ಭಾನುವಾರ, ಮಾರ್ಚ್ 7, 2021
30 °C

32 ಬೈಕ್ ಕದ್ದ ಮಾದಕ ವ್ಯಸನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಾದಕ ವಸ್ತುವಿನ ದಾಸನಾಗಿ ಅದರ ಅಮಲಿನಲ್ಲೇ 32 ಬೈಕ್‌ಗಳನ್ನು ಕದ್ದ ಆರೋಪಿ ಉಮಾಶಂಕರ್ (41) ಎಂಬಾತ ಆರ್‌.ಟಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಗಂಗಾನಗರದ ನಿವಾಸಿಯಾದ ಉಮಾಶಂಕರ್, ಬಿ.ಕಾಂ ಪದವೀಧರ. ಶಾಪಿಂಗ್‌ ಮಾಲ್‌ನಲ್ಲಿ ವ್ಯವಸ್ಥಾಪಕನಾಗಿದ್ದ ಆತ, ಮಾದಕ ವ್ಯಸನಿಯಾದ ಬಳಿಕ ಕೆಲಸ ಬಿಟ್ಟು ಕಳ್ಳತನ ಮಾಡಲಾರಂಭಿಸಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ನಿತ್ಯವೂ ಮಾದಕ ವಸ್ತುವಿನ ಅಮಲಿನಲ್ಲೇ ನಗರದಲ್ಲಿ ಸುತ್ತಾಡುತ್ತಿದ್ದ ಆತ, ರಸ್ತೆಯ ಅಕ್ಕ–ಪಕ್ಕದಲ್ಲಿರುತ್ತಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ. ಆತನ ಬಂಧನದಿಂದ ಆರ್.ಟಿ.ನಗರ, ಮಹಾಲಕ್ಷ್ಮಿ ಲೇಔಟ್‍, ಸುಬ್ರಹ್ಮಣ್ಯನಗರ, ಸಂಜಯನಗರ, ಅನ್ನಪೂರ್ಣೆಶ್ವರಿ ನಗರ ಹಾಗೂ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ’ ಎಂದರು.

‘ಆರ್‌.ಟಿ. ನಗರ ಬಳಿಯ ತರಳಬಾಳು ಕೇಂದ್ರಕ್ಕೆ ತರಬೇತಿಗಾಗಿ ಬಂದಿದ್ದ ಸುಜಾತಾ ಎಂಬುವರು, ತಮ್ಮ ಸ್ಕೂಟರನ್ನು ಕೇಂದ್ರದ ಹೊರಗೆ ನಿಲ್ಲಿಸಿದ್ದರು. ಅದನ್ನು ಆರೋಪಿ ಕಳವು ಮಾಡಿದ್ದ. ಆ ಬಗ್ಗೆ ದಾಖಲಾಗಿದ್ದ ದೂರು ಆಧರಿಸಿ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದು ಅಧಿಕಾರಿ ವಿವರಿಸಿದರು.

ಸ್ನೇಹಿತರಿಗೆ ಬೈಕ್ ಮಾರಾಟ: ‘ಕದ್ದ ಬೈಕ್‌ಗಳನ್ನು ಒಂದೆಡೆ ಶೇಖರಿಸಿಡುತ್ತಿದ್ದ ಆರೋಪಿ, ಅವುಗಳನ್ನು  ₹2 ಸಾವಿರದಿಂದ ₹5 ಸಾವಿರಕ್ಕೆ ತನ್ನ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯಿಂದ ಜಪ್ತಿ ಮಾಡಲಾದ 32 ಬೈಕ್‌ಗಳ ಮೌಲ್ಯ ₹10.91 ಲಕ್ಷ’ ಎಂದು ಅಧಿಕಾರಿ ಹೇಳಿದರು.

‘ನನಗೆ ಬೈಕ್ ಬೇಕು. ಹೊಸ ಬೈಕ್ ತೆಗೆದುಕೊಳ್ಳಲು ಹಣವಿಲ್ಲ. ಯಾವುದಾದರೂ ಹಳೆಯ ಬೈಕ್ ಇದ್ದರೆ ಕೊಡಿಸು’ ಎಂದು ಸ್ನೇಹಿತರು, ಆರೋಪಿಗೆ ಹೇಳುತ್ತಿದ್ದರು. ಅಂಥ ಸಂದರ್ಭದಲ್ಲೂ ಆರೋಪಿ, ಬೈಕ್ ಕಳವು ಮಾಡಿ ಕೊಟ್ಟಿದ್ದ. ಈ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದರು.

ನಿತ್ಯ 400 ಎಂ.ಎಲ್ ಔಷಧಿ ಸೇವನೆ: ‘ಶಾಪಿಂಗ್‌ ಮಾಲ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆರೋಪಿಗೆ ₹30 ಸಾವಿರದಿಂದ ₹40 ಸಾವಿರದವರೆಗೆ ಸಂಬಳವಿತ್ತು. ಆದರೆ, ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಆ ಬಗ್ಗೆ ಸ್ನೇಹಿತನ ಬಳಿ ಹೇಳಿಕೊಂಡಿದ್ದ. ‘ನಿಷೇಧಿತ ಕೆಮ್ಮಿನ ಔಷಧಿ ಸೇವಿಸು, ಚೆನ್ನಾಗಿ ನಿದ್ದೆ ಬರುತ್ತದೆ’ ಎಂದು ಸ್ನೇಹಿತ ಸಲಹೆ ನೀಡಿದ್ದ’ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದರು.

‘ಕೆಮ್ಮಿನ ಔಷಧಿಯಲ್ಲಿ ಮಾದಕ ವಸ್ತುವಿನ ಅಂಶವಿರುವುದನ್ನು ಪತ್ತೆ ಹಚ್ಚಿದ್ದ ಕೇಂದ್ರ ಸರ್ಕಾರ, ಆ ಔಷಧಿಯನ್ನೇ ನಿಷೇಧ ಮಾಡಿದೆ. ಅದನ್ನು ಮಾದಕ ವಸ್ತುವೆಂದು ಪರಿಗಣಿಸಿ, ಅದರ ಮಾರಾಟ ಹಾಗೂ ಸಾಗಣೆಯನ್ನು ನಿಷೇಧಿಸಲಾಗಿದೆ. ಆ ಔಷಧಿಯನ್ನು ಕಳ್ಳ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದ ಆರೋಪಿ, ಆರಂಭದಲ್ಲಿ ನಿತ್ಯವೂ 50 ಎಂಎಲ್ ಕುಡಿಯುತ್ತಿದ್ದ. ನಂತರ, ಔಷಧ ಸೇವನೆಯೇ ಚಟವಾಯಿತು. ಸದ್ಯ ಆತ, ದಿನಕ್ಕೆ 400 ಎಂ.ಎಲ್ ಔಷಧಿ ಕುಡಿಯುತ್ತಿದ್ದ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.