ: ಬುಧವಾರದ ಹೊತ್ತಿಗೆ ಪ್ರವಾಹ ಇಳಿದಿದ್ದು, ಜನರಿಗೆ ತುಸು ನೆಮ್ಮದಿಯ ಭಾವ ಮೂಡಿ ಸನ್ನಿವೇಶ ತಿಳಿಗೊಂಡ ಹಿನ್ನೆಲೆಯಲ್ಲಿ, ಐದು ಪರಿಹಾರ ಕೇಂದ್ರಗಳನ್ನು ಬುಧವಾರದಿಂದ ಮುಚ್ಚಲಾಗಿದೆ. ಆರು ಕೇಂದ್ರಗಳನ್ನು ಮಾತ್ರ ಮುಂದುವರಿಸಲಾಗಿದೆ.

ಹರಪನಹಳ್ಳಿ ತಾಲ್ಲೂಕಿನ ನಿಟ್ಟೂರು, ಕಾಡತಿ, ಸಿರುಗುಪ್ಪ ತಾಲ್ಲೂಕಿನ ಬಾಗೆವಾಡಿ, ಹಚ್ಚೊಳ್ಳಿ ಮತ್ತು ಚಿಕ್ಕಬಳ್ಳಾರಿ ಗ್ರಾಮಗಳ ಕೇಂದ್ರಗಳನ್ನು ಮುಚ್ಚಲಾಗಿದೆ. ಈ ಕೇಂದ್ರಗಳಲ್ಲಿ ಸುಮಾರು 575 ಕುಟುಂಬಗಳಿಗೆ ನೆರವು ನೀಡಲಾಗಿತ್ತು. ಎಲ್ಲಕ್ಕಿಂತ ಮೊದಲು ನಿಟ್ಟೂರಿನಲ್ಲೇ ಕೇಂದ್ರವನ್ನು ಆರಂಭಿಸಲಾಗಿತ್ತು.

ಉಳಿದಂತೆ, ಹಡಗಲಿ ತಾಲ್ಲೂಕಿನ ಕುರುವತ್ತಿ, ಹರವಿ, ಕೊಂಬಳಿ, ಬ್ಯಾಲಹುಣಸಿ, ಅಂಗೂರು, ಕಂಪ್ಲಿ ತಾಲ್ಲೂಕಿನ ತಲವಾರ ಕೆರೆ ಪ್ರದೇಶದಲ್ಲಿನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ತುರ್ತು ಸ್ಪಂದನೆಗೆ ಎರಡು ತಂಡ: ಹರಪನಹಳ್ಳಿ ಮತ್ತು ಸಿರುಗುಪ್ಪ ತಾಲ್ಲೂಕಿನಲ್ಲಿ ಎರಡು ತುರ್ತು ಸ್ಪಂದನಾ ತಂಡಗಳು ಸಜ್ಜಾಗಿವೆ. ಪ್ರತಿ ತಂಡದಲ್ಲಿ ಒಂದು ಮೋಟರ್‌ ಬೋಟ್‌, 30 ಜೀವರಕ್ಷಕ ಜಾಕೆಟ್‌ಗಳಿವೆ.

179 ಕುಟುಂಬಗಳಿಗೆ ಆಶ್ರಯ: ‘ಆರು ಪರಿಹಾರ ಕೇಂದ್ರಗಳಲ್ಲಿ ಈಗ 179 ಕುಟುಂಬಗಳು ಆಶ್ರಯ ಪಡೆದಿವೆ. 950ಲ್ಲೂ ಹೆಚ್ಚು ಮಂದಿಗೆ ಅಲ್ಲಿ ದಿನದ ಮೂರು ಹೊತ್ತು ಆಹಾರ ಪದಾರ್ಥಗಳನ್ನು ಅಡುಗೆ ಸಿಬ್ಬಂದಿ ಸಿದ್ಧಪಡಿಸಿಕೊಡುತ್ತಿದ್ದಾರೆ’ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

Post Comments (+)