ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಮೋದಿ: ‘ರಾಜ್ಯದಲ್ಲಿದೆ ಜನವಿರೋಧಿ ಸರ್ಕಾರ’

ಕಾರ್ಯಕರ್ತರಿಂದ ‘ಮೋದಿಮೋದಿ’ ಹರ್ಷೋದ್ಗಾರ
Last Updated 6 ಮಾರ್ಚ್ 2019, 8:02 IST
ಅಕ್ಷರ ಗಾತ್ರ

ಕಲಬುರ್ಗಿ: ನಗರಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಮೋದಿ ಅವರಕಲಬುರ್ಗಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

01:33

ಭಾಷಣದ ಕೊನೆಯಲ್ಲಿ ಮೊಳಗಿಸಿದ ಜಯಕಾರದಲ್ಲಿ ಯೋಧರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ.

01:33

‘ಪರಾಕ್ರಮಿ ಭಾರತ್‌ ಕೇಲಿಯೇಭಾರತ್ಮಾತಾ ಕಿ’, ‘ವಿಜಯಿ ಭಾರತ್‌ ಕೇಲಿಯೇ ಭಾರತ್ ಮಾತಾಕಿ’, ‘ವೀರ್ ಜವಾನೋಂಕೇಲಿಯೇ ಭಾರತ್ ಮಾತಾ ಕಿ’– ಜಯಕಾರದೊಂದಿಗೆ ಮೋದಿ ಭಾಷಣ ಮುಕ್ತಾಯ.

01:29

ಇವರಿಗೆ ಪದೇಪದೆ ಅರ್ಥ ಮಾಡಿಸಬೇಕಿದೆ. ಇವರಿಗೆ ಮೋದಿಯನ್ನು ಓಡಿಸಬೇಕು ಅಂತ ಆಸೆಯಿದೆ. ಆದರೆ ಮೋದಿಗೆ ಭಯೋತ್ಪಾದನೆ, ಬಡತನ, ಭ್ರಷ್ಟಾಚಾರವನ್ನು ಓಡಿಸಬೇಕು ಅಂತ ಮೋದಿ ಆಸೆ ಪಡ್ತಿದ್ದಾರೆ.

01:28

ದೇಶವನ್ನು ಸುಭದ್ರಗೊಳಿಸಬೇಡವೇ? ರಕ್ಷಣೆ ಬೇಡವೇ? ಭಷ್ಟಾಚಾರಕ್ಕೆ ಕಡಿವಾಣ ಹಾಕುವುದು ಬೇಡವೇ?

01:27

ಸ್ವಾರ್ಥದಲ್ಲಿ ಮುಳುಗಿರುವ ವಿರೋಧಿಗಳಿಗೆ ದೇಶದಲ್ಲಿರುವ ಸುಭದ್ರ ಸರ್ಕಾರ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಇಷ್ಟವಾಗುತ್ತಿಲ್ಲ. ದೇಶಕ್ಕೆ ಸುಭದ್ರ ಸರ್ಕಾರ ಬೇಕಿದೆ.

01:25

ಹುಬ್ಬಳ್ಳಿ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕಲಬುರ್ಗಿಯಲ್ಲಿ ರಿಮೋಟ್ ಮೂಲಕ ಲೋಕಾರ್ಪಣೆ ಮಾಡಿದರು. 200 ಬೆಡ್ ಒಳಗೊಂಡ ಈ ಆಸ್ಪತ್ರೆಯನ್ನು ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಒಟ್ಟು ₹ 150 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

ಹುಬ್ಬಳ್ಳಿ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಹುಬ್ಬಳ್ಳಿ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

01:22

ಜನಧನ್ ಅಕೌಂಟ್, ಆಧಾರ್ ನಂಬರ್‌ಗಳಿಂದ ಭ್ರಷ್ಟಾಚಾರ ಕಡಿಮೆಯಾಗಿದೆ.ಕೇಂದ್ರ ಸರ್ಕಾರ ದೆಹಲಿಯಿಂದ 1 ರೂಪಾಯಿ ಕಳಿಸಿದರೆ ಅದರಲ್ಲಿ ಸಾಕಷ್ಟು ಸೋರಿಕೆಯಾಗುತ್ತೆ ಎನ್ನುವ ವಾತಾವರಣ ಈಗ ಇಲ್ಲ.

01:21

ಕಬ್ಬು ಬೆಳೆಗಾರರಿಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ರೈತರ ಕಷ್ಟ ನಾವು ಅರ್ಥ ಮಾಡಿಕೊಂಡಿದ್ದೇವೆ. ಅವರಿಗೆ ನೆರವಾಗಲೆಂದು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇವೆ.

01:18

ಮೋದಿ ಸರ್ಕಾರ ಇರುವವರೆಗೆ ಕಳ್ಳರ ಅಂಗಡಿ ತೆರೆಯಲು ಬಿಡುವುದಿಲ್ಲ. ಕಳ್ಳರಿಗೆ ಏನೂ ಮಾಡಲು ಆಗುವುದಿಲ್ಲ.

01:17

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಬಡ ರೈತರಿಗೆ ಹಣಕಾಸು ನೆರವು ನೀಡುತ್ತಿದ್ದೇವೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ದೊರೆಯಲಿದೆ.

01:16

ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರ ರೈತವಿರೋಧಿ. ಕುಮಾರಸ್ವಾಮಿ ಒಬ್ಬ ರಿಮೋಟ್ ಮುಖ್ಯಮಂತ್ರಿ. ಕೇಂದ್ರ ಸರ್ಕಾರಕ್ಕೆ ಅವರು ಸಹಕಾರ ಕೊಡುತ್ತಿಲ್ಲ. ನಾವು ಸಹಾಯಧನವನ್ನು ರೈತರ ಬ್ಯಾಂಕ್ ಅಕೌಂಟ್‌ಗೆ ಹಾಕುತ್ತಿದ್ದೇವೆ. ಇವರಿಗೆ ಏನು ಕಷ್ಟ? ಇವರು ಅಗತ್ಯ ಮಾಹಿತಿ ಕೊಡುತ್ತಿಲ್ಲ.

01:14

ಆಯುಷ್ಮಾನ್ ಭಾರತ ಯೋಜನೆಯಿಂದ ಬಡವರಿಗೆ ನೆರವಾಗಿದೆ.15 ವರ್ಷಗಳ ತೆರಿಗೆದಾರರ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿರಲಿಲ್ಲ

01:12

ಕೋಳಿ ಸಮಾಜದವರು ಇಲ್ಲಿ ನನ್ನನ್ನು ಅಭಿನಂದಿಸಿದರು. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸಣ್ಣ ಹಿಡುವಳಿದಾರರಿಗೆಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಸಹಾಯಧನ ಸಿಗುತ್ತದೆ.

01:10

ಬಂಜಾರ ಸಮುದಾಯದ ತಾಯಂದಿರು, ಸೋದರಿಯರು ಇಲ್ಲಿದ್ದಾರೆ. ಹಿಂದುಳಿದ ಸಮುದಾಯದವರಿಗಾಗಿ ಕಲ್ಯಾಣ ಮಂಡಳಿ ಸ್ಥಾಪಿಸಲು ಬಜೆಟ್‌ನಲ್ಲಿ ಹಣ ತೆಗೆದಿರಿಸಿದ್ದೇನೆ. ದೇಶದಲ್ಲಿ ಇದು ಮೊದಲ ಪ್ರಯತ್ನ.

01:08

ದೇಶದಲ್ಲಿ ಕೇವಲ 6 ಇಎಸ್‌ಐಸಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಒಂದು ಕರ್ನಾಟಕದಲ್ಲಿದೆ. ರಾಜಾಜಿನಗರದಲ್ಲಿ ನಿರ್ಮಿಸಲಾದ ಇಎಸ್‌ಐಸಿ ಕಾಲೇಜು ಉದ್ಘಾಟನೆ ಮಾಡಲಾಗಿದೆ.

01:07

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮನೆಗಳಿಂದ ದೂರ ಇರಬಹುದು. ಆದರೆ ಕೇಂದ್ರ ಸರ್ಕಾರ ಅವರ ಪರವಾಗಿ ಸದಾ ಕೆಲಸ ಮಾಡುತ್ತಿರುತ್ತದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಅಲ್ಲಿ ಮೂಲ ಸೌಕರ್ಯ ಸುಧಾರಣೆ, ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

01:06

ಇಡೀ ರಾಜ್ಯದಲ್ಲಿ ಆರೋಗ್ಯ ಯೋಜನೆ ವಿಸ್ತರಿಸಲಿದ್ದೇವೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿವೆ.

01:05

ದೇಶದಲ್ಲಿ ಕೇವಲ 6 ಇಎಸ್‌ಐಸಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಒಂದು ಕರ್ನಾಟಕದಲ್ಲಿದೆ. ರಾಜಾಜಿನಗರದಲ್ಲಿ ನಿರ್ಮಿಸಲಾದ ಇಎಸ್‌ಐಸಿ ಕಾಲೇಜು ಉದ್ಘಾಟನೆ ಮಾಡಲಾಗಿದೆ.

01:04

ನಾನು ನಿಮ್ಮಿಂದ ಕದಿಯುವವನಲ್ಲ;ಕೊಡುವವನು.

01:03

ಆಸ್ಪತ್ರೆಗಳ ಜೊತೆಜೊತೆಗೆ ಆಯುಷ್ಮಾನ್ ಭಾರತದಂಥ ಮಹತ್ವದ ಯೋಜನೆಯನ್ನೂ ನಾವು ಜಾರಿ ಮಾಡಿದ್ದೇವೆ. ಕರ್ನಾಟಕದ ಜನರಿಗೆ ಇದರಿಂದ ದೊಡ್ಡ ಲಾಭವಾಗುತ್ತಿದೆ.

01:00

ಕಲಬುರ್ಗಿಯ ಅಭಿವೃದ್ಧಿಗೆ ಕೇಂದ್ರದಲ್ಲಿಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಗಮನ ಕೊಡಲಿಲ್ಲ. ಅವರ ಕಾಲದಲ್ಲಿ ಸ್ಥಗಿತವಾಗಿದ್ದ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ.

12:59

ಈ ಭಾಗದ ಪೆಟ್ರೋಲಿಯಂ ಬೇಡಿಕೆ ಪೂರೈಸಲು ರಾಯಚೂರಿನಲ್ಲಿ ಡಿಪೊ ಆರಂಭಿಸಲಾಗಿದೆ. ಸಾಮಾನ್ಯ ಜನರು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ನಮ್ಮ ಆಸೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತೇವೆ.

12:57

ಬೀದರ್–ಕಲಬುರ್ಗಿ ರೈಲ್ವೆ ಲೈನ್, ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಹಲವು ಮೌಲಿಕ ಕೊಡಿಗೆಗಳನ್ನು ಕೊಟ್ಟಿದೆ.

12:53

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ:ಕಲಬುರ್ಗಿಗೆ ಬಂದಿದ್ದಕ್ಕೆ ಅತ್ಯಂತ ಸಂತೋಷವಾಗಿದೆ. ಇದು ಪರಿಶ್ರಮ ಮತ್ತು ಸೇವೆಗೆ ಪ್ರತೀಕವಾಗಿದೆ. ಕಲಬುರ್ಗಿಯ ಆರಾಧ್ಯ ದೇವತೆಗಳಾದ ಭಗವಾನ್ ಶರಣ ಬಸವೇಶ್ವರ, ಹನುಮಾನ್‌ಗೆ ನಮನಗಳು.

12:52

ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ.

12:50

ಕೋಲಿ ಸಮಾಜಕ್ಕೆ ಮೀಸಲು ಸೌಲಭ್ಯ ಕಲ್ಪಿಸಲು ಯಡಿಯೂರಪ್ಪ ಮನವಿ. ಕಾರ್ಯಕರ್ತರಿಗೆ ವಂದನೆ. ಸ್ವಾಗತ ಭಾಷಣ ಮುಕ್ತಾಯ.

12:49

‘ಕುಮಾರಸ್ವಾಮಿ ಸರ್ಕಾರ ಘೋಷಿಸಿರುವ ಸಾಲಮನ್ನಾ ದೊಡ್ಡ ಮೋಸ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿಲ್ಲ’ –ಯಡಿಯೂರಪ್ಪ.

ಮೋದಿಗೆ ರಾಜ್ಯಪಾಲರ ಸ್ವಾಗತ

ಬೀದರ್:ಹೈದರಾಬಾದ್‌ ಕರ್ನಾಟದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ 11.35ಕ್ಕೆ ಬೀದರ್‌ ವಾಯ ಪಡೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ರಾಜ್ಯಪಾಲ ವಜುಭಾಯಿವಾಲಾ ಅವರು ಮೋದಿ ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಬರ ಮಾಡಿಕೊಂಡರು. ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಇದ್ದರು. ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವೇರಿದ್ದು ಮೋದಿ ಅವರ ಕಲಬುರ್ಗಿ ಭೇಟಿಯೊಂದಿಗೆ ರಾಜ್ಯದಲ್ಲಿಯೂ ಚುನಾವಣೆ ಪ್ರಚಾರ, ಆರೋಪ–ಪ್ರತ್ಯಾರೋಪಗಳು ಬಿರುಸಾಗುವ ನಿರೀಕ್ಷೆ ಇದೆ.

ಪುಲ್ವಾಮಾ ದಾಳಿಯ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನಿನ್ನೆ ನೀಡಿದ ‘ದುರ್ಘಟನೆ’ ಹೇಳಿಕೆಯನ್ನು ಮೋದಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಖಂಡಿಸಿದ್ದರು. ಇಂದು (ಬುಧವಾರ) ಮುಂಜಾನೆ ದಿಗ್ವಿಜಯ ಸಿಂಗ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಬಿಜೆಪಿಗೆ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಮೋದಿ ಅವರು ಕಲಬುರ್ಗಿಯಲ್ಲಿ ಈ ಪ್ರಶ್ನೆಗಳನ್ನು ಪ್ರಸ್ತಾಪಿಸಬಹುದು ಎನ್ನುವ ನಿರೀಕ್ಷೆ ಇದೆ.

ಮೋದಿ ಅವರ ಕಲಬುರ್ಗಿ ಪ್ರವಾಸಪಟ್ಟಿ

ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಂತೆ ಮೋದಿ ಅವರು ಬೆಳಿಗ್ಗೆ 11.45ಕ್ಕೆ ಕಲಬುರ್ಗಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು.ಮಧ್ಯಾಹ್ನ 12.00ಕ್ಕೆಆಯುಷ್ಮಾನ್‌ ಭಾರತ್‌ ಫಲಾನುಭವಿಗಳೊಂದಿಗೆ ಸಂವಾದ,12.15ಕ್ಕೆಸಮಾವೇಶದ ವೇದಿಕೆಗೆ ಬಂದು ನಂತರ1.05ಕ್ಕೆತಮಿಳುನಾಡಿಗೆ ತೆರಳಬೇಕಿತ್ತು.

ಒಂದು ವಿಕೆಟ್‌ ಬಿದ್ದಿದೆ, ಇನ್ನಷ್ಟು ಬೀಳಲಿವೆ: ಅಶೋಕ

‘ರಾಜ್ಯ ಸರ್ಕಾರದ ಮೊದಲ ವಿಕೆಟ್‌ ಬಿದ್ದಿದೆ. ಇನ್ನಷ್ಟು ವಿಕೆಟ್‌ ಬೀಳಲಿವೆ. ಅವರವರೇ ವಿಕೆಟ್‌ ಕೆಡವುತ್ತಿದ್ದು, ಸರ್ಕಾರ ಪತನದ ಅಂಚಿಗೆ ತಲಪಲಿದೆ. ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡ ಇಲ್ಲ’ ಎಂದು ಪ್ರಧಾನಿ ರ‍್ಯಾಲಿಯ ಉಸ್ತುವಾರಿ, ಶಾಸಕ ಆರ್‌.ಅಶೋಕ ಹೇಳಿದರು. ಸಮಾವೇಶದ ಸಿದ್ಧತೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮತ್ತೊಮ್ಮೆ ಮೋದಿ;ಮಗದೊಮ್ಮೆ ಮೋದಿ’ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕೆ ನರೇಂದ್ರ ಚಾಲನೆ ನೀಡಲಿದ್ದಾರೆ ಎಂದರು.

‘ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ ಎಂದು ಬಿಂಬಿಸಲಾಗುತ್ತಿತ್ತು. ಈಗ ಹಾಗಿಲ್ಲ. ಪ್ರಧಾನಿ ಹುದ್ದೆಗೆ ಮೋದಿ ಮಾತ್ರ ಸೂಕ್ತ ವ್ಯಕ್ತಿ ಎಂಬ ಭಾವನೆ ದೇಶದ ಜನರಲ್ಲಿ ಬಂದಿದೆ. ದೇಶ ಮತ್ತು ರಾಜ್ಯದಲ್ಲಿ ಮಹಾಘಟಬಂಧನ್‌ನ ಕೊಂಡಿ ಕಳಚುತ್ತಿವೆ. ಇನ್ನೊಂದೆಡೆ ಎನ್‌ಡಿಎ ಬಲಗೊಳ್ಳುತ್ತಿದೆ. ಹಾಸನ, ಹೊಳೆನರಸೀಪುರಕ್ಕೆ ಸೀಮಿತವಾಗಿರುವ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಗೊತ್ತುಗುರಿಯೇ ಇಲ್ಲ. ಹೀಗಾಗಿ ರಾಜ್ಯ–ದೇಶದಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ’ ಎಂದರು.

ಶಾಸಕರ ರಾಜೀನಾಮೆ ಕೊಡಿಸುವ ಅಗತ್ಯವಿಲ್ಲ: ಯಡಿಯೂರಪ್ಪ

‘ಯಾವ ಶಾಸಕರ ರಾಜೀನಾಮೆಯನ್ನೂ ನಾವು ಕೊಡಿಸುವುದಿಲ್ಲ. ಅದರ ಅಗತ್ಯವೂ ನಮಗೆ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ‘28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು. ‘ಪ್ರಧಾನಿ ಮೋದಿ ಸಮ್ಮುಖದಲ್ಲಿ ಡಾ. ಉಮೇಶ ಜಾಧವ ಬಿಜೆಪಿ ಸೇರ್ಪಡೆ ಆಗುತ್ತಾರಾ’ ಎಂಬ ಪ್ರಶ್ನೆಗೆ, ‘ಜಾಧವ ಈಗಷ್ಟೇ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು’ ಎಂದರು.

‘ಬೆಂಕಿ ಅವಘಡ’ ತಪ್ಪಿಸಲು ಬಿಗಿ ಕ್ರಮ

ಬೆಂಗಳೂರಿನ ಯಲಹಂಕದಲ್ಲಿ ಏರ್‌ ಷೋ ವೇಳೆ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿಬಿದ್ದು ನೂರಾರು ಕಾರು ಭಸ್ಮವಾಗಿದ್ದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ, ಪ್ರಧಾನಿ ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ವಾಹನಗಳು ಸುರಕ್ಷತಾ ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪಾರ್ಕಿಂಗ್‌ ಸ್ಥಳದಲ್ಲಿಯ ವಾಹನಗಳ ಮುಂದಿನ ಗಾಜಿನ ಮೇಲೆ ಚಾಲಕರ ಹೆಸರು, ಮೊಬೈಲ್‌ ಸಂಖ್ಯೆ, ವಿಳಾಸ, ದಾಖಲೆಗಳ ಪ್ರತಿ ಅಂಟಿಸಬೇಕು. ವಾಹನ ನಿಲ್ಲಿಸಿದ ಸ್ಥಳದಲ್ಲಿಯೇ ಚಾಲಕರು ಇರಬೇಕು. ಬೆಂಕಿ ನಂದಿಸುವ ಸಲಕರಣೆ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಯನ್ನು ಕಡ್ಡಾಯವಾಗಿ ವಾಹನದಲ್ಲಿ ಇಡಬೇಕು ಎಂದು ಜಿಲ್ಲಾ ಪೊಲೀಸರು ನಿರ್ದೇಶನ ನೀಡಿದ್ದಾರೆ.

ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಪೊಟ್ಟಣ, ಲೈಟರ್‌ ಹಾಗೂ ಸಂಚಾರಿ ಹೋಟೆಲ್‌, ಗ್ಯಾಸ್‌ ಸಿಲಿಂಡರ್‌ ಬಳಕೆ ಮತ್ತು ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಹೊಗೆ ಅಥವಾ ಬೆಂಕಿ ಕಾಣಿಸಿಕೊಂಡರೆ ಪೊಲೀಸ್‌ ನಿಯಂತ್ರಣ ಕೊಠಡಿ (ಸಂಖ್ಯೆ 100)ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

2 ಸಾವಿರ ಪೊಲೀಸರು

‘ಡಿಎಆರ್ 9 ತುಕಡಿ, ಕೆಎಸ್‌ಆರ್‌ಪಿ 10 ತುಕಡಿ, ಎಸ್‌ಪಿ, ಹೆಚ್ಚುವರಿ ಎಸ್‌ಪಿ, ಇನ್‌ಸ್ಪೆಕ್ಟರ್ಸ್‌, ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಸೇರಿದಂತೆ ಕಲಬುರ್ಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ 1,800 ಸಿಬ್ಬಂದಿಯ್ನನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅವರ ಭೇಟಿ ಕಾರಣ ಮಾ.6ರಂದು ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ.

ಮೋದಿ ಅವರು ಸಾಗುವ ಪೊಲೀಸ್‌ ಪರೇಡ್‌ ಮೈದಾನದಿಂದ ಎನ್‌.ವಿ. ಮೈದಾನದವರೆಗಿನ ರಸ್ತೆ ಅಂದರೆಜಿಲ್ಲಾ ಸರ್ಕಾರಿ ಆಸ್ಪತ್ರೆ ಕ್ರಾಸ್‌ನಿಂದ, ಜಿಲ್ಲಾ ಪೊಲೀಸ್‌ ಭವನ, ಸಿದ್ದಿಪಾಷಾ ದರ್ಗಾ, ಎಸ್‌.ಎಂ.ಪಂಡಿತ ರಂಗಮಂದಿರ, ಗ್ರ್ಯಾಂಡ್‌ ಹೋಟೆಲ್‌, ಎನ್‌.ವಿ. ಮೈದಾನವರೆಗಿನ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಾರ್ಗ ಬದಲು:ಸೇಡಂ ರಿಂಗ್‌ ರಸ್ತೆಯಿಂದ ಬರುವ ವಾಹನಗಳು ಜಿಲ್ಲಾ ಆಸ್ಪತ್ರೆ ವೃತ್ತ, ಎಸ್‌ಟಿಬಿಟಿ ಮೂಲಕ ಜಗತ್‌ಸರ್ಕಲ್‌ ಮಾರ್ಗವಾಗಿ ಮಾರ್ಕೆಟ್‌ ಕಡೆಗೆ ಹೋಗಲು ಮತ್ತು ಸೇಡಂ ರಿಂಗ್‌ ರಸ್ತೆಯಿಂದ ಕೇಂದ್ರ ಬಸ್‌ ನಿಲ್ದಾಣ/ರೈಲ್ವೆ ನಿಲ್ದಾಣಕ್ಕೆ ಹೋಗುವವರು ನಾಗನಹಳ್ಳಿ ರಿಂಗ್‌ ರಸ್ತೆ ಮತ್ತು ರಾಮಮಂದಿರ ರಿಂಗ್‌ ರಸ್ತೆ ಮೂಲಕ ಹೋಗಬೇಕು.

ಬಸ್‌ ನಿಲ್ದಾಣ, ರಾಷ್ಟ್ರಪತಿ ವೃತ್ತ, ಎಸ್‌ವಿಪಿ ವೃತ್ತದ ಮೂಲಕ ಸೂಪರ್‌ ಮಾರ್ಕೆಟ್‌ ಅಥವಾ ಸೇಡಂ ಕಡೆಗೆ ಹೋಗುವ ವಾಹನಗಳು ಎಂಎಸ್‌ಕೆ ಮಿಲ್‌, ಹೀರಾಪುರ ರಿಂಗ್‌ ರಸ್ತೆ ಮೂಲಕ ಅಥವಾ ಎಸ್‌ವಿಪಿ ಸರ್ಕಲ್‌, ಮಿನಿ ವಿಧಾನಸೌಧದ ಎದುರುಗಡೆ ಐವಾನ್‌ ಇ ಶಾಹಿ ರಸ್ತೆಯಿಂದ ರಾಜಾಪುರ/ನಾಗನಹಳ್ಳಿ ಮಾರ್ಗವಾಗಿ ಸಂಚರಿಸಬೇಕು.

ಆಳಂದ ರಿಂಗ್‌ ರಸ್ತೆಯಿಂದ ಸಂಚರಿಸುವ ವಾಹನಗಳು ಶಹಾ ಬಜಾರ್‌ ನಾಕಾ ಪ್ರಕಾಶ ಟಾಕೀಸ್‌ ಮೂಲಕ ಹೋಗುವಂತೆ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ವಾಹನ ನಿಲುಗಡೆ: ಬೀದರ್‌, ಆಳಂದ ಕಡೆಯಿಂದ ಬರುವ ವಾಹನಗಳಿಗೆ ಎಸ್‌.ಬಿ. ದೇವಸ್ಥಾನ ಆವರಣ ಮತ್ತು ಜಾತ್ರಾ ಮೈದಾನದಲ್ಲಿ ನಿಲುಗಡೆ ಕಲ್ಪಿಸಲಾಗಿದೆ.ಹುಮನಾಬಾದ್‌ ರಿಂಗ್‌ ರಸ್ತೆಯಿಂದ ಆಳಂದ ರಿಂಗ್‌ ರಸ್ತೆ ಮೂಲಕ ಶಹಾಬಜಾರ್‌ ನಾಕಾ ಲಾಲಗೇರಿ ಕ್ರಾಸ್‌ ಮಾರ್ಗವಾಗಿ ಪಾರ್ಕಿಂಗ್‌ ಸ್ಥಳಕ್ಕೆ ಹೋಗಬೇಕು.

ಜೇವರ್ಗಿ ಮತ್ತು ಅಫಜಲಪುರ, ಶಹಾಪುರ ಕಡೆಯಿಂದ ಬರುವ ವಾಹನಗಳಿಗೆ ಎಸ್‌.ಬಿ. ಕಾಲೇಜು ಮೈದಾನದಲ್ಲಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವಾಹನಗಳು ರಾಮಮಂದಿರ ವೃತ್ತದಿಂದ ಆರ್‌ಪಿ ಸರ್ಕಲ್‌ ಮೂಲಕ ಎಸ್‌ಬಿ ಕಾಲೇಜು ಮೈದಾನಕ್ಕೆ ಸಾಗಬೇಕು. ಸೇಡಂ ಮತ್ತು ಶಹಾಬಾದ್‌ ರಸ್ತೆಯಿಂದ ಬರುವ ವಾಹನಗಳಿಗೆ ಪಬ್ಲಿಕ್‌ ಗಾರ್ಡನ್‌ನ ವೀರಶೈವ ಕಲ್ಯಾಣ ಮಂಟಪ ಹತ್ತಿರ ನಿಲುಗಡೆ ಕಲ್ಪಿಸಲಾಗಿದೆ. ಈ ವಾಹನಗಳು ಆರ್‌ಟಿಒ ಕ್ರಾಸ್‌, ಟಾನ್‌ಹಾಲ್‌ ಮೂಲಕ ಸಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT