ಕಲಬುರ್ಗಿ: ನಡುರಸ್ತೆಯಲ್ಲೇ ಲಾಡ್ಜ್ ಉದ್ಯೋಗಿ ಕೊಲೆ; ಪತ್ನಿ 7 ತಿಂಗಳ ಗರ್ಭಿಣಿ

7
ಕೊಲೆಗೆ ಏನು ಕಾರಣ?

ಕಲಬುರ್ಗಿ: ನಡುರಸ್ತೆಯಲ್ಲೇ ಲಾಡ್ಜ್ ಉದ್ಯೋಗಿ ಕೊಲೆ; ಪತ್ನಿ 7 ತಿಂಗಳ ಗರ್ಭಿಣಿ

Published:
Updated:
Prajavani

ಕಲಬುರ್ಗಿ: ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದ ಎದುರಿಗೆ ಗುರುವಾರ ಬೆಳಿಗ್ಗೆ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳಿಬ್ಬರು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ತಾಲ್ಲೂಕಿನ ಮೇಳಕುಂದ ಗ್ರಾಮದ ಮಲ್ಲಿಕಾರ್ಜುನ (29) ಕೊಲೆಯಾದವರು. ಬಸ್‌ ನಿಲ್ದಾಣ ಎದುರಿಗೆ ಇರುವ ಕಾವೇರಿ ಲಾಡ್ಜ್‌ನಲ್ಲಿ ಇವರು ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿ, ಬೆಳಿಗ್ಗೆ ಮನೆಗೆ ಹೊರಡಲು ಸಿದ್ಧವಾಗಿದ್ದ ವೇಳೆ ಘಟನೆ ನಡೆದಿದೆ.

ಲಾಡ್ಜ್‌ ಎದುರಿಗೆ ಚಹಾ ಕುಡಿಯುತ್ತ ನಿಂತಿದ್ದ ವೇಳೆ ಪಲ್ಸರ್‌ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಲ್ಲಿಕಾರ್ಜುನ ಅವರೊಂದಿಗೆ ವಾಗ್ವಾದ ನಡೆಸಿದರು. ಮಾತು ಅತಿರೇಕಕ್ಕೆ ಹೋಗುತ್ತಿದ್ದಂತೆ ಆರೋಪಿಯೊಬ್ಬ ಮಾರಕಾಸ್ತ್ರದಿಂದ ಮಲ್ಲಿಕಾರ್ಜುನ ಅವರ ಕುತ್ತಿಗೆಗೆ ಹೊಡೆದ.

ಈ ವೇಳೆ ಓಡಿಹೋಗಲು ಯತ್ನಿಸಿದ ಮಲ್ಲಿಕಾರ್ಜುನ ನಡು ರಸ್ತೆಯಲ್ಲೇ ಬಿದ್ದರು. ಬೆನ್ನಟ್ಟಿ ಬಂದ ದುಷ್ಕರ್ಮಿ ಅವರ ತಲೆ, ಕುತ್ತಿಗೆ, ಬೆನ್ನು ಹೀಗೆ ಕಂಡಕಂಡಲ್ಲಿ ಹತ್ತಾರು ಬಾರಿ ಮಾರಕಾಸ್ತ್ರದಿಂದ ಹೊಡೆದ. ಮಲ್ಲಿಕಾರ್ಜುನ ಸಹಾಯಕ್ಕಾಗಿ ಕಿರುಚುತ್ತಿದ್ದರೂ, ಸುತ್ತ ನಿಂತಿದ್ದ ಹಲವಾರು ಜನ ಹೌಹಾರಿ ನಿಂತರು.

ದುಷ್ಕರ್ಮಿಗಳು ಪರಾರಿಯಾದ ಮೇಲೆ ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮಾರ್ಗ ಮಧ್ಯದಲ್ಲೇ ಅವರು ಕೊನೆಯಿಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಏಕಾಏಕಿ ನಡೆದ ಈ ಘಟನೆಯಿಂದ ಜನ ಬೆಚ್ಚಿ ಬಿದ್ದರು. ಮಧ್ಯಾಹ್ನದವರೆಗೂ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ವೈರಲ್‌ ಆದ ವಿಡಿಯೊ:

ಬಸ್‌ ನಿಲ್ದಾಣ ಸುತ್ತಲಿನ ಕೆಲ ಕಟ್ಟಡಗಳಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕೊಲೆ ದೃಶ್ಯ ಸೆರೆಯಾಗಿದೆ. ಮಧ್ಯಾಹ್ನದ ಹೊತ್ತಿಗೆ ಕೊಲೆಯ ಬರ್ಬರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದವು.

ಪತ್ನಿ 7 ತಿಂಗಳ ಗರ್ಭಿಣಿ:

ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಮಲ್ಲಿಕಾರ್ಜುನ ನಗರದ ಖಾಸಗಿ ಕಾಲೇಜೊಂದರದಲ್ಲಿ ಬಿ.ಇಡಿ ಓದಿಸುತ್ತಿದ್ದರು. ಪತ್ನಿ ಈಗ ಏಳು ತಿಂಗಳ ಗರ್ಭಿಣಿ. ತಪಾಸಣೆಗಾಗಿ ಆಸ್ಪತ್ರೆಗೆ ಹೋಗಲು ಅವರು ಪತ್ನಿ ಹಾಗೂ ಭಾಮೈದನನ್ನು ಕಲಬುರ್ಗಿಗೆ ಕರೆಸಿಕೊಂಡಿದ್ದರು.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಶೋಕ ನಗರ ಪೊಲೀಸ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 7

  Sad
 • 0

  Frustrated
 • 6

  Angry

Comments:

0 comments

Write the first review for this !