ದರೋಡೆ ಮಾಡಿದ್ದ ನಗದು, ಚಿನ್ನ, ಬೆಳ್ಳಿ ವಶ

ಶುಕ್ರವಾರ, ಏಪ್ರಿಲ್ 19, 2019
27 °C
ಮುಂಬೈನಲ್ಲಿ ಕೃತ್ಯ ಎಸಗಿ ಬಂದಿದ್ದ ಐವರು ಆರೋಪಿಗಳ ಬಂಧನ

ದರೋಡೆ ಮಾಡಿದ್ದ ನಗದು, ಚಿನ್ನ, ಬೆಳ್ಳಿ ವಶ

Published:
Updated:
Prajavani

ಯಲ್ಲಾಪುರ (ಉತ್ತರ ಕನ್ನಡ): ದರೋಡೆ ಮಾಡಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ದೇಶ ವಿದೇಶಗಳ ನಗದನ್ನು ತಾಲ್ಲೂಕಿನ ಕಿರವತ್ತಿಯ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

ಅವರ ಬಳಿ ಭಾರತವೂ ಸೇರಿದಂತೆ ಸಿಂಗಪುರ, ಇಂಗ್ಲೆಂಡ್, ನೇಪಾಳದ ಒಟ್ಟು ₹ 2.68 ಲಕ್ಷ ಮೌಲ್ಯದ ನಗದು ಸಿಕ್ಕಿದೆ. 2.243 ಕೆ.ಜಿ ಬಂಗಾರ, ಮೂರು ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲದರ ಒಟ್ಟು ಮೊತ್ತ ಸುಮಾರು ₹ 75 ಲಕ್ಷ ಎಂದು ಅಂದಾಜಿಸಲಾಗಿದೆ.

ನೇಪಾಳದ, ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಸೀತಾರಾಮ ಭೀಮ ಬಹದ್ದೂರ್ ಸಾವುದ್ (31), ಏಕಮಿಥಮಾನ್ ಬಹದ್ದೂರ್ ಷಾ (18), ದುಮ್ಮರ್ ದಿಲ್ ಬಹದ್ದೂರ್ ಸಾವುದ್ (20), ಹುಬ್ಬಳ್ಳಿಯ ನವನಗರ ನಿವಾಸಿಗಳಾದ ಬಾಲಸಿಂಗ್ ಬೀರು ಬಹದ್ದೂರ್ ಷಾ ಹಾಗೂ ರಾಮ್ ನರಸಿಂಗ್ ಗೋರ್ಖ್ (17) ಬಂಧಿತ ಆರೋಪಿಗಳು.

ಮುಂಬೈನಲ್ಲಿ ದರೋಡೆ: ಐವರೂ ಅಂಕೋಲಾದಿಂದ ಹುಬ್ಬಳ್ಳಿಗೆ ಕೆಎಸ್ಆರ್‌ಟಿಸಿ ಬಸ್‍ನಲ್ಲಿ ತೆರಳುತ್ತಿದ್ದರು. ಕಿರವತ್ತಿಯ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ಬಸ್ ತಡೆದ ಅಧಿಕಾರಿಗಳು ತಪಾಸಣೆ ನಡೆಸಿದರು. ಆಗ ಪ್ರಕರಣ ಬೆಳಕಿಗೆ ಬಂತು. ಐವರನ್ನು ವಶಕ್ಕೆ ‍ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಮುಂಬೈನ ಜುಹುವಿನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಮಾಡಿದ್ದಾಗಿ ಬಾಯಿಬಿಟ್ಟರು. ಆರೋಪಿಗಳು ಮುಂಬೈನಿಂದ ಅಂಕೋಲಾಕ್ಕೆ ಬಸ್‌ನಲ್ಲೇ ಬಂದಿದ್ದರು.

ಸಹಾಯಕ ಚುನಾವಣಾಧಿಕಾರಿ ರುದ್ರೇಶಪ್ಪ, ಡಿವೈಎಸ್‌ಪಿ ಭಾಸ್ಕರ್ ಒಕ್ಕಲಿಗ, ತಹಶೀಲ್ದಾರ್ ಶಂಕರ್ ಜಿ.ಎಸ್, ಸಿಪಿಐ ಡಾ.ಮಂಜುನಾಥ ನಾಯಕ, ಪಿಎಸ್‌ಐ ಸುಂದರ ಮರೋಳಿ, ಪ್ರೊಬೆಷನರಿ ಪಿಎಸ್‌ಐ ವಿಜಯಲಕ್ಷ್ಮೀ.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !