ಶುಕ್ರವಾರ, ಮೇ 27, 2022
26 °C
ಮಂಜು, ಕಬ್ಬಿಣ, ಸಂಯುಕ್ತ ಲೋಹದ ಅಂಶಗಳಿದಂ ಕೂಡಿದ ಗ್ರಹ

ಭಾರತೀಯ ವಿಜ್ಞಾನಿಗಳಿಂದ ಮೊದಲ ಬಾರಿಗೆ ಗ್ರಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೌರಮಂಡಲದಿಂದ ಆಚೆಗೆ ಸೂರ್ಯನ ಮಾದರಿಯ ನಕ್ಷತ್ರಕ್ಕೆ ಮಂಜುಗಡ್ಡೆ, ಸಂಯುಕ್ತ ಲೋಹ ಮತ್ತು ಕಬ್ಬಿಣದ ಅಂಶಗಳನ್ನು ಹುದುಗಿಸಿಕೊಂಡಿರುವ ಗ್ರಹವೊಂದು ಸುತ್ತು ಹಾಕುತ್ತಿರುವುದನ್ನು ಭಾರತೀಯ ಭೌತವಿಜ್ಞಾನಿಗಳು ಗುರುತಿಸಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಈ ಗ್ರಹ ಶನಿ ಗ್ರಹಕ್ಕಿಂತ ಚಿಕ್ಕದು, ನೆಪ್ಚೂನ್‌ಗಿಂತಲೂ ದೊಡ್ಡದು.  ಇದು ಭೂಮಿಗಿಂತ 27 ಪಟ್ಟು ದ್ರವ್ಯರಾಶಿ ಹೊಂದಿದೆ. ನಮ್ಮ ಸೌರಮಂಡಲದ ಹೊರಗೆ ಇರುವ ಗ್ರಹವೊಂದನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡುತ್ತಿರುವುದೂ ಇದೇ ಮೊದಲು. ಅಹಮದಾಬಾದ್‌ನ ಭೌತ ಸಂಶೋಧನಾ ಪ್ರಯೋಗಾಲಯದ ಪ್ರೊ.ಅಭಿಜಿತ್‌ ಚಕ್ರವರ್ತಿ ಮತ್ತು ತಂಡ ಈ ಸಾಧನೆ ಮಾಡಿದೆ.

ಜಗತ್ತಿನ ಬೆರಳೆಣಿಕೆಯಷ್ಟು ರಾಷ್ಟ್ರಗಳು ಮಾತ್ರ ಸೌರಮಂಡಲದಾಚೆಗಿನ ಗ್ರಹಗಳ ಪತ್ತೆ ಕಾರ್ಯ ಮಾಡುತ್ತಿವೆ. ಆ ಸಾಲಿಗೆ ಇದೀಗ ಭಾರತವೂ ಸೇರಿದೆ. ಹೊಸ ಗ್ರಹಕ್ಕೆ EPIC 211945201b ಅಥವಾ K2-236b ಎಂದು ಹೆಸರಿಸಲಾಗಿದೆ.

ರಾಜಸ್ತಾನದ ಅಬು ಪರ್ವತದ ಗುರುಶಿಖರ್‌ ವೀಕ್ಷಣಾಲಯದಲ್ಲಿರುವ ಪಿಎಆರ್‌ಎಎಸ್‌ (PRL Advance Radial-velocity Abu-sky Search) ಸ್ಪೆಕ್ಟ್ರೋಗ್ರಾಫ್‌ ಮತ್ತು 1.23 ಟೆಲಿಸ್ಕೋಪ್‌ ಮೂಲಕ ಗ್ರಹವನ್ನು ಗುರುತಿಸಲಾಗಿದೆ. ಈ ಹೊಸ ಗ್ರಹವೂ ಸೇರಿದಂತೆ ಇಲ್ಲಿಯವರೆಗೆ ಒಟ್ಟು 23 ಗ್ರಹ ವ್ಯವಸ್ಥೆಯನ್ನು ವಿಶ್ವದ ವಿವಿಧ ದೇಶಗಳು ಪತ್ತೆ ಮಾಡಿವೆ. 

ಆರಂಭದಲ್ಲಿ ನಾಸಾದ ಕೆ 2 ( ಕೆಪ್ಲರ್‌ 2 ಬಾಹ್ಯಾಕಾಶ ವೀಕ್ಷಣಾಲಯ) ಬಿಂದುವಿನಂತಹ ಚಲಿಸುವ ಚುಕ್ಕೆ ಗ್ರಹ ಆಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿತ್ತು. ಭೂಮಿಯ ದೂರದರ್ಶಕ ವೀಕ್ಷಣೆ ಮತ್ತು ಉರಿಯುವ ನಕ್ಷತ್ರದ ಮಧ್ಯೆ ಕಾಯ ಅಡ್ಡ ಬಂದಿತ್ತು. ದೂರದರ್ಶಕದಲ್ಲಿ ಅದು ಕಪ್ಪು ಚುಕ್ಕೆಯಾಗಿ ಕಂಡಿತ್ತು.

‘ಬೃಹತ್‌ ನೆಪ್ಚೂನ್‌ ಅಥವಾ ಶನಿಗ್ರಹಕ್ಕಿಂತ ಚಿಕ್ಕದಾದ ಗ್ರಹಗಳ ಹುಟ್ಟಿನ ಕಾರಣಗಳನ್ನು ಅರ್ಥೈಸಿಕೊಳ್ಳಲು ಈ ಶೋಧನೆ ಮಹತ್ವದ್ದಾಗಿದೆ. ಅಲ್ಲದೆ, ಈ ಗ್ರಹ ಸೂರ್ಯನಂತೆ ಉರಿಯುತ್ತಿರುವ ನಕ್ಷತ್ರಕ್ಕೆ ತೀರಾ ಸನಿಹದಲ್ಲಿದೆ’ ಎಂದು ಪ್ರೊ. ಅಭಿಜಿತ್‌ ಚಕ್ರವರ್ತಿ ತಿಳಿಸಿದ್ದಾರೆ.

ಚುಕ್ಕೆಯ ಮೇಲೆ 420 ದಿನಗಳ ನಿಗಾ

ಅತ್ಯಂತ ಪ್ರಖರ 1.23 ಮೀಟರ್‌ ದೂರದರ್ಶಕದ ಮೂಲಕ ನಿರಂತರವಾಗಿ 420 ದಿನಗಳು ಅಂದರೆ ಒಂದೂವರೆ ವರ್ಷ ನಿರ್ದಿಷ್ಟ ಗುರಿಯ(ಚುಕ್ಕೆ) ಮೇಲೆ ನಿಗಾ ಇಡಲಾಗಿತ್ತು. ಇದರಿಂದ ಅಲ್ಲಿನ ನೈಸರ್ಗಿಕ ವ್ಯವಸ್ಥೆಯನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಮಾತೃ ನಕ್ಷತ್ರದ ಉರಿಯುವ ಪ್ರಖರತೆ ಮತ್ತು ಅದರ ಕುಲುಕಾಟದ ಆಧಾರದ ಮೇಲೆ ಹೊಸ ಗ್ರಹ ಇರುವಿಕೆ ಮತ್ತು ವಿಸ್ತೀರ್ಣವನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು