ಹುಡುಕಿದರೂ ಸಿಗುತ್ತಿಲ್ಲ ಪಿಒಪಿ ಗಣಪ

7
ಹುಬ್ಬಳ್ಳಿಯಲ್ಲಿ ‘ಪ್ರಜಾವಾಣಿ’ ರಿಯಾಲಿಟಿ ಚೆಕ್: ಪೊಲೀಸ್ ದಾಳಿ ಭಯ, ಬೇಡಿಯೂ ಇಲ್ಲ

ಹುಡುಕಿದರೂ ಸಿಗುತ್ತಿಲ್ಲ ಪಿಒಪಿ ಗಣಪ

Published:
Updated:
Deccan Herald

ಹುಬ್ಬಳ್ಳಿ: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬಳಸದೆ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಜಿಲ್ಲಾಡಳಿತ, ಹುಬ್ಬಳ್ಳಿ– ಧಾರವಾಡ ಪೊಲೀಸರು ಮಾಡಿದ ಮನವಿಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ಹುಬ್ಬಳ್ಳಿಯ ಮಾರುಕಟ್ಟೆಯನ್ನು ತಡಕಾಡಿದರೂ ಪಿಒಪಿ ಗಣೇಶ ಮೂರ್ತಿಗಳು ಮಾತ್ರ ಸಿಗುತ್ತಿಲ್ಲ. ಪಿಒಪಿ ಮೂರ್ತಿ ನಿಷೇಧಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ್ದ ಅಧಿಸೂಚನೆ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬುದರ ಬಗ್ಗೆ ‘ಪ್ರಜಾವಾಣಿ’ ನಗರದಲ್ಲಿ ಮಂಗಳವಾರ ರಿಯಾಲಿಟಿ ಚೆಕ್ ನಡೆಸಿದಾಗ ಈ ಸಂಗತಿ ಗೊತ್ತಾಯಿತು.

ಬೊಮ್ಮಾಪುರ ಓಣಿ, ಹಿರೇಪೇಟೆ, ಮೂರು ಸಾವಿರ ಮಠದ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಪಿಒಪಿ ಮೂರ್ತಿಯೇ ಬೇಕು ಎಂದು ಕೇಳಿದಾಗ ‘ಇಲ್ಲ’ ಎಂಬ ಉತ್ತರ ಬಂತು. ಬಹುತೇಕ ಅಂಗಡಿಗಳಲ್ಲಿ ಮಣ್ಣಿನ ಗಣಪತಿಯನ್ನೇ ಮಾರಾಟ ಮಾಡಲಾಗುತ್ತಿದೆ. ಶಿರಸಿಯ ಜೇಡಿ ಮಣ್ಣಿನ ಗಣಪತಿಗಳೂ ಗಮನ ಸೆಳೆಯುತ್ತಿವೆ. ಅಲ್ಲಿನ ಮೂರ್ತಿಗಳಿಗೆ ಇಲ್ಲಿನ ಕಲಾವಿದರು ಬಣ್ಣ ತುಂಬಿ ಮಾರುತ್ತಿದ್ದಾರೆ.

ಹಬ್ಬಕ್ಕೆ ಇನ್ನೂ ಒಂದು ತಿಂಗಳು ಇರುವಂತೆಯೇ ಪಿಒಪಿ ಗಣೇಶ ಮೂರ್ತಿಯನ್ನು ಮಾರಾಟ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಕೇವಲ ಸೂಚನೆ ನೀಡಿದರೆ ಸಾಲದು ಎಂದು, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ರಚನೆ ಮಾಡಿದ್ದರು.

ಪಿಒಪಿ ಗಣೇಶ ಮಾರಾಟ ಆಗದಂತೆ ನೋಡಿಕೊಳ್ಳುವ ಏಕೈಕ ಹೊಣೆಯನ್ನು ಈ ತಂಡಕ್ಕೆ ನೀಡಲಾಗಿತ್ತು. ದೂರವಾಣಿ ಸಂಖ್ಯೆಗಳನ್ನು ಸಹ ಪ್ರಕಟಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಕೋರಲಾಗಿತ್ತು. ಪರಿಣಾಮ, ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದೆ. ದಾಳಿಗಳನ್ನು ನಡೆಸಿ ಗಣೇಶ ಮೂರ್ತಿಗಳನ್ನು ಈ ತಂಡ ವಶಪಡಿಸಿಕೊಂಡಿತ್ತು.

‘ತಂದೆಯ ಕಾಲದಿಂದಲೂ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದೇವೆ. ಎಂದಿಗೂ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಿಲ್ಲ. ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದ ವಿಷಯ ಮಾಧ್ಯಮಗಳಿಂದ ಗೊತ್ತಾಗಿದೆ’ ಎನ್ನುತ್ತಾರೆ ಬೊಮ್ಮಾಪುರ ಓಣಿಯ ಮಹದೇವ್ ಜಾಧವ್. ‘ಈ ಬಾರಿ ವ್ಯಾಪಾರ ಉತ್ತಮವಾಗಿದೆ. ಗೌರಿ ಮೂರ್ತಿಗೂ ತುಂಬ ಬೇಡಿಕೆ ಇದೆ’ ಎಂದು ಅವರು ಹೇಳುತ್ತಾರೆ.

‘ನಾವು 40 ವರ್ಷದಿಂದ ಗಣೇಶ ಮೂರ್ತಿ ಮಾರುತ್ತಿದ್ದೇವೆ. ಪಿಒಪಿ ಮೂರ್ತಿಯನ್ನು ನಿಷೇಧ ಮಾಡಿರುವುದರಿಂದ ಮಾರಾಟ ಮಾಡುತ್ತಿಲ್ಲ. ಮಣ್ಣಿನ ಗಣೇಶ ಮೂರ್ತಿ ಮಾರಾಟದಲ್ಲಿಯೂ ಲಾಭ ಇದೆ. ಈ ಬಾರಿ ವ್ಯಾಪಾರ ಸಣ್ಣಗೆ ನಡೆದಿದೆ’ ಎನ್ನುತ್ತಾರೆ ರಾಜೇಂದ್ರ ಸುರೇಶ ಬಡಿಗೇರ್.

‘ನಾವು ಶಿರಸಿಯ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತೇವೆ. ಈ ಮೂರ್ತಿಗಳಿಗೆ ಇಲ್ಲಿ ಬಹಳ ಬೇಡಿಕೆ ಇದೆ. ಪಿಒಪಿ ಮೂರ್ತಿಯನ್ನು ಮಾರುವಂತಿಲ್ಲ ಎಂದು ಸ್ಥಳೀಯ ಕಾರ್ಪೋರೇಟರ್ ಸಹ ಬಂದು ಹೇಳಿದರು’ ಎಂದು ನೀತಾ ಚಿತ್ರಗಾರ್ ತಿಳಿಸಿದರು.

‘ನಿಯಮದಂತೆ ಪಿಒಪಿ ಗಣೇಶ ಮೂರ್ತಿ ತಯಾರಿಸುವಂತೆಯೇ ಇಲ್ಲ. ನಾವು ಪಿಒಪಿ ಗಣೇಶ ಮೂರ್ತಿ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆವು’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಹೇಳಿದರು.

**

ಪಿಒಪಿ ಮೂರ್ತಿಗಳನ್ನು ನಿಷೇಧ ಮಾಡಿರುವುದರಿಂದ ನಾವು ಮಾರಾಟ ಮಾಡುತ್ತಿಲ್ಲ. ಜನರು ಸಹ ಮಣ್ಣಿನ ಮೂರ್ತಿಗಳನ್ನೇ ಕೇಳುತ್ತಿದ್ದಾರೆ.
–ರಾಜೇಂದ್ರ ಸುರೇಶ ಬಡಿಗೇರ್

**

ಗಣೇಶ ಮಂಡಳಿಗಳ ಪದಾಧಿಕಾರಿಗಳ ಸಭೆ ಕರೆದು ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಮನವಿ ಮಾಡಲಾಗಿತ್ತು. ಅದು ಫಲ ನೀಡಿದೆ.
–ಬಿ.ಎಸ್. ನೇಮಗೌಡ, ಡಿಸಿಪಿ

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !