ಸೋಮವಾರ, ಮಾರ್ಚ್ 8, 2021
31 °C

ಅನುಷ್ಠಾನಕ್ಕೆ ಬಾರದ ಶೇಂಗಾ ಬೆಳೆಗಾರರ ಪ್ಯಾಕೇಜ್

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಸತತ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಶೇಂಗಾ ಬೆಳೆಗಾರರ ಹಿತ ಕಾಯಲೆಂದು ರಾಜ್ಯ ಸರ್ಕಾರ ಕಳೆದ ವರ್ಷ ಘೋಷಣೆ ಮಾಡಿದ್ದ ಪರಿಹಾರ ಪ್ಯಾಕೇಜ್ ಕಾರ್ಯರೂಪಕ್ಕೆ ಬಂದಿಲ್ಲ.

ಬೆಲೆ ಕುಸಿತದಿಂದ ಬೆಳೆಗಾರರು ನಷ್ಟಕ್ಕೀಡಾಗುತ್ತಿರುವ ಬಗ್ಗೆ ಕಳೆದ ವರ್ಷ ಬೆಳಗಾವಿ ಅಧಿವೇಶನ ಸಮಯದಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಪ್ರತಿಧ್ವನಿಸಿತ್ತು. ಆಗಿನ ಕೃಷಿ ಸಚಿವ ಕೃಷ್ಣ ಬೈರೇಗೌಡ ₹ 50 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದರು. ಈವರೆಗೆ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಮಂಜೂರಾತಿ ಬಗ್ಗೆ ಇಲಾಖೆಗೆ ಆದೇಶವೂ ಬಂದಿಲ್ಲ.

ಮುಖ್ಯವಾಗಿ ಪ್ಯಾಕೇಜ್‌ಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮಧುಗಿರಿ ತಾಲ್ಲೂಕುಗಳು ಆಯ್ಕೆಯಾಗಿದ್ದವು. ಬೆಂಬಲ ಬೆಲೆ, ಆಧುನಿಕ ತಳಿ ಅಭಿವೃದ್ಧಿ, ಸಾವಯವ ಗೊಬ್ಬರ ಬಳಕೆ, ಮಾರುಕಟ್ಟೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಳಕೆ ಮಾಡಬೇಕಿತ್ತು. ಸರ್ಕಾರದ ಸೂಚನೆಯ ಕಾರಣ ಪ್ಯಾಕೇಜ್‌ಗೆ ಪೂರಕ ಅಂಶಗಳನ್ನು ಸಲ್ಲಿಸಲಾಗಿತ್ತು ಎಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಲಕ್ಷ್ಮಣ್ ಕಣ್ಣನವರ್ ತಿಳಿಸಿದರು.

ಕಳೆದ ವರ್ಷ ಶೇಂಗಾ ಬೆಲೆ ಕುಸಿತಗೊಂಡ ಪರಿಣಾಮ ರೈತರು ಬೀದಿಗಿಳಿದು ಬೃಹತ್ ಪ್ರತಿಭಟನೆ ಕೈಗೊಂಡಿದ್ದರು. ಪ್ಯಾಕೇಜ್ ಘೋಷಣೆಯಾದ ಮೇಲೆ ಸುಮ್ಮನಾದರು.

ರಾಜ್ಯದಲ್ಲಿ ಬೇರೆ ಬೆಳೆಗಳಿಗೆ ತೊಂದರೆಯಾದಾಗ ಸರ್ಕಾರ ಬೆಳೆಗಾರರ ಕೈ ಹಿಡಿಯುವ ಕೆಲಸ ಮಾಡುತ್ತಿದೆ. ಆದರೆ, ಶೇಂಗಾ ಬೆಳೆಗಾರರನ್ನು ಮಾತ್ರ ಹಿಂದಿನಿಂದಲೂ ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಧೋರಣೆ ಕಾರಣ ಎಂದು ರೈತಸಂಘದ ಹಿರಿಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ದೂರಿದರು.

'ಪ್ಯಾಕೇಜ್ ಕಾರ್ಯರೂಪಕ್ಕೆ ಬಂದಿಲ್ಲದಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಸಂಪುಟ ಬರ ಅಧ್ಯಯನ ತಂಡದ ಗಮನಕ್ಕೆ ತರಲಾಗಿದೆ. ನೂತನವಾಗಿ ಚಿತ್ರದುರ್ಗ ತಾಲ್ಲೂಕನ್ನು ಸೇರ್ಪಡೆ ಮಾಡುವಂತೆ ಕೋರಲಾಗಿದೆ. ಇನ್ನೊಮ್ಮೆ ಕೃಷಿ ಸಚಿವರ ಗಮನಕ್ಕೆ ಈ ವಿಷಯ ತಂದು ಅನುಷ್ಠಾನಕ್ಕೆ ಮನವಿ ಮಾಡಲಾಗುವುದು’ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಪ್ತತಿಕ್ರಿಯಿಸಿದರು.

**

ಶೇಂಗಾ ಪ್ಯಾಕೇಜ್ ಅಗತ್ಯವಾಗಿ ಬೇಕಿದೆ. ಯಾಕೆ ಅನುಷ್ಠಾನವಾಗಲಿಲ್ಲ ಎಂಬುದನ್ನು ಪರಿಶೀಲಿಸಿ ತಕ್ಷಣವೇ ರೈತಸ್ನೇಹಿಯಾಗಿ ಕಾರ್ಯಗತವಾಗಲು ಶ್ರಮಿಸುತ್ತೇನೆ.
- ಟಿ.ರಘುಮೂರ್ತಿ, ಶಾಸಕ

**

ಅಂಕಿ- ಅಂಶ

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಹಾಗೂ ಉತ್ಪಾದನೆ (ಹೆಕ್ಟೇರ್ ಹಾಗೂ ಮೆಟ್ರಿಕ್‌ ಟನ್‌ಗಳಲ್ಲಿ)

2015-16 - 90573 (ಬಿತ್ತನೆ)    - 565 (ಇಳುವರಿ) 

2016-17 -129820 (ಬಿತ್ತನೆ)    - 1097 ( ಇಳುವರಿ) 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು