ಫಲಿತಾಂಶ ಕುಸಿತ: ಶಾಲೆಗಳ ಅನುದಾನ ಕಡಿತ

7

ಫಲಿತಾಂಶ ಕುಸಿತ: ಶಾಲೆಗಳ ಅನುದಾನ ಕಡಿತ

Published:
Updated:

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಐದು ವರ್ಷಗಳಿಂದ ಜಿಲ್ಲಾ ಸರಾಸರಿಗಿಂತ ಕಡಿಮೆ ಫಲಿತಾಂಶ ಪಡೆದ ಖಾಸಗಿ ಅನುದಾನಿತ ಪ್ರೌಢಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿರುವ ನಿಯಮಗಳನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಎಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇದರ ಅನ್ವಯ ಧಾರವಾಡ ಜಿಲ್ಲೆಯಲ್ಲಿ ಉಪನಿರ್ದೇಶಕರು, ಕಡಿಮೆ ಫಲಿತಾಂಶವಿರುವ ಶಾಲೆಗಳ ವೇತನ ತಡೆಹಿಡಿಯುವಂತೆ ಬಿಇಒಗಳಿಗೆ ‌ಸೂಚಿಸಿದ್ದಾರೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ, ‘ನಿಯಮದಲ್ಲಿ ಸ್ಪಷ್ಟತೆಯಿಲ್ಲ. ಜಿಲ್ಲಾ ಸರಾಸರಿಗಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳು ಎಂದು ನಿಯಮದಲ್ಲಿದೆ. ಜಿಲ್ಲೆಯ ಸರಾಸರಿ ಫಲಿತಾಂಶ ಶೇ 90 ಇದ್ದಾಗ ಶೇ 89 ಫಲಿತಾಂಶ ಪಡೆದ ಶಾಲೆಗಳ ಅನುದಾನವೂ ಕಡಿತಗೊಳ್ಳುತ್ತದೆ. ಸರಿಯಿಲ್ಲದ ನಿಯಮವನ್ನು ಅನುಷ್ಠಾನಗೊಳಿಸುವ ಮೂಲಕ ಶಿಕ್ಷಕರ ಜೀವನದ ಜೊತೆ ಆಟ ಆಡಲಾಗುತ್ತಿದೆ’ ಎಂದರು.

ಮೊದಲು ವಿಚಾರಣೆ, ಆಮೇಲೆ ಕ್ರಮ: ‘ಐದು ವರ್ಷಗಳಿಂದ ಫಲಿತಾಂಶ ಕಡಿಮೆ ನೀಡುತ್ತಿರುವ ಖಾಸಗಿ ಅನುದಾನಿತ ಶಾಲೆಗಳ ಬಳಿ ಮೊದಲು ವಿವರಣೆ ಕೇಳಿ, ಸರ್ಕಾರಕ್ಕೆ ಆ ಕುರಿತು ವರದಿ ನೀಡಬೇಕೆಂದು ನಿರ್ದೇಶಿಸಿದ್ದೇವೆ’ ಎಂದು ಶಾಲಿನಿ ರಜನೀಶ್‌ ಹೇಳಿದರು.

ಇದು ಹೊಸದೇನಲ್ಲ: ’ಕಡಿಮೆ ಫಲಿತಾಂಶವಿರುವ ಶಾಲೆಗಳ ವಿರುದ್ಧ ಈ ಹಿಂದೆಯೂ ಕ್ರಮಕೈಗೊಳ್ಳಲಾಗುತ್ತಿತ್ತು. ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿ ವೇಳೆ ಇದನ್ನು ಗಮನಿಸಲಾಗುತ್ತದೆ. 2017ರಿಂದಲೇ ಇದು ಅನುಷ್ಠಾನದಲ್ಲಿದೆ’ ಎಂದು ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕಿ ಫಿಲೋಮಿನಾ ಲೋಬೋ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !