ಶಾಲೆಯ ಚಾವಣಿ ಕುಸಿಯುವ ಭೀತಿ

7
ತಾಲ್ಲೂಕು ಕೇಂದ್ರದಲ್ಲಿದ್ದರೂ ದುರಸ್ತಿ ಕಾಣದ ಸರ್ಕಾರಿ ಶಾಲೆ, ಬಿರುಕು ಬಿಟ್ಟ ಗೋಡೆಗಳು

ಶಾಲೆಯ ಚಾವಣಿ ಕುಸಿಯುವ ಭೀತಿ

Published:
Updated:
Deccan Herald

ಹೊಳಲ್ಕೆರೆ: ‘ಚಾವಣಿ ಕುಸಿದು ಕೊಠಡಿಯ ಒಳಗೆ ಬಿದ್ದಿರುವ ಹೆಂಚು, ರೀಪರ್‌ಗಳು. ಕೈ ತೂರಿಸುವಷ್ಟು ಅಗಲ ಬಿರುಕು ಬಿಟ್ಟ ಗೋಡೆಗಳು. ಬಿರುಕಿನಿಂದ ಆಗಾಗ ಹೊರಬರುವ ಹಾವು, ಚೇಳು, ಶಾಲೆಯ ಗೋಡೆ ಯಾವಾಗ ಬೀಳುತ್ತದೋ ಎಂಬ ಆತಂಕದಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು. ಹಾಳು ಕೊಂಪೆ ನೆನಪಿಸುವ ಶಾಲಾ ಕೊಠಡಿಗಳು…’

-ಪಟ್ಟಣದ ಶಿವಮೊಗ್ಗ ರಸ್ತೆಯ ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಎನ್.ಇ.ಎಸ್.ಶಾಲೆ) ಸ್ಥಿತಿ ಇದು.

ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 70 ವಿದ್ಯಾರ್ಥಿಗಳಿದ್ದು, ಪ್ರತಿ ನಿತ್ಯ ಭಯದ ‍ಪಾಠ ಕೇಳುತ್ತಿದ್ದಾರೆ. 1963ರಲ್ಲಿ ಈ ಶಾಲೆ ಪ್ರಾರಂಭವಾಗಿದ್ದು, 1979ರಲ್ಲಿ 6 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಒಂದು ಕೊಠಡಿಯ ಚಾವಣಿ ಕುಸಿದು ಬಿದ್ದಿದ್ದು, ಮತ್ತೊಂದು ಕೊಠಡಿ ಕುಸಿಯುವ ಹಂತದಲ್ಲಿದೆ. ಉಳಿದ ನಾಲ್ಕು ಕೊಠಡಿಗಳೂ ಶಿಥಿಲಗೊಂಡಿದ್ದು, ಬಳಕೆಗೆ ಯೋಗ್ಯವಾಗಿಲ್ಲ.

ಶಿಕ್ಷಕರು ವಿದ್ಯಾರ್ಥಿಗಳನ್ನು ಅನಿವಾರ್ಯವಾಗಿ ಶಿಥಿಲಗೊಂಡ ಕೊಠಡಿಯಲ್ಲೇ ಕೂರಿಸಿ ಬೋಧನೆ ಮಾಡುತ್ತಿದ್ದಾರೆ. ಕೊಠಡಿಯ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಮಳೆ ನೀರು ಗೋಡೆಗಳ ಒಳಗೆ ಹೋಗುತ್ತಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಕೊಠಡಿಯ ಒಳಭಾಗದಲ್ಲೂ ಬಿರುಕುಗಳಿದ್ದು, ಹಾವು, ಚೇಳು ಸೇರಿಕೊಂಡಿವೆ.

ದಾಖಲಾತಿ ಕುಸಿತ: ‘ಶಾಲೆಯಲ್ಲಿ ಕಳೆದ ವರ್ಷ 95 ವಿದ್ಯಾರ್ಥಿಗಳು ಓದುತ್ತಿದ್ದರು. ಶಾಲೆಯ ಕಟ್ಟಡದ ದುಃಸ್ಥಿತಿಯಿಂದ ಈ ವರ್ಷ ದಾಖಲಾತಿ ಸಂಖ್ಯೆ ಕಡಿಮೆಯಾಗಿದ್ದು, ಈಗ 70 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶೇ 90ರಷ್ಟು ವಿದ್ಯಾರ್ಥಿಗಳಿದ್ದಾರೆ. ಹೊರ ತಾಲ್ಲೂಕು, ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಪಟ್ಟಣದ ಹಾಸ್ಟೆಲ್‌ಗಳಲ್ಲಿ ವಾಸವಿದ್ದು, ನಮ್ಮ ಶಾಲೆಗೆ ಬರುತ್ತಾರೆ. ಆದರೆ ಶಾಲೆಯು ಈಗ ಕೊಠಡಿಗಳಿಲ್ಲದೆ ಸೊರಗುತ್ತಿದೆ. ಶಾಲಾ ದಾಖಲಾತಿ ಪಡೆಯಲು ಬರುವ ಹಿರಿಯ ವಿದ್ಯಾರ್ಥಿಗಳು ಶಾಲೆಯ ದುಃಸ್ಥಿತಿ ಕಂಡು ಮರುಗುತ್ತಾರೆ’ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಎಂ.ಉಚ್ಚಂಗಪ್ಪ.

‘ತಾಲ್ಲೂಕು ಕೇಂದ್ರದಲ್ಲಿದ್ದರೂ ಇದುವರೆಗೆ ಹೊಸ ಕೊಠಡಿ ನಿರ್ಮಿಸದಿರುವುದು ಆಶ್ಚರ್ಯ ತಂದಿದೆ. ಶಾಲೆಯ ಹಿಂದೆ ಸರ್ಕಾರದ ಜಾಗವಿದ್ದು, ಅಲ್ಲಿ ಕನಿಷ್ಠ 5 ಕೊಠಡಿಗಳ ಹೊಸ ಕಟ್ಟಡ ನಿರ್ಮಿಸಬೇಕು. ನಂತರ ಹಳೆಯ ಕಟ್ಟಡವನ್ನು ನೆಲಸಮ ಮಾಡಿ, ಶಾಲೆಯ ಸುತ್ತ ಸುಸಜ್ಜಿತ ಕಾಂಪೌಂಡ್ ನಿರ್ಮಿಸಬೇಕು’ ಎನ್ನುತ್ತಾರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಪ್ರಕಾಶ್.

ಒಂದು ಕಾಲದಲ್ಲಿ ಪ್ರತಿಷ್ಠಿತ ಶಾಲೆ !

ಹಿಂದೆ ಇದು ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿತ್ತು. 90ರ ದಶಕದಲ್ಲಿ 300 ರಿಂದ 400 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದರು. ಅಧಿಕಾರಿಗಳು, ಶ್ರೀಮಂತರು, ಉದ್ಯಮಿಗಳು ಕೂಡ ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸುತ್ತಿದ್ದರು. ಆಗ ಚನ್ನಗಿರಿ, ಹೊಸದುರ್ಗ, ಚಿತ್ರದುರ್ಗ ತಾಲ್ಲೂಕುಗಳ ವಿದ್ಯಾರ್ಥಿಗಳೂ ಈ ಶಾಲೆಗೆ ಬರುತ್ತಿದ್ದರು. ಈ ಶಾಲೆಯಲ್ಲಿ ಓದಿದ ಅನೇಕರು ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !