ವಿ.ವಿಯಲ್ಲಿ ನನ್ನ ಎಜುಕೇಷನ್ ಟೆರರಿಸ್ಟ್ ಅಂತಾರೆ: ಮಾರುತಿರಾವ್‌

7
ನ್ಯಾ.ದತ್ತು ಮುಂದೆ ತರಹೇವಾರಿ ದೂರುಗಳು

ವಿ.ವಿಯಲ್ಲಿ ನನ್ನ ಎಜುಕೇಷನ್ ಟೆರರಿಸ್ಟ್ ಅಂತಾರೆ: ಮಾರುತಿರಾವ್‌

Published:
Updated:
Deccan Herald

ಬೆಂಗಳೂರು: ‘ಸ್ವಾಮಿ.. ವಿಶ್ವವಿದ್ಯಾಲಯದಲ್ಲಿ ಎಲ್ಲರೂ ನನ್ನನ್ನು ‘ಎಜುಕೇಷನ್ ಟೆರರಿಸ್ಟ್’ ಅಂತ ಕರೀತಾರೆ. ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಮೇಲಿನವರು, ವಿದ್ಯಾರ್ಥಿಗಳ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ...’

ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ ಪ್ರಾಧ್ಯಾಪಕ ಮಾರುತಿರಾವ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ನ್ಯಾ.ಎಚ್.ಎಲ್.ದತ್ತು ಅವರ ಮುಂದೆ ಅವಲತ್ತುಕೊಂಡ ಪರಿ ಇದು.

ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ವಿಕಾಸಸೌಧದಲ್ಲಿ ಗುರುವಾರ ಎನ್‌ಎಚ್‌ಆರ್‌ಸಿಯಿಂದ ಬಹಿರಂಗ ವಿಚಾರಣೆ ನಡೆಯಿತು. ಅಧ್ಯಕ್ಷರು ಸೇರಿದಂತೆ ಆಯೋಗದ ಸದಸ್ಯರು ನಾಲ್ಕು ಕೊಠಡಿಗಳಲ್ಲಿ ವಿಚಾರಣೆ ನಡೆಸಿದರು.

ಮಾರುತಿರಾವ್ ದೂರನ್ನು ಪರಿಶೀಲಿಸಿದ ದತ್ತು, ‘ನಿಮ್ಮ ಸೇವೆ, ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ದೂರುಗಳು ಇವೆಯಲ್ಲ. ಇಂಥ ನಡುವಳಿಕೆ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡುತ್ತೀರಿ’ ಎಂದು ಪ್ರಶ್ನಿಸಿದರು. ಅದಕ್ಕೆ, ‘ಇಲ್ಲ ಸ್ವಾಮಿ.. ಎಲ್ಲರೂ ನನ್ನ ವಿರುದ್ಧವಾಗಿದ್ದಾರೆ’ ಎಂದು ಅವರು ಸಮಜಾಯಿಷಿ ನೀಡಿದರು. ‘ಇದೆಲ್ಲ ಆಯೋಗಕ್ಕೆ ಬರುವಂಥ ಪ್ರಕರಣವಲ್ಲ. ಹೋಗಿ.. ನಿಮ್ಮ ಕೆಲಸದ ಬಗ್ಗೆ ಗಮನಕೊಡಿ’ ಎಂದು ಬುದ್ಧಿ ಹೇಳಿ ಪ್ರಕರಣ ಮುಕ್ತಾಯಗೊಳಿಸಿದರು.

ಮಹಿಳೆಗೆ ತರಾಟೆ:  ‘ಪತಿಗೆ ಅನ್ಯಾಯವಾಗಿದೆ’ ಎಂದು ದೂರಿದ್ದ ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ಉದ್ಯೋಗಿಯೊಬ್ಬರ ಪತ್ನಿ ಮಾಧವಿ ಮುಕುಂದ ಪದ್ಮಾರೆ ಅವರನ್ನು ಆಯೋಗದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.

ಕಾರ್ಯದರ್ಶಿಯನ್ನು ಕರೆತನ್ನಿ: ‘ಉನ್ನತ ಶಿಕ್ಷಣಕ್ಕೆ ಅವಕಾಶ ಕೋರಿ ನಾನು ಹಾಗೂ ಸಹೋದ್ಯೋಗಿ ಒಟ್ಟಿಗೇ ಅರ್ಜಿ ಸಲ್ಲಿಸಿದ್ದರೂ, ನನ್ನ ಅರ್ಜಿಯನ್ನು ತಿರಸ್ಕರಿಸಿ ಸಹೋದ್ಯೋಗಿಗೆ ಅವಕಾಶ ಕೊಡಲಾಗಿದೆ’ ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ರವಿ ಕಿರಣ್ ದೂರಿದರು.

ಅದನ್ನು ಪರಿಶೀಲಿಸಿದ ದತ್ತು, ‘ದಾಖಲೆಗಳೆಲ್ಲ ಸರಿ ಇದ್ದರೂ ಏಕೆ ಅವಕಾಶ ಕೊಟ್ಟಿಲ್ಲ. ಯಾವ ಮಾನದಂಡ ಆಧರಿಸಿ ಅರ್ಜಿ ತಿರಸ್ಕರಿಸಿದಿರಿ. ಮಧ್ಯಾಹ್ನದೊಳಗೆ ಇಲಾಖೆ ಕಾರ್ಯದರ್ಶಿಯೊಂದಿಗೆ ಬಂದು ವಿವರಣೆ ಕೊಡಿ. ಇಲ್ಲವಾದರೆ, ದೂರುದಾರರಿಗೆ ಪ್ರತಿ ವರ್ಷ ₹ 4 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸುತ್ತೇನೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು.

ಮಧ್ಯಾಹ್ನ ವಿಚಾರಣೆಗೆ ಹಾಜರಾದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ‘ಏನು ಲೋಪವಾಗಿದೆ ಪರಿಶೀಲಿಸಿ ಕ್ರಮ ತೆಗದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. ಆ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ನಿರ್ದೇರ್ಶಿಸಿದ ದತ್ತು, ಪ್ರಕರಣದ ವಿಚಾರಣೆಯನ್ನು ಬಾಕಿ ಇಟ್ಟಿದ್ದಾರೆ.

‘ಕರ್ನಾಟಕ ಎಟಿಆರ್ ಕೊಟ್ಟಿಲ್ಲ’
‘ಮಾನವ ಹಕ್ಕುಗಳ ರಕ್ಷಣೆ ಹಾಗೂ ಉಲ್ಲಂಘನೆ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ (ಎಟಿಆರ್) ನೀಡುವಂತೆ ಶಿಫಾರಸು ಮಾಡಿ ವರ್ಷವೇ ಕಳೆದರೂ ಕರ್ನಾಟಕದಿಂದ ಆಯೋಗಕ್ಕೆ ಇನ್ನೂ ಎಟಿಆರ್ ಸಲ್ಲಿಕೆಯಾಗಿಲ್ಲ’ ಎಂದು ನ್ಯಾ.ದತ್ತು ಬೇಸರ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !