ಸೋಮವಾರ, ಮಾರ್ಚ್ 30, 2020
19 °C
ಬಿಬಿಎಂಪಿ ಮೇಯರ್ ಆಯ್ಕೆಗೆ ಸಮಿತಿ ರಚಿಸಿಲ್ಲ ಎಂದ ಕಟೀಲ್‌

ಮುಖ್ಯಮಂತ್ರಿ ಬಿಎಸ್‌ವೈಗೆ ನಳಿನ್ ಕುಮಾರ್‌ ಸೆಡ್ಡು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಬೆಂಗಳೂರು ಶಾಸಕರು ಸೇರಿ ರಚಿಸಿದ ಸಮಿತಿಯ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಸೆಡ್ಡು ಹೊಡೆದಿದ್ದಾರೆ.

 ‘ಬಿಬಿಎಂಪಿ ಮೇಯರ್‌ ಚುನಾವಣೆ ದೃಷ್ಟಿಯಿಂದ ಪಕ್ಷವು ಯಾವುದೇ ಸಮಿತಿ ರಚನೆ ಮಾಡಿಲ್ಲ’ ಎಂದು ನಳಿನ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ಮುಖ್ಯಮಂತ್ರಿ ನಿಲುವಿಗೆ ಭಿನ್ನ ನಿಲುವು ತೆಗೆದುಕೊಳ್ಳುವ ಮೂಲಕ, ‘ಅಧ್ಯಕ್ಷರ ಪವರ್’ ತೋರಿಸಲು ನಳಿನ್ ಮುಂದಾಗಿದ್ದಾರೆ ಎಂಬ ಚರ್ಚೆಯನ್ನು ಈ ಪ್ರಕಟಣೆ ಪಕ್ಷದಲ್ಲಿ ಹುಟ್ಟು ಹಾಕಿದೆ.

‘ಮೇಯರ್ ಚುನಾವಣೆಗೆ ಪಕ್ಷದ ಆಯ್ಕೆ ಸಮಿತಿ ರಚನೆ ಆಗಿರುವುದು ಸತ್ಯಕ್ಕೆ ದೂರವಾಗಿದೆ. ಬೆಂಗಳೂರಿನ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಮೇಯರ್‌ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಈಗಾಗಲೇ ಬೆಂಗಳೂರಿನ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮೇಯರ್‌ ಆಯ್ಕೆಯ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಯಡಿಯೂರಪ್ಪ ಅವರಿಗೇ ನೀಡಿದ್ದರು.

ಆದರೆ, ಇದೀಗ ನಳಿನ್‌ ಕಟೀಲ್‌ ಅವರ ದಿಢೀರ್‌ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಸೂಚನೆ ಇದೆ ಎಂದು ಮೂಲಗಳು ತಿಳಿಸಿವೆ.

ನಳಿನ್ ಅವರ ಈ ಹೇಳಿಕೆಯಿಂದಾಗಿ ಮೇಯರ್‌ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ.

‘ಬುಧವಾರ ಬಿಬಿಎಂಪಿಯ ಕೆಲವು ಸದಸ್ಯರು ಸಮಿತಿಯ ರಚನೆಯ ಬಗ್ಗೆ ತಕರಾರು ಎತ್ತಿ ನಳಿನ್ ಅವರಿಗೆ ದೂರು ನೀಡಿದರು. ಆದ್ದರಿಂದ ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದು ನಳಿನ್‌ ಕಟೀಲ್‌ ಅವರ ಆಪ್ತರು ಹೇಳಿದ್ದಾರೆ.

‘ಎರಡು ದಿನಗಳ ಹಿಂದೆ ಬೆಂಗಳೂರಿನ ಹಿರಿಯ ಶಾಸಕ ಎಸ್‌.ರಘು ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದರಲ್ಲಿ ಬೆಂಗಳೂರಿನ ಪ್ರಮುಖ ಶಾಸಕರು ಸದಸ್ಯರಾಗಿದ್ದರು. ಸಮಿತಿ ಮಂಗಳವಾರ ಸಭೆ ನಡೆಸಿ ಮೇಯರ್‌ ಆಕಾಂಕ್ಷಿಗಳ ಪಟ್ಟಿಯನ್ನು ಮುಖ್ಯಮಂತ್ರಿಯವರಿಗೆ ನೀಡಿತ್ತು’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು