ರಿಯಾಯಿತಿ ದರದ ಸಿಲ್ಕ್‌ ಸೀರೆ ಖರಿದಿಗೆ ಮೈಸೂರಿನಲ್ಲಿ ನೂಕುನುಗ್ಗಲು,ಇತರೆಡೆ ಸರದಿ

7

ರಿಯಾಯಿತಿ ದರದ ಸಿಲ್ಕ್‌ ಸೀರೆ ಖರಿದಿಗೆ ಮೈಸೂರಿನಲ್ಲಿ ನೂಕುನುಗ್ಗಲು,ಇತರೆಡೆ ಸರದಿ

Published:
Updated:

ಬೆಂಗಳೂರು: ರಿಯಾಯಿತಿ ದರದಲ್ಲಿ ಸೀರೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪ್ರಕಟಿಸಿದ್ದ  ಮೈಸೂರು ಸಿಲ್ಕ್ಸ್ ಸಂಸ್ಥೆ ಇದೀಗ ಲಾಟರಿ ಮೂಲಕ ಸೀರೆ ವಿತರಿಸಲು ಮುಂದಾಗಿದೆ.

ರಿಯಾಯಿತಿ ದರದಲ್ಲಿ ಸೀರೆ ಖರೀದಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಅವಾಕ್ಕಾದ ಅಧಿಕಾರಿಗಳು ಲಾಟರಿ ಮೂಲಕ ಆಯ್ಕೆ ಮಾಡಿ ಸೀರೆ ವಿತರಿಸುವುದಾಗಿ ಘೋಷಿಸಿದರು. ಅದರಂತೆ ಮಹಿಳೆಯರ ಆಧಾರ್ ಕಾರ್ಡ್ ಜೆರಾಕ್ಸ್  ಪ್ರತಿ ಸಂಗ್ರಹಿಸಲಾಗುತ್ತಿದೆ. ಮಹಿಳೆಯರಿಗೆ ಸರಣಿ ಸಂಖ್ಯೆ ನೀಡಲಾಗಿದೆ. ಹೆಸರು ನೋಂದಾಯಿಸಿಕೊಂಡ ಮಹಿಳೆಯರು ಸಂಸ್ಥೆಯ ಬಳಿ ಕಾಯುತ್ತಿದ್ದಾರೆ.

ಮೈಸೂರು, ದಾವಣಗೆರೆ, ಬೆಳಗಾವಿ, ಚನ್ನಪಟ್ಟಣ ಸೇರಿದಂತೆ ಕೆಎಸ್‌ಐಸಿಯ ರಾಜ್ಯದಲ್ಲಿನ 18ಬ್ರಾಂಚ್ ಗಳಲ್ಲಿ ಗೌರಿ ಹಬ್ಬದ ಪ್ರಯುಕ್ತ ರಿಯಾಯತಿ ದರದಲ್ಲಿ ಸೀರೆ ನೀಡಲಾಗುತ್ತಿದೆ.

₹14 ಸಾವಿರ ಮೌಲ್ಯದ ಸೀರೆಯನ್ನು ₹4,500ಕ್ಕೆ ಮಾರಲಾಗುತ್ತದೆ. 1,500 ಸೀರೆಗಳು ಇಲ್ಲಿವೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್ ತಿಳಿಸಿದರು.

ಮೈಸೂರಲ್ಲಿ ಪ್ರತಿಭಟನೆ

ಮೈಸೂರು ವರದಿ: ಕೆಎಸ್‌ಐಸಿ ರೇಷ್ಮೆ ಸೀರೆ ಖರೀದಿಗಾಗಿ ನೂಕು ನುಗ್ಗಲು ಉಂಟಾದ ಕಾರಣ ಲಾಟರಿ ಮೂಲಕ ಸೀರೆ ನೀಡಲಾಗುತ್ತದೆ ಎಂದು ತಿಳಿದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಮೃಗಾಲಯದ ಎದುರಿರುವ ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ಈ ಘಟನೆ ನಡೆದಿದೆ.

15ಸಾವಿರ ರೂ. ಸೀರೆಯನ್ನು ನಾಲ್ಕೂವರೆ ರೂ.ಗೆ ನೀಡಲಾಗುತ್ತಿದ್ದು, ಸೀರೆ ಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಮಧ್ಯಾಹ್ನ 3ಗಂಟೆಯವರೆಗೆ ಆಧಾರ್ ನೋಂದಣಿ ಮಾಡಿಸಿಕೊಂಡು ಬಳಿಕ ಲಾಟರಿಯ ಮೂಲಕ ಸೀರೆ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಮ್ಯಾನೇಜರ್ ತಿಳಿಸಿದ್ದಾರೆ.


ಮೈಸೂರಿನಲ್ಲಿ ಸೀರೆಗಾಗಿ‌ ಬಿಸಿಲಿನಲ್ಲಿ  ನಿಂತಿರುವ ಮಹಿಳೆಯರು

ಮಳಿಗೆಯ ಎದುರು ಭಾರೀ ಸಂಖ್ಯೆಯಲ್ಲಿ ಸೀರೆ ಖರೀದಿಗಾಗಿ ಮಹಿಳೆಯರು ಜಮಾಯಿಸಿದ್ದು, ನಾವು ಬೆಳಿಗಿನ ಜಾವದಿಂದಲೇ ಇಲ್ಲಿಗೆ ಬಂದು ಕುಳಿತಿದ್ದೇವೆ. ನೀವು ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಂಡು ಲಾಟರಿ ಮೂಲಕ ಅಯ್ಕೆ ಮಾಡಿ ಸೀರೆ ನೀಡಿದರೆ ನಮಗೆ ಅನ್ಯಾಯವಾಗಲಿದೆ. ಬೆಳಿಗ್ಗೆಯಿಂದಲೇ ಬಂದು ಕಾದು ಕುಳಿತವರಿಗೆ ಬೆಲೆಯಿಲ್ಲವೇ ಎಂದು ಮಹಿಳೆಯರು ಮ್ಯಾನೇಜರ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ, ಮಳಿಗೆಯ ಮ್ಯಾನೇಜರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆಯ ಎಸಿಪಿ ಗಜೇಂದ್ರ ಪ್ರಸಾದ್, ನಜರ್‌ಬಾದ್ ಠಾಣೆಯ ಇನ್ಸಪೆಕ್ಟರ್ ಶೇಖರ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಮ್ಯಾನೇಜರ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

ಮ್ಯಾನೇಜರ್ ಕೃಷ್ಣ ಮಾತನಾಡಿ, ‘ನಮಗೆ ಸರ್ಕಾರದಿಂದ ಲಾಟರಿ ಮೂಲಕ ಆಯ್ಕೆ ಮಾಡಿ ಎಂದು ಆದೇಶ ಬಂದಿದೆ. ನಾವು ಅದರಂತೆ ನಡೆದುಕೊಳ್ಳುತ್ತಿದ್ದೇವೆ. ನಾವು ಹೇಳುವುದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆಧಾರ್‌ ಅನ್ನು ಮಹಿಳೆಯರೇ ನೀಡಬೇಕು. ಅವರೇ ಸೀರೆ ಕೊಂಡೊಯ್ಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !