ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆ ರಂಗೋತ್ಸವದಲ್ಲಿ ನಾಳೆ ‘ಅವ್ವೈ’

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕವಯತ್ರಿಯ ಮೇಲೆ ಸಮಾಜ ಹೊದಿಸಿದ ಇಳಿವಯಸ್ಸು ಎನ್ನುವ ಪೊಳ್ಳು ಚಾದರವನ್ನು ‘ಅವ್ವೈ’ ತಮಿಳು ನಾಟಕ ಪ್ರಶ್ನಿಸುತ್ತದೆ. ಸಮಾಜದ ನಿರ್ಬಂಧವನ್ನು ಇದು ಗಟ್ಟಿ ಮತ್ತು ಸ್ಪಷ್ಟ ದನಿಯಲ್ಲಿ ನಿರಾಕರಿಸುತ್ತದೆ. ಇಳಿವಯಸ್ಸು ನಿಸರ್ಗ ಸಹಜ, ಅದಕ್ಕೆ ಅದರದೇ ಆದ ಸೌಂದರ್ಯವಿದೆ. ಆದರೆ ಗಂಡು ಸಮಾಜ ಅದನ್ನೊಂದು ಕೊರತೆಯಾಗಿ, ಋಣಾತ್ಮಕ ಅಂಶವಾಗಿ ನೋಡುತ್ತದೆ. ನಾಟಕ ಆ ಪೊರೆಯನ್ನು ಕಳಚಿ ಕಣ್ಣಿಗೆ ಹಿಡಿಯುತ್ತದೆ.

ಸಂಗಂ ಕಾಲದಲ್ಲಿನ ಬದುಕಿನ ದೃಷ್ಟಿಕೋನವನ್ನು ಸಹ ನಾಟಕ ತೆರೆದಿಡುತ್ತದೆ. ಸರ್ವ ದೇವತಾರಾಧನೆಯನ್ನು ಪ್ರತಿಪಾದಿಸಿದ್ದ, ಬದುಕಿನ ವಾಸ್ತವಗಳಿಗೆ ಹತ್ತಿರವಾಗಿದ್ದ ಸಂಗಂ ಸಾಹಿತ್ಯವನ್ನು ಇಂದಿಗೂ ಸರಿಯಾಗಿ ವಿಶ್ಲೇಷಿಸಲಾಗಿಲ್ಲ. ಅದು ವಾಸ್ತವದ ನೆಲೆಯಲ್ಲಿ ತಮಿಳು ಮನಸ್ಸಿನ ವಿಶ್ಲೇಷಣೆಗೆ ಅಪಾರವಾಗಿ ನೆರವಾಗುತ್ತದೆ. ಸತ್ಯ ಮತ್ತು ಮಿಥ್ಯದ ನಡುವಿನ ವ್ಯತ್ಯಾಸವನ್ನು ಅದು ತಿಳಿಸುತ್ತದೆ. 'ಅವ್ವೈ' ಅಂತಹ ಒಂದು ಪ್ರಯತ್ನ.

ಮಂಗೈ ನಿರ್ದೇಶಕರ ಬಗ್ಗೆ

‘ಮಂಗೈ’  ಡಾ.ವಿ. ಪದ್ಮಾ ಅವರ ಕಾವ್ಯನಾಮ. ತಮಿಳು ರಂಗಭೂಮಿಯಲ್ಲಿ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ನಾಟಕಕಾರ್ತಿಯಾಗಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ಪದ್ಮಾ, ರಂಗಭೂಮಿಯಲ್ಲಿ ತಮ್ಮ ಶೈಕ್ಷಣಿಕ, ಕಲಾತ್ಮಕ ಮತ್ತು ಆಕ್ಟಿವಿಸ್ಟ್ ವ್ಯಕ್ತಿತ್ವಗಳು ಸಂಧಿಸುತ್ತವೆ ಎನ್ನುವ ವಿಶ್ವಾಸ ಇಟ್ಟುಕೊಂಡಿದ್ದಾರೆ.

ತಂಡದ ಬಗ್ಗೆ

‘ಮರಪ್ಪಾಚಿ’ ಎನ್‌ಜಿಒ ಆಗಿ ನೋಂದಾಯಿಸಿಕೊಂಡು ಕೆಲಸ ಮಾಡುತ್ತಿರುವ ಒಂದು ಸಾಂಸ್ಕೃತಿಕ ತಂಡ. ಇಂಕ್ವಿಲಾಬ್ ಇದರ ಸ್ಥಾಪಕ ಅಧ್ಯಕ್ಷರು. ಸಮಾಜದಲ್ಲಿ ಅಂತರ್ಗತವಾಗಿ ಹೋಗಿರುವ ಜಾತಿ, ವರ್ಗ ಮತ್ತು ಲಿಂಗದ ಬಗೆಗಿನ ಸಾಮಾಜಿಕ ಪೂರ್ವಗ್ರಹಗಳನ್ನು ಈ ತಂಡದ  ನಾಟಕಗಳು ತೀವ್ರವಾಗಿ ಪ್ರಶ್ನಿಸುತ್ತವೆ. ವಿದ್ಯಾರ್ಥಿಗಳು, ಕಲಾ ಅಭ್ಯಾಸಿಗಳು ಮತ್ತು ಸಾಮಾಜಿಕ ಸಮುದಾಯಗಳಿಗೆ ತಂಡ ತರಬೇತಿಯನ್ನು ಕೊಡುತ್ತಾ ಸಾಮಾಜಿಕ ಬದಲಾವಣೆಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಅವರ ಕೆಲವು ಮುಖ್ಯ ರಂಗಪ್ರಸ್ತುತಿಗಳು, ಇಂಕ್ವಿಲಾಬ್ ಅವರ ‘ಕುರಿಂಜಿ ಪಟ್ಟು’ ಮತ್ತು ವಿ. ಗೀತಾ ಅವರ ‘ಸುದಾಲೈಮ್ಮ’ ಮತ್ತು ‘ವಾಕ್ಕುಮೂಲಂ’. ರಂಗ ಚರಿತ್ರೆ ಮತ್ತು ರಂಗ ವಿಮರ್ಶೆ ಕುರಿತು ಸಂವಾದ ಕೂಡ ‘ಮರಪ್ಪಾಚಿ’ ತಂಡದ ಆಸಕ್ತಿಕರ ವಿಷಯ.

ಸಿಜಿಕೆ ರಾಷ್ಟ್ರೀಯ ರಂಗೋತ್ಸವ

‘ಚಿತ್ರಕೂಟ’ದಲ್ಲಿ ಚಿಕ್ಕ ಸುರೇಶ ನೆನಪಿನ ಕಿರುಚಿತ್ರ ಪ್ರದರ್ಶನ: ಭಾನುವಾರ ಸಂಜೆ 4.30ಕ್ಕೆ ‘ದಾಳಿ’ ಕಿರುಚಿತ್ರ ಪ್ರದರ್ಶನ, ನಿರ್ದೇಶನ–ಮೇದಿನಿ ಕೆಳಮನೆ.

‘ಕಥಾ ಪಡಸಾಲೆ’ ಕಥನ ಕೌತುಕ ಮಾಲೆ ಸಂಜೆ 5.15ಕ್ಕೆ ಕಿಡ್ ಅಂಡ್ ಪೇರೆಂಟ್ಸ್‌ ಫೌಂಡೇಷನ್‌ನ ಅಪರ್ಣ ಅತ್ರೇಯ ಅವರಿಂದ. ಸಂಜೆ 6ಕ್ಕೆ ರಂಗ ವಸಂತ ಗೌರವ. ರಾತ್ರಿ 7ಕ್ಕೆ ‘ಅವ್ವೈ’ ನಾಟಕ ಪ್ರದರ್ಶನ: ಭಾಷೆ–ತಮಿಳು, ಪ್ರಸ್ತುತಿ–ಮರಪ್ಪಚ್ಚಿ, ಚೆನ್ನೈ, ರಚನೆ– ಇಂಕ್ವಿಲಾಬ್, ನಿರ್ದೇಶನ– ಎ ಮಂಗೈ. ಆಯೋಜನೆ–ರಂಗನಿರಂತರ, ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.

‌ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಉದ್ಘಾಟನಾ ಸಮಾರಂಭ: ಶನಿವಾರ ಸಂಜೆ 6.45ಕ್ಕೆ ರಂಗಗೀತೆಗಳು–ದಿಶಾ ರಮೇಶ್, ರಾತ್ರಿ 7ಕ್ಕೆ ಬುರ್ರ್‌ ಬುಡ್ಬುಡಿಕೆ ‘ಟಂಕ್‌ಣಕ್‌ಣ್‌ ಟಞ’–ಅರುಣ್ ಸಾಗರ್ ಮತ್ತು ಗೆಳೆಯರು. ರಾತ್ರಿ 7.20ಕ್ಕೆ ರಂಗೋತ್ಸವಕ್ಕೆ ಚಾಲನೆ–ಡಾ.ರಾಜೇಂದ್ರ ಚೆನ್ನಿ, ಪ್ರಾಸ್ತಾವಿಕ ನುಡಿ–ಜೆ.ಲೋಕೇಶ್‌, ಅತಿಥಿ–ಎನ್.ಆರ್.ವಿಶುಕುಮಾರ್, ಡಾ.ವಿಜಯಾ, ಬಿ.ವಿಠಲ್ (ಅಪ್ಪಯ್ಯ), ಅಧ್ಯಕ್ಷತೆ–ಡಾ.ಡಿ.ಕೆ.ಚೌಟ. ‘ಸತ್ಯ ಹುಡುಕೋದು ಅಂದ್ರೆ...’ ಏಕವ್ಯಕ್ತಿ ನಾಟಕ ಪ್ರದರ್ಶನ–ದು. ಸರಸ್ವತಿ. ಆಯೋಜನೆ– ರಂಗನಿರಂತರ, ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT