ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಶೇ.60ರಷ್ಟು ರೈಲುಗಳು ಮಾತ್ರ ವಿದ್ಯುದೀಕರಣ

ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿವೆ 24 ರೈಲುಗಳು
Last Updated 1 ಜನವರಿ 2019, 11:38 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಬೆಂಗಳೂರು ನಡುವಿನ ಮಾರ್ಗ ವಿದ್ಯುದೀಕರಣಗೊಂಡಿದ್ದರೂ, ವಿದ್ಯುತ್‌ ರೈಲುಗಳ ಓಡಾಟ ‍ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಈ ಎರಡು ನಗರಿಗಳ ನಡುವೆ ಒಟ್ಟು 24 ರೈಲುಗಳು ಸಂಚರಿಸುತ್ತಿದ್ದು, ಕೇವಲ 13 ರೈಲುಗಳು ಮಾತ್ರ ವಿದ್ಯುತ್‌ ‘ಲೋಕೊ’ ದಿಂದ ಸಂಚರಿಸುತ್ತಿವೆ. ಹಾಗಾಗಿ, ಕೇವಲ ಶೇ 60ರಷ್ಟು ರೈಲುಗಳು ಮಾತ್ರ ವಿದ್ಯುದೀಕರಣಗೊಂಡಂತೆ ಆಗಿದೆ.

ಮೈಸೂರು– ಬೆಂಗಳೂರು ನಡುವಿನ ಪ್ರಯಾಣಕ್ಕೆ ಪ್ರತಿ ರೈಲಿಗೆ 700 ಲೀಟರ್‌ ಡೀಸೆಲ್‌ ಬೇಕಾಗುತ್ತದೆ. ಇದಕ್ಕೆ ₹ 41 ಸಾವಿರ ಖರ್ಚಾಗುತ್ತದೆ. ಒಂದು ಕಿ.ಮೀ. ಸಂಚರಿಸಲು 5 ಲೀಟರ್‌ ಡೀಸೆಲ್ ಬೇಕು. ವಿದ್ಯುತ್‌ ಎಂಜಿನ್ ಇರುವ ರೈಲು 2,600 ಯುನಿಟ್‌ ವಿದ್ಯುತ್‌ ಬಳಸುತ್ತದೆ. ಒಟ್ಟಾರೆ ₹ 17 ಸಾವಿರ ಖರ್ಚಾಗುವ ಕಾರಣ, ಸಾಕಷ್ಟು ಉಳಿತಾಯ ಆಗಲಿದೆ ಎನ್ನುವುದು ಲೆಕ್ಕಾಚಾರವಾಗಿತ್ತು. ಆದರೆ, ರೈಲ್ವೆ ಇಲಾಖೆಗೆ ಭಾಗಶಃ ಹಣ ಮಾತ್ರ ಉಳಿತಾಯವಾಗುತ್ತಿದೆ.

ಏಕೆ ಇನ್ನೂ ಡೀಸೆಲ್ ರೈಲು?:

ವಿದ್ಯುತ್‌ ಮೋಟಾರ್ ಉಳ್ಳ ‘ಲೋಕೊ’ಗಳನ್ನು ರೈಲಿಗೆ ಜೋಡಿಸಲು ಬೇಕಿರುವ ವಿದ್ಯುತ್ ಕೊರತೆ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಮಂಡ್ಯದ ಎಲಿಯೂರಿನಲ್ಲಿ ವಿದ್ಯುತ್‌ ಉಪ ಕೇಂದ್ರವೊಂದು ನಿರ್ಮಾಣವಾಗಬೇಕಿತ್ತು. ಆದರೆ, ಹಲವು ತಾಂತ್ರಿಕ ಕಾರಣಗಳಿಂದಾಗಿ ಅದು ಪೂರ್ಣಗೊಂಡಿಲ್ಲ. ಹಾಗಾಗಿ, ಬೆಂಗಳೂರು ಹಾಗೂ ಮೈಸೂರು ಭಾಗದಿಂದ ಮಾತ್ರ ರೈಲುಗಳಿಗೆ ವಿದ್ಯುತ್‌ ಪೂರೈಕೆ ಆಗುತ್ತಿದೆ. ಹಾಗಾಗಿ, ಈಗ ಕೇವಲ ಶೇ 60ರಷ್ಟು ರೈಲುಗಳು ಮಾತ್ರ ವಿದ್ಯುತ್‌ನಿಂದ ಓಡುತ್ತಿವೆ.

ಅಲ್ಲದೇ, ಕೆಲವು ಇತರೆ ತೊಡಕುಗಳೂ ಡೀಸೆಲ್ ಎಂಜಿನ್‌ ಉಳ್ಳ ರೈಲುಗಳನ್ನೇ ಓಡಿಸುವಂತೆ ಮಾಡಿದೆ. ಮೈಸೂರಿನ ಮೂಲಕವಾಗಿ ಇತರ ಭಾಗಗಳಿಗೆ ತೆರಳುವ ಮಾರ್ಗಗಳು ವಿದ್ಯುದೀಕರಣಗೊಂಡಿಲ್ಲ. ಉದಾಹರಣೆಗೆ ಮೈಸೂರು ಮೂಲಕವಾಗಿ ಚಾಮರಾಜನಗರಕ್ಕೆ ರೈಲು ಸಂಚರಿಸಬೇಕಾದರೆ, ವಿದ್ಯುತ್‌ ಲೋಕೊವನ್ನು ಕಳಚಿ, ಡೀಸೆಲ್‌ ಎಂಜಿನ್‌ ಜೋಡಿಸಬೇಕಾಗುತ್ತದೆ. ಹಾಗೆ ಬದಲಿಸುವುದು ಸುಲಭವೂ ಅಲ್ಲ. ಏಕೆಂದರೆ, ಹೆಚ್ಚುವರಿ ಡೀಸೆಲ್‌ ಎಂಜಿನ್‌ಗಳು ಮೈಸೂರಿನಲ್ಲಿ ಇರುವುದಿಲ್ಲ. ಅಲ್ಲದೇ,ವಿದ್ಯುತ್‌ ಲೋಕೊಗಳ ಕೊರತೆಯೂ ಬೆಂಗಳೂರು ಮೈಸೂರು ನಡುವೆ ಮಾತ್ರ ಸಂಚರಿಸುವ ರೈಲುಗಳಿಗೂ ಡೀಸೆಲ್‌ ಎಂಜಿನ್‌ಗಳನ್ನೇ ಅಳವಡಿಸುವಂತೆ ಮಾಡಿದೆ.

ಉದಾಹರಣೆಗೆ ಟಿಪ್ಪು ಎಕ್ಸ್‌ಪ್ರೆಸ್‌ ಇಂದಿಗೂ ಡೀಸೆಲ್‌ ಎಂಜಿನ್‌ನಿಂದಲೇ ಸಂಚರಿಸುತ್ತಿದೆ. ಬೆಂಗಳೂರಿನಲ್ಲಿ ವಿದ್ಯುತ್‌ ಲೋಕೊಗಳು ಕಡಿಮೆ ಇರುವ ಕಾರಣ ಇದುವರೆಗೂ ಈ ರೈಲು ಹಿಂದಿನಂತೆಯೇ ಸಂಚರಿಸುತ್ತಿವೆ. ಹಾಲಿ, ಚಾಮುಂಡಿ ಎಕ್ಸ್‌ಪ್ರೆಸ್‌, ಕಾವೇರಿ ಎಕ್ಸ್‌ಪ್ರೆಸ್‌ ಸೇರಿದಂತೆ 13 ರೈಲುಗಳು ವಿದ್ಯುತ್‌ ಲೋಕೊ ಅಳವಡಿಸಿಕೊಂಡಿವೆ.

ಒಟ್ಟು 139 ಕಿ.ಮೀ ದೂರದ ಈ ಮಾರ್ಗವನ್ನು ವಿದ್ಯುದೀಕರಣಗೊಳಿಸಲು ಒಟ್ಟು ₹ 210 ಕೋಟಿ ಖರ್ಚಾಗಿದೆ. ಎಲಿಯೂರು ಉಪ ಕೇಂ‌ದ್ರ ನಿರ್ಮಾಣವಾದಲ್ಲಿ ಮಾತ್ರ ಈ ಕೊರತೆಯನ್ನು ನೀಗಿಸಲು ಸಾಧ್ಯ ಎಂದು ಮೈಸೂರು ಗ್ರಾಹಕರ ಪರಿಷತ್‌ ಸದಸ್ಯ ಯೋಗೇಂದ್ರ ‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT