ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವಾಹನಗಳಿಗೆ ಮಣೆ

ಶೈಕ್ಷಣಿಕ ಪ್ರವಾಸ ವೇಳೆ ಶಾಲೆಗಳಿಂದ ನಿಯಮ ಉಲ್ಲಂಘನೆ
Last Updated 1 ಡಿಸೆಂಬರ್ 2018, 19:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶೈಕ್ಷಣಿಕ ಪ್ರವಾಸಕ್ಕೆ ಕೆಎಸ್‌ಆರ್‌ಟಿಸಿ ಅಥವಾ ಕರ್ನಾಟಕ ಪ್ರವಾಸೋದ್ಯಮ ಇಲಾಖೆ (ಕೆಎಸ್‌ಟಿಡಿಸಿ) ವಾಹನಗಳನ್ನೇ ಕಡ್ಡಾಯವಾಗಿ ಬಳಸಬೇಕೆಂಬ ಆದೇಶವನ್ನು ಗಾಳಿಗೆ ತೂರಿ, ಬಹಳಷ್ಟು ಶಾಲೆಗಳು ಖಾಸಗಿ ವಾಹನಗಳಿಗೆ ಮಣೆ ಹಾಕುವ ಪರಿಪಾಠವನ್ನು ರೂಢಿಸಿಕೊಂಡಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ 2011ರಲ್ಲೇ ಆದೇಶ ಹೊರಡಿಸಿದೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಆದೇಶ ಅನ್ವಯವಾಗುತ್ತದೆ. ಆದೇಶ ಉಲ್ಲಂಘಿಸಿ, ಖಾಸಗಿ ವಾಹನಗಳಲ್ಲಿ ಪ್ರವಾಸ ಎಗ್ಗಿಲ್ಲದೆ ಸಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಈ ಪರಿಪಾಠ ಇದೆ.

ಶಿಕ್ಷಕರಿಗೆ ರಿಯಾಯಿತಿ, ಬಾಡಿಗೆ ಹೊಂದಾಣಿಕೆ, ವಿಡಿಯೊ–ಆಡಿಯೊ ಕೋಚ್‌ ಆಕರ್ಷಣೆ, ಮಿತಿಗಿಂತ ಹೆಚ್ಚು ಸೀಟು ಹಾಕಲು ಅವಕಾಶ ಮೊದಲಾದ ಕಾರಣಗಳಿಂದ ಶಾಲೆಗಳವರು ಖಾಸಗಿ ವಾಹನಗಳನ್ನು ಒಲೈಸುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 1,994 ಶಾಲೆಗಳು (ಸರ್ಕಾರಿ, ಅನುದಾನಿತ, ಅನುದಾನರಹಿತ) ಇವೆ. ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದಲ್ಲಿ ಪ್ರಸಕ್ತ ವರ್ಷ (ಏಪ್ರಿಲ್‌ನಿಂದ ನವೆಂಬರ್‌) ಶೈಕ್ಷಣಿಕ ಪ್ರವಾಸಕ್ಕೆ 31 ಬಸ್ಸುಗಳು ಮಾತ್ರ ಬುಕ್‌ ಆಗಿವೆ. ಈಗ ಶೈಕ್ಷಣಿಕ ಪ್ರವಾಸದ ಸಮಯ. ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳಲ್ಲಿ ಖಾಸಗಿ ವಾಹನಗಳೇ ಹೆಚ್ಚು.

‘ಕೆಎಸ್‌ಆರ್‌ಟಿಸಿ, ಕೆಎಸ್‌ಟಿಡಿಸಿ ಬಸ್‌ನಲ್ಲಿ 54 ಮಂದಿ ಸೀಟು ಮಿತಿ ಕಡ್ಡಾಯವಾಗಿ ಪಾಲಿಸಬೇಕು. ಬಾಡಿಗೆಯನ್ನು ಪೂರ್ವಭಾವಿಯಾಗಿ ಪಾವತಿಸಬೇಕು. ನಿಗದಿಗಿಂತ ಒಂದೆರಡು ಗಂಟೆ ಹೆಚ್ಚಾದರೂ ಅದಕ್ಕೂ ಬಾಡಿಗೆ ಪಾವತಿಸಬೇಕು. ಹೀಗಾಗಿ, ಶಾಲೆಗಳವರು ಹಿಂದೇಟು ಹಾಕುತ್ತಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಎಸ್‌ಆರ್‌ಟಿಸಿಯವರು ಶೈಕ್ಷಣಿಕ ಪ್ರವಾಸಕ್ಕೆ ಕಿ.ಮೀ. ಬಾಡಿಗೆ ದರ ₹ 1 ಕಡಿಮೆ ವಿಧಿಸುತ್ತಾರೆ. ವಿಮಾ ಸೌಲಭ್ಯ ನೀಡುತ್ತಾರೆ. ಕೆಎಸ್‌ಆರ್‌ಟಿಸಿ ಅಥವಾ ಕೆಎಸ್‌ಟಿಡಿಸಿ ವಾಹನವನ್ನೇ ಪಡೆದಿರವ ಬಗ್ಗೆ ಸಂಬಂಧಪಟ್ಟ ಸಂಸ್ಥೆಯ ಅಧಿಕೃತ ಪತ್ರವನ್ನು ಶಾಲೆಯವರು ಹಾಜರುಪಡಿಸಿದರೆ ಮಾತ್ರ ಅನುಮತಿ ನೀಡುವ ವ್ಯವಸ್ಥೆ ಜಾರಿಗೊಳಿಸಿದರೆ ನಿಯಮ ಉಲ್ಲಂಘನೆಗೆ ಅವಕಾಶ ಇರುವುದಿಲ್ಲ’ ಎಂದು ಹೇಳುತ್ತಾರೆ.

***

ಶೈಕ್ಷಣಿಕ ಪ್ರವಾಸಕ್ಕೆ ಶಾಲೆಗಳು ಖಾಸಗಿ ವಾಹನ ಬಳಸುವಂತಿಲ್ಲ. ನಿಯಮ ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.

-ಸಿ.ಪ್ರಸನ್ನಕುಮಾರ್‌, ಡಿಡಿಪಿಐ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT