ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್ಆರ್‌ಸಿ ಜನಜಾಗೃತಿ: ಬಿಜೆಪಿ ಮುಖಂಡರ ಕೇರಿಗೆ ಬಿಡದ ಜನ

ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿಗೆ ವಿರೋಧ; ‘ಗೋ ಬ್ಯಾಕ್‌’ ಘೋಷಣೆ
Last Updated 6 ಜನವರಿ 2020, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕರಪತ್ರಗಳನ್ನು ಹಂಚಿ, ಜನಜಾಗೃತಿ ಮೂಡಿಸಲು ಮುಂದಾಗಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೋಮವಾರ ಇಲ್ಲಿನ ಚಲವಾದಿಕೇರಿಯ ಜನ ತಡೆದು, ಅವರನ್ನು ಅಲ್ಲಿಂದ ವಾಪಸ್‌ ಕಳುಹಿಸಿದರು.

ಬಿಜೆಪಿಯವರು ಬರುವ ವಿಷಯ ತಿಳಿದು ಕೇರಿಯ ಪರಿಶಿಷ್ಟ ಜಾತಿ, ವಾಲ್ಮೀಕಿ ನಾಯಕರು ಹಾಗೂ ಮುಸ್ಲಿಮರು ಅವರನ್ನು ಪ್ರವೇಶ ದ್ವಾರದ ಬಳಿಯೇ ತಡೆದರು. ಯಾರೊಬ್ಬರೂ ಕೇರಿ ಒಳಗೆ ಹೋಗದಂತೆ ತಡೆಯಲು ಮಾನವ ಸರಪಳಿ ನಿರ್ಮಿಸಿ ನಿಂತರು. ಕಪ್ಪು ಬಾವುಟ ಪ್ರದರ್ಶಿಸಿ, ‘ಗೋ ಬ್ಯಾಕ್‌’ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕೇರಿಯ ಜನರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಶಾಸಕ ಆನಂದ್‌ ಸಿಂಗ್‌ ಅವರ ಅತ್ತಿಗೆ, ಬಿಜೆಪಿ ನಾಯಕಿ ಕವಿತಾ ಈಶ್ವರ್‌ ಸಿಂಗ್‌ ಕೂಡ ಮುಖಂಡರ ಜತೆಗಿದ್ದರು.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಎರಡೂ ಕಡೆಯವರು ಪಟ್ಟು ಸಡಿಲಿಸಲಿಲ್ಲ. ಪೊಲೀಸರು ಮಧ್ಯ ಪ್ರವೇಶಿಸಿ, ಮನವೊಲಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಜನಜಾಗೃತಿ ಕೈಬಿಟ್ಟು ಅಲ್ಲಿಂದ ನಿರ್ಗಮಿಸಿದರು. ಈ ವೇಳೆ ಕೇರಿ ಯುವಕರು ಹರ್ಷೋದ್ಘಾರ ತೆಗೆದು, ‘ಹಿಂದೂಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆಗಳನ್ನು ಕೂಗಿದರು.

‘ನಮ್ಮ ಓಣಿಯಲ್ಲಿ ಎಲ್ಲಾ ವರ್ಗದವರು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಬಿಜೆಪಿಯವರು ಕೇರಿಗೆ ಬಂದು ಜಗಳ ಹಚ್ಚುವುದು ಬೇಡ ಎಂದು ತಡೆದಿದ್ದೇವೆ. ಅವರ ಬಗ್ಗೆ ಯಾವುದೇ ದ್ವೇಷವಿಲ್ಲ’ ಎಂದು ಕೇರಿಯ ಯುವ ಮುಖಂಡ ಎಚ್‌.ಎಲ್‌. ಸಂತೋಷ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕರಪತ್ರ ಹಂಚಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆದರೆ, ಕೆಲವರು ತಪ್ಪು ಕಲ್ಪನೆಯಿಂದ ನಮ್ಮನ್ನು ತಡೆದಿದ್ದಾರೆ. ಬೇಕಿದ್ದವರು ಕರಪತ್ರ ತೆಗೆದುಕೊಳ್ಳಬಹುದು. ಬೇಡವಾದವರು ಬಿಡಬಹುದು. ಆದರೆ, ನಮ್ಮನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಗೊಂದಲ ಉಂಟಾಗದಿರಲೆಂದು ಇಂದು ತಾತ್ಕಾಲಿಕವಾಗಿ ಕಾರ್ಯಕ್ರಮ ಕೈಬಿಟ್ಟಿದ್ದೇವೆ. ಮಂಗಳವಾರ (ಜ.7) ಪುನಃ ಕೇರಿಗೆ ಹೋಗಿ ಜಾಗೃತಿ ಮೂಡಿಸುತ್ತೇವೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಲತ್ವಾಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT