ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಡುತೋಪುಗಳು ಮರಳಿ ಅರಣ್ಯ ಇಲಾಖೆಗೆ?

ಎಂಪಿಎಂ: ಭೂಮಿ ಸ್ಥಿತಿಗತಿಯ ಮಧ್ಯಂತರ ವರದಿ ತಿಂಗಳ ಒಳಗೆ ಸಿದ್ಧ
Last Updated 3 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

ಶಿವಮೊಗ್ಗ:ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಪೂರೈಸಲು 43 ವರ್ಷಗಳ ಹಿಂದೆ ನೀಡಲಾಗಿದ್ದ ನೆಡುತೋಪುಗಳನ್ನು ಮರಳಿ ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಸಿದ್ಧತೆ ಆರಂಭಿಸಿದೆ.

ನೆಡುತೋಪುಗಳ ಪ್ರಸ್ತುತ ಸ್ಥಿತಿಗತಿ, ಗುತ್ತಿಗೆ ಕರಾರು ಉಲ್ಲಂಘಿಸಿ ಹರಾಜು ಪ್ರಕ್ರಿಯೆ ಮೂಲಕ ಬೇರೆ ಕಂಪನಿಗಳಿಗೆ ಮಾರಾಟ ಮಾಡುತ್ತಿರುವುದು, ಕೃಷಿ, ವಾಸ, ಉದ್ದಿಮೆ ಮತ್ತಿತರ ಕಾರಣಗಳಿಗಾಗಿ ನಡೆದಿರುವ ಒತ್ತುವರಿ ಕುರಿತು ಸಮಗ್ರ ಮಾಹಿತಿ ಕಲೆಹಾಕಿ ತಕ್ಷಣವೇ ಮಧ್ಯಂತರ ವರದಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಆದೇಶಿಸಿದ್ದಾರೆ.

ನೆಡುತೋಪುಗಳನ್ನು ಬೆಳೆಸಲು ರಾಜ್ಯ ಸರ್ಕಾರ 1976ರಲ್ಲಿ ಎಂಪಿಎಂಗೆ ಹಲವು ನಿಬಂಧನೆಗಳಿಗೆ ಒಳಪಡಿಸಿ 30 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ನೀಡಿತ್ತು.

1980ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಸೂಕ್ಷ್ಮವಲಯ, ಜೀವ ವೈವಿಧ್ಯ ತಾಣ ಮತ್ತಿತರ ಯೋಜನೆಗಳಿಂದಾಗಿ ಶೆಟ್ಟಿಹಳ್ಳಿ ಹಾಗೂ ಶರಾವತಿ ಅಭಯಾರಣ್ಯದ ವ್ಯಾಪ್ತಿಯಲ್ಲಿನ 3,250 ಹೆಕ್ಟೇರ್ ಒಳಗೊಂಡ 109 ನೆಡುತೋಪುಗಳನ್ನು ಮರಳಿ ವನ್ಯಜೀವಿ ವಿಭಾಗದ ವಶಕ್ಕೆ ಪಡೆಯಲಾಗಿತ್ತು. ಪ್ರಸ್ತುತ 22,500 ಹೆಕ್ಟೇರ್ ಒಳಗೊಂಡ ನೆಡುತೋಪುಗಳು ಎಂಪಿಎಂ ಅಧೀನದಲ್ಲಿವೆ.

ಒಂದು ಕಾಲದಲ್ಲಿ ಮುಂಬೈ ಷೇರು ಮಾರುಕಟ್ಟೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಈ ಕಾರ್ಖಾನೆ ಪೈಪೋಟಿ ಎದುರಿಸಲಾಗದೆ ಕಳೆದ ಕೆಲವು ವರ್ಷಗಳಿಂದ ನಷ್ಟದ ಹಾದಿಯಲ್ಲಿ ಸಾಗಿತ್ತು. ಎರಡು ವರ್ಷಗಳಿಂದ ಉತ್ಪಾದನೆ ಸ್ಥಗಿತಗೊಳಿಸಿ, ಬಾಗಿಲು ಮುಚ್ಚಲಾಗಿದೆ.

ಮರದ ತಿರುಳು ಪೂರೈಸಲು ನೀಡಲಾಗಿದ್ದ ನೆಡುತೋಪುಗಳಲ್ಲಿನ ಮರಗಳನ್ನು ಮಾರಾಟ ಮಾಡಿ ಸಿಬ್ಬಂದಿ ಬಾಕಿ ವೇತನ ಪಾವತಿಸಲು ಸರ್ಕಾರ ಅನುಮತಿ ನೀಡಿತ್ತು.

ಈಗ ಕಟಾವು ಮಾಡಿದ ಭೂಮಿ ಸಂರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರದ ಸೆರಗಿನಲ್ಲಿ ಇರುವ ತೋಪುಗಳ ಮೇಲೆ ಪಟ್ಟಭದ್ರರ ಕಣ್ಣು ಬಿದ್ದಿದೆ. ಎಂಪಿಎಂಗೆ ನೀಡಿರುವ ನೆಡುತೋಪುಗಳ ಗುತ್ತಿಗೆ ಅವಧಿಯೂ ಸೆಪ್ಟೆಂಬರ್ 2020ಕ್ಕೆ ಮುಗಿಯುತ್ತದೆ.

‘ಯಾವ ಸ್ಥಳಗಳಲ್ಲಿ ಮರ ಕಡಿಯಲಾಗುತ್ತಿದೆ ಎನ್ನುವ ಮಾಹಿತಿಯನ್ನು ಎಂಪಿಎಂ ಅಧಿಕಾರಿಗಳು ನೀಡುತ್ತಿಲ್ಲ. ಮರಗಳನ್ನು ಕಟಾವು ಮಾಡಿದ ತೋಪುಗಳಲ್ಲಿ ತಕ್ಷಣ ಸ್ವಾಭಾವಿಕ ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಲು ಆದೇಶಿಸಲಾಗಿದೆ. ಒಂದು ತಿಂಗಳ ಒಳಗೆ ಮಧ್ಯಂತರ ವರದಿ ಸಲ್ಲಿಸಲಾಗುವುದು. ತೋಪುಗಳನ್ನು ಮರಳಿ ಸ್ವಾಧೀನಕ್ಕೆ ಪಡೆಯಲು, ಭೂಮಿ ಸಂರಕ್ಷಿಸಲು ಆದ್ಯತೆ ನೀಡಲಾಗುವುದು’ ಎಂದು ಮಾಹಿತಿ ನೀಡುತ್ತಾರೆ ಶಿವಮೊಗ್ಗ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಬಾಲಚಂದ್ರ.

ಬೀದಿಗೆ ಬಿದ್ದ ಕುಟುಂಬಗಳು
ಮೈಸೂರಿನ ಕೃಷ್ಣರಾಜ ಒಡೆಯರ್ ಕಾಲದಲ್ಲಿ (1936–37) ಎಪಿಎಂ ಸ್ಥಾಪಿಸಲಾಗಿತ್ತು. ನ್ಯೂಸ್‌ಪ್ರಿಂಟ್‌ ಸೇರಿ ಗುಣಮಟ್ಟದ ಕಾಗದ ಉತ್ಪಾದನೆಗೆ ಖ್ಯಾತಿ ಪಡೆದಿದ್ದ ಕಾರ್ಖಾನೆಯಲ್ಲಿ 5 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. 1977ರಲ್ಲಿ ರಾಜ್ಯ ಸರ್ಕಾರ (ಶೇ 65 ಷೇರುಗಳು) ವಶಕ್ಕೆ ಪಡೆದುಕೊಂಡಿತ್ತು. ಆರ್ಥಿಕ ಸಂಸ್ಥೆಗಳು ಶೇ 18ರಷ್ಟು ಹಾಗೂ ಸಾರ್ವಜನಿಕರು ಶೇ 17ರಷ್ಟು ಷೇರು ಹೊಂದಿದ್ದಾರೆ. ಕಾರ್ಖಾನೆ ಸ್ಥಗಿತಗೊಂಡ ಪರಿಣಾಮ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ.

**

ಮಲೆನಾಡಿನ ದಟ್ಟ ಕಾನನದ ಮಧ್ಯೆ ಎಂಪಿಎಂಗೆ ಭೂಮಿ ನೀಡಿದ್ದ ಪರಿಣಾಮ ಸ್ವಾಭಾವಿಕ ಅರಣ್ಯ ನಾಶವಾಗಿತ್ತು. ಜನ, ಪಶು,ಪಕ್ಷಿಗಳೂ ಸಂಕಷ್ಟಕ್ಕೆ ಸಿಲುಕಿದ್ದವು. ಗುತ್ತಿಗೆ ಅವಧಿ ಮುಗಿದ ತಕ್ಷಣ ಅಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಬೇಕು. ಒತ್ತುವರಿಗೆ ಅವಕಾಶ ನೀಡಬಾರದು.
- ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT