ಖಾಸಗಿ ಕೃಷಿ ಕಾಲೇಜುಗಳಿಗೆ ನಿರ್ಬಂಧವಿಲ್ಲ: ಶಿವಶಂಕರ ರೆಡ್ಡಿ

7
ಖಾಸಗಿ ವಿವಿಯಲ್ಲಿ ಕೃಷಿ ಬೋಧನೆಗೆ ನಿರ್ಬಂಧ

ಖಾಸಗಿ ಕೃಷಿ ಕಾಲೇಜುಗಳಿಗೆ ನಿರ್ಬಂಧವಿಲ್ಲ: ಶಿವಶಂಕರ ರೆಡ್ಡಿ

Published:
Updated:
ವಿಧಾನಪರಿಷತ್ತಿನಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿದರು

ಬೆಂಗಳೂರು: ರಾಜ್ಯದಲ್ಲಿ ಖಾಸಗಿಯವರು ಕೃಷಿ ಕಾಲೇಜುಗಳನ್ನು ಆರಂಭಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಸ್ಪಷ್ಟಪಡಿಸಿದರು.

ಕೃಷಿ ಕಾಲೇಜುಗಳು ಸರ್ಕಾರದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತವೆ ಎಂದು ಅವರು ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಎನ್‌.ರವಿಕುಮಾರ್‌ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು. 

ಬೆಂಗಳೂರು ಮತ್ತು ಧಾರವಾಡ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಖಾಸಗಿ ಕೃಷಿ ಕಾಲೇಜುಗಳನ್ನು ಆರಂಭಿಸಲು ಕೆಲವು ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಆದರೆ, ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳು ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಖಾಸಗಿ ವಿವಿಯಲ್ಲಿ ಬೋಧನೆಗೆ ನಿರ್ಬಂಧ: ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಸಂಬಂಧಿಸಿದ ವಿಷಯಗಳನ್ನು ಬೋಧನೆ ಮಾಡದಂತೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಆದರೆ, ಈ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಸರ್ಕಾರಿ ಕೃಷಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಸಿಇಟಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಡೊನೇಷನ್ ಪಡೆಯಲಾಗುತ್ತಿದೆ ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಕೃಷ್ಣ ಬೈರೇಗೌಡ, 2012 ರಲ್ಲಿ  ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಯನ್ನು ಉಭಯ ಸದನಗಳು ಅಂಗೀಕಾರ ಮಾಡಿದ್ದವು.  ರೈ ಟೆಕ್ನಾಲಜಿ ವಿಶ್ವವಿದ್ಯಾಲಯದ ಮಸೂದೆಯೂ ಆಗಲೇ ಅಂಗೀಕಾರವಾಗಿತ್ತು. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ (ಐಸಿಎಆರ್‌) ಮಾನ್ಯತೆಗಾಗಿ ಮೂರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದೆ. ಆದರೆ, ಇನ್ನೂ ಅನುಮೋದನೆ ನೀಡಿಲ್ಲ. ಇದೊಂದು ಸ್ವತಂತ್ರ ವಿಶ್ವವಿದ್ಯಾಲಯ ಆಗಿರುವುದರಿಂದ ಸರ್ಕಾರಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಖಾಸಗಿ ಕೃಷಿ ಕಾಲೇಜುಗಳನ್ನು ಆರಂಭಿಸಲು ಈಗಾಗಲೇ ಅವಕಾಶ ಇದೆ ಎಂದೂ ತಿಳಿಸಿದರು.

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಮಾತನಾಡಿ, ಕೃಷಿ ಶಿಕ್ಷಣಕ್ಕೆ ವ್ಯಾಪಕ ಬೇಡಿಕೆ ಇರುವುದರಿಂದ ಖಾಸಗಿಯವರು ಕೃಷಿ ಕಾಲೇಜುಗಳನ್ನು ಆರಂಭಿಸಲು ಅವಕಾಶ ನೀಡಬೇಕು. ಅದಕ್ಕೆ ಕೆಲವು ನಿರ್ಬಂಧಗಳನ್ನೂ ವಿಧಿಸಬೇಕು. ಈ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು ಎಂದು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿದ ಎನ್‌.ರವಿಕುಮಾರ್‌, ರೈ ಟೆಕ್ನಾಲಜಿ ವಿಶ್ವವಿದ್ಯಾಲಯಕ್ಕೆ 1500 ಸೀಟುಗಳು ಮಂಜೂರಾಗಿದೆ. ಆದರೆ, 1800 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದೆ. ಈ ವಿಶ್ವವಿದ್ಯಾಲಯವು ಪ್ರತಿ ವಿದ್ಯಾರ್ಥಿಯಿಂದಲೂ ₹ 2.64 ಲಕ್ಷ ಡೊನೇಷನ್‌ ಪಡೆಯುತ್ತಿದೆ. ನಿಯಮಾವಳಿಯನ್ನು ಗಾಳಿಗೆ ತೂರಿದೆ ಎಂದು ಹೇಳಿದರು.

ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ, ಖಾಸಗಿ ವಿಶ್ವವಿದ್ಯಾಲಯದಲ್ಲಿ  ಕೃಷಿ ವಿಷಯ ಬೋಧಿಸುವುದು ಬೇಡ ಎಂದು ತೀರ್ಮಾನ ಮಾಡುವುದು ಸರಿ. ಆದರೆ, ಅಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಏನು ಮಾಡುತ್ತೀರಿ? ಈ ಹಿಂದೆ ಯೋಜನಾ ಆಯೋಗ ಪ್ರತಿ ಜಿಲ್ಲೆಗೊಂದು ಕೃಷಿ ಕಾಲೇಜು ಆರಂಭಿಸಲು ಶಿಫಾರಸು ಮಾಡಿತ್ತು ಎಂದರು.

ಬಿಜೆಪಿಯ ಅರುಣ ಶಹಾಪೂರ, ತೇಜಸ್ವಿನಿಗೌಡ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !