‘ನಾಗಲಕ್ಷ್ಮಿಬಾಯಿ ಅಧ್ಯಕ್ಷರಾಗಿ ಇರಲು ನಾಲಾಯಕ್’

7
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ. ನೀಲಾ ಟೀಕೆ

‘ನಾಗಲಕ್ಷ್ಮಿಬಾಯಿ ಅಧ್ಯಕ್ಷರಾಗಿ ಇರಲು ನಾಲಾಯಕ್’

Published:
Updated:
Prajavani

ಯಾದಗಿರಿ: ‘ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳ ಹರಣ ಆಗುತ್ತಿದ್ದರೂ ಅವರತ್ತ ತಿರುಗಿಯೂ ನೋಡದ ನಾಗಲಕ್ಷ್ಮಿಬಾಯಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಮುಂದುವರಿಯಲು ನಾಲಾಯಕ್‌ ಆಗಿದ್ದಾರೆ’ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ.ನೀಲಾ ಕಟುವಾಗಿ ಟೀಕಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಮಹತ್ವದ ತೀರ್ಪು. ಅದನ್ನು ರಾಜ್ಯದ ಮಹಿಳಾ ಆಯೋಗ ಸ್ವಾಗತಿಸಬೇಕು. ಆದರೆ, ನಾಗಲಕ್ಷ್ಮಿ ಬಾಯಿ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆ ಪ್ರವೇಶ ವಿಷಯದಲ್ಲಿ ತಾವು ಮಹಿಳೆಯರ ಪರ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ದೇಗುಲ ಪ್ರವೇಶ ಸಾಂವಿಧಾನಿಕ ಹಕ್ಕು. ಮಹಿಳಾ ಆಯೋಗ ಅಧ್ಯಕ್ಷರು ಸಂವಿಧಾನ ಪಾಲಿಸಬೇಕು. ಅದನ್ನು ಬಿಟ್ಟು ಮನುಸ್ಮೃತಿ ಪಾಲಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮಹಿಳೆಯರ ರಕ್ಷಣೆಗಾಗಿ ಆಯೋಗ ಇದೆ. ಅದರ ಅಧ್ಯಕ್ಷರಾದವರು ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡಬೇಕು. ಆದರೆ, ಅಂತಹ ಕೆಲಸಗಳೇ ರಾಜ್ಯದಲ್ಲಿ ನಡೆಯುತ್ತಿಲ್ಲ. ಹಿಂದೆ ಮಂಜುಳಾ ಅವರು ಅಧ್ಯಕ್ಷರಾಗಿದ್ದ ವೇಳೆ ರಾಜ್ಯದಲ್ಲಿನ ಯುವತಿಯರ ಗರ್ಭಾಶಯಕ್ಕೆ ಬೀಳುತ್ತಿರುವ ಕತ್ತರಿ ಕುರಿತು ಒಂದು ತನಿಖಾ ತಂಡ ರಚಿಸಿದ್ದರು’ ಎಂದು ತಿಳಿಸಿದರು.

‘ತನಿಖಾ ತಂಡ ಕಷ್ಟಪಟ್ಟು ವರದಿ ತಯಾರಿಸಿ ಆಯೋಗಕ್ಕೆ ನೀಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಈಚೆಗೆ ದೇವದಾಸಿ ಪದ್ಧತಿ ಬೇರೆ ಸ್ವರೂಪ ಪಡೆದಿದೆ. ಬಾಲ್ಯ ವಿವಾಹ ಹೆಚ್ಚುತ್ತಿವೆ. ಅವರಿಂದ ಯಾವ ಸ್ಪಂದನೆಯು ಸಿಗುತ್ತಿಲ್ಲ’ ಎಂದರು.

‘ಸರ್ಕಾರ ಕೂಡಲೇ ಮಹಿಳಾ ಆಯೋಗದ ಅಧ್ಯಕ್ಷರನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಮಹಿಳಾ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !