ದೇವೇಗೌಡರ ಭಯದಿಂದ ಕಾಲ್ಕಿತ್ತ ರಾಹುಲ್‌: ಮೋದಿ

ಮಂಗಳವಾರ, ಏಪ್ರಿಲ್ 23, 2019
25 °C

ದೇವೇಗೌಡರ ಭಯದಿಂದ ಕಾಲ್ಕಿತ್ತ ರಾಹುಲ್‌: ಮೋದಿ

Published:
Updated:
Prajavani

ಮೈಸೂರು/ಚಿತ್ರದುರ್ಗ: ಮಧ್ಯ ಕರ್ನಾಟಕದ ಚಿತ್ರದುರ್ಗ ಹಾಗೂ ಮೈಸೂರು ಭಾಗದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಚುನಾವಣಾ ಪ್ರಚಾರದ ಕಹಳೆ ಮೊಳಗಿಸಿದರು.

ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತಲೇ ಮೈತ್ರಿ ಸರ್ಕಾರವನ್ನು ಕಿಚಾಯಿಸಿದರು. ‌ಕಾಂಗ್ರೆಸ್‌ ವಿರುದ್ಧ ವಾಕ್‌ ಪ್ರಹಾರ ನಡೆಸಿದರು.

‘ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸಾಲ ಪಾವತಿಸುವಂತೆ ವಾರಂಟ್ ಜಾರಿ ಮಾಡಲಾಗುತ್ತಿದೆ. ಈ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅವರನ್ನು ಇವರು ಜರೆಯುತ್ತಾರೆ, ಇವರನ್ನು ಅವರು ಎಳೆಯುತ್ತಾರೆ. ಕಾಂಗ್ರೆಸ್– ಜೆಡಿಎಸ್‌ನ ತುಷ್ಟೀಕರಣ ನಡೆದಿದ್ದು, ಪರಸ್ಪರ ಕಚ್ಚಾಟ ಮುಂದುವರಿದಿದೆ’ ಎಂದು ಟೀಕಿಸಿದರು.

ಇಂಥದ್ದೇ ಸರ್ಕಾರವನ್ನು ದೆಹಲಿಯಲ್ಲಿ ರಚಿಸಿ, ಒಂದು ಡಜನ್ ಜನರ ಕೈಗೆ ಅಧಿಕಾರದ ರಿಮೋಟ್ ಕೊಡಿಸಲು ಹೊರಟಿದ್ದಾರೆ. ಜಾತಿ– ಸಮಾಜಗಳನ್ನು ಒಡೆಯುವ ಇಂತಹವರು ಬೇಕೋ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಬಿಜೆಪಿ ಬೇಕೋ ನೀವೇ ನಿರ್ಧರಿಸಿ ಎಂದು ಕೇಳಿದರು.

ಬಿಜೆಪಿ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪುನರುಚ್ಚಿಸುತ್ತಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೇವಡಿ ಮಾಡಿದರು. ಆದರೆ, ಎಲ್ಲಿಯೂ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರು ಉಲ್ಲೇಖಿಸಲಿಲ್ಲ.

‘‌ಕಾಂಗ್ರೆಸ್‌ ಅಧ್ಯಕ್ಷರು ಕರ್ನಾಟಕದಲ್ಲಿ ಸ್ಪರ್ಧಿಸಲು ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದರು. ಆದರೆ, ಈ ಹಿಂದೆ ಪ್ರಧಾನಿಯಾಗಿದ್ದ ದೇವೇಗೌಡರ ಬೆನ್ನಿಗೆ ಸೋನಿಯಾ ಗಾಂಧಿ ಚೂರಿ ಹಾಕಿದ್ದರು. ಆ ಸೇಡನ್ನು ಗೌಡರು ತೀರಿಸಿಕೊಳ್ಳಬಹುದು, ಕರ್ನಾಟಕದಲ್ಲಿ ಸ್ಪರ್ಧಿಸಿದರೆ ಪುತ್ರನನ್ನು ಸೋಲಿಸಬಹುದು ಎನ್ನುವ ಅನುಮಾನವಿತ್ತು. ಆ ಭಯದಿಂದ ಕಾಲ್ಕಿತ್ತು ಕೇರಳಕ್ಕೆ ಓಡಿಹೋದರು’ ಎಂದು ವ್ಯಂಗ್ಯವಾಡಿದರು.

ಒಂದು ಪಕ್ಷದ ನಾಯಕರೇ ಭಯದಿಂದ ಕ್ಷೇತ್ರ ಹುಡುಕಿಕೊಂಡು ಓಡಿ ಹೋದರೆ ಹೇಗೆ, ಪಕ್ಷದ ಗತಿ ಏನು. ವಿರೋಧ ಪಕ್ಷಗಳಿಗೆ ಗೊತ್ತಿರುವುದು ಮೋದಿ ಹಠಾವೋ ಎನ್ನುವುದು ಮಾತ್ರ. ಅಂಥವರಿಂದ ಜನರು ಅಭಿವೃದ್ಧಿ ನಿರೀಕ್ಷಿಸುವುದು ಹೇಗೆ. ಕಾಂಗ್ರೆಸ್ ಓಡಿಸಿದರೆ ದೇಶದಲ್ಲಿ ಬಡತನ ತಾನಾಗಿಯೇ ನಿರ್ಮೂಲನೆಯಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರವು ದೇಶದ ನಾಲ್ಕು ತಲೆಮಾರುಗಳ ಮೇಲೆ ಅನ್ಯಾಯ ಮಾಡಿದೆ. 2ಜಿ ಹಗರಣ, ಕಲ್ಲಿದ್ದಲು ಹಗರಣ, ಜಲಾಂತರ್ಗಾಮಿ ಹಗರಣ– ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು ಎಂದು ಹಗರಣಗಳ ಪಟ್ಟಿ ಬಿಚ್ಚಿಟ್ಟರು.

‘ಶಬರಿಮಲೆ ವಿಚಾರದಲ್ಲಿ ಜನರ ಭಾವನೆಗಳನ್ನು ಬಿಜೆಪಿ ಗೌರವಿಸುತ್ತದೆ. ಜನರ ನಂಬಿಕೆ, ಸಂಪ್ರದಾಯಕ್ಕೆ ಸಂವಿಧಾನದ ರಕ್ಷಣೆ ಅಗತ್ಯವಿದೆ. ಆದರೆ, ಕೇರಳ ಸರ್ಕಾರ ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಜೈಲಿಗೆ ದೂಡಿತು. ಅದನ್ನು ಕಾಂಗ್ರೆಸ್‌ ಪಕ್ಷದವರು ಸಮರ್ಥಿಸಿಕೊಂಡರು. ಈಗ ಅಲ್ಲೇ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷರು, ಕಮ್ಯುನಿಸ್ಟ್‌ ಸರ್ಕಾರದ ವಿರುದ್ಧ ಏನೂ ಮಾತನಾಡುವುದಿಲ್ಲವಂತೆ’ ಎಂದು ಲೇವಡಿ ಮಾಡಿದರು.

ಬಾಲಾಕೋಟ್ ದಾಳಿಯನ್ನು ಹೆಮ್ಮೆಯಿಂದಲೇ ನೆನಪಿಸಿಕೊಂಡು, ಮೊದಲ ಬಾರಿಗೆ ಮತ ಹಾಕಲು ಹೊರಟವರಿಗೆ ವಿಶೇಷ ನಮನ ಸಲ್ಲಿಸಿದರು. 20ನೇ ಶತಮಾನದಲ್ಲಿ ಕಾಂಗ್ರೆಸ್ ಮಾಡಿರುವ ಪಾಪಕ್ಕೆ 21ನೇ ಶತಮಾನದ ಯುವಕರು ಶಿಕ್ಷೆ ಕೊಡಲಿದ್ದಾರೆ ಎಂದರು.

ಮತಬ್ಯಾಂಕ್ ಪಾಕಿಸ್ತಾನದಲ್ಲಿದೆಯೆ: ‘ನಾವು ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮಾಡಿದೆವು. ವಿರೋಧ ಪಕ್ಷದವರಿಗೆ ನೋವಾಯಿತು. ಕರ್ನಾಟಕದ ಮುಖ್ಯಮಂತ್ರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ವೀರರ ಪರಾಕ್ರಮದ ಪ್ರಸ್ತಾಪ ಕೂಡದು. ಅದು ವೋಟ್ ಬ್ಯಾಂಕ್‌ ಮೇಲೆ ಪರಿಣಾಮ ಬೀರಲಿದೆ’ ಎಂದಿದ್ದರು. ಅವರ ಮತಬ್ಯಾಂಕ್ ಪಾಕಿಸ್ತಾನದಲ್ಲಿದೆಯೋ, ಭಾರತದಲ್ಲಿದೆಯೋ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರ ಮದಕರಿ ನಾಯಕ, ಒನಕೆ ಓಬವ್ವ ಹೇಗೆ ಚಿತ್ರದುರ್ಗವನ್ನು ಅತ್ಯಾಚಾರಿಗಳಿಂದ, ಆಕ್ರಮಣಕಾರರಿಂದ ರಕ್ಷಿಸಿದ್ದರೋ ಹಾಗೆಯೇ ಚೌಕೀದಾರರು ದೇಶವನ್ನು ರಕ್ಷಿಸುವಂತೆ ಮನವಿ ಮಾಡಿದರು.

‘ಅಂತರಿಕ್ಷದಲ್ಲಿ ನಾವು ಮಾಡಿದ ಸಾಧನೆಯನ್ನೂ ವಿರೋಧ ಪಕ್ಷದವರು ಟೀಕಿಸಿದರು. ಮೋದಿಯನ್ನು ಟೀಕಿಸುವ ಭರದಲ್ಲಿ ಅವರು ಟೀಕೆ ಮಾಡಿದ್ದು ದೇಶವನ್ನು. ಕ್ಷಿಪಣಿ ಪರೀಕ್ಷೆಗೆ ಅನುಮತಿ ನೀಡುವಷ್ಟೂ ತಾಕತ್ತು ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಇರಲಿಲ್ಲ’ ಎಂದು ಕುಟುಕಿದರು.

‘2030ರ ವೇಳೆಗೆ ದೇಶವು ಆರ್ಥಿಕ ವಿಚಾರದಲ್ಲಿ ವಿಶ್ವದ ಅಗ್ರ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ. ಅದಕ್ಕಾಗಿ ಮೂಲಸೌಕರ್ಯ ಹೆಚ್ಚಿಸಲಿದ್ದೇವೆ. ಮೆಟ್ರೊ ರೈಲ್ವೆಯನ್ನು 50 ನಗರಗಳಿಗೆ ವಿಸ್ತರಿಸಲಾಗುವುದು. 70 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಲಾಗದ ಕೆಲಸವನ್ನು ನಾವು ಮುಂದಿನ ಐದು ವರ್ಷಗಳಲ್ಲಿ ಮಾಡಿ ತೋರಿಸಲಿದ್ದೇವೆ. ದೇಶದ ಸುರಕ್ಷತೆಗೆ ಒತ್ತು ನೀಡಿ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.‌

ಕಿಸಾನ್ ಸಮ್ಮಾನ್‌ ಯೋಜನೆಯನ್ನು ಸಣ್ಣ ರೈತರಿಗಷ್ಟೇ ಅಲ್ಲ, ಎಲ್ಲ ರೈತರಿಗೂ ವಿಸ್ತರಿಸಲಾಗುವುದು. ಈಗಾಗಲೇ 3 ಕೋಟಿ ಕೃಷಿಕರ ಖಾತೆಗೆ ಮೊದಲ ಕಂತಿನ ಹಣ ಪಾವತಿಯಾಗಿದೆ. ಒಂದೂವರೆ ಕೋಟಿ ರೈತರು ಎರಡನೇ ಕಂತಿನ ಹಣವನ್ನೂ ಪಡೆದಿದ್ದಾರೆ ಎಂದು ನುಡಿದರು.

ಕನ್ನಡ ಮಾತಿನ ಆಕರ್ಷಣೆ

‘ಭಾರತ್ ಮಾತಾ ಕೀ ಜೈ....ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಕ್ಷೇತ್ರದ ಆತ್ಮೀಯ ನಾಗರಿಕ ಬಂಧು–ಭಗಿನಿಯರೇ’ ಎಂದು ಕನ್ನಡದಲ್ಲಿ ಮೋದಿ ಭಾಷಣ ಪ್ರಾರಂಭಿಸಿ ಶಿಳ್ಳೆ ಗಿಟ್ಟಿಸಿದರು. ಮೈಸೂರಿನಲ್ಲೂ ಕನ್ನಡದಲ್ಲೇ ಮಾತು ಆರಂಭಿಸಿ ಹಿಂದಿಯಲ್ಲಿ ಮಾತು ಮುಂದುವರಿಸಿದರು. ಕೊನೆಗೆ ಕನ್ನಡದಲೇ ಮಾತು ಮುಗಿಸಿದರು.

ಯುಗಾದಿ ಹಬ್ಬದ ಶುಭಾಶಯವನ್ನೂ ಕನ್ನಡದಲ್ಲೇ ಹೇಳಿದರು. ‘ಮೈ ಭೀ... ಚೌಕೀದಾರ್’ ಎಂಬ ಘೋಷಣೆಯನ್ನು ಕೂಗಿ, ಜನರೂ ಹಾಗೆ ಕೂಗುವಂತೆ ಪ್ರೇರೇಪಿಸಿದರು. ‘ಹಳ್ಳಿ ಹಳ್ಳಿಯೂ’, ‘ನಗರ ನಗರವೂ’, ‘ಡಾಕ್ಟರ್ ಎಂಜಿನಿಯರ್ ಕೂಡ’ ಎಂದು ಕೂಗುತ್ತಾ ಹೋದರು. ಜನರು ‘ಚೌಕೀದಾರ್’ ಎಂದು ದನಿಗೂಡಿಸಿದರು.

‘ಕಾಂಗ್ರೆಸ್‌ ನಂಗಾನಾಚ್‌’

‘ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ನಂಗಾನಾಚ್ ನಡೆಸುತ್ತಿದೆ. ಮುಖ್ಯಮಂತ್ರಿಯನ್ನು ಪಂಚಿಂಗ್ ಬ್ಯಾಗ್‌ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ’ ಎಂದು ಮೋದಿ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 0

  Sad
 • 3

  Frustrated
 • 17

  Angry

Comments:

0 comments

Write the first review for this !