ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ಆರಂಭವಾದ ಮತದಾನ

ಇವಿಎಂ ಯಂತ್ರಗಳಲ್ಲಿ ದೋಷ
Last Updated 13 ಮೇ 2018, 10:04 IST
ಅಕ್ಷರ ಗಾತ್ರ

ಬಂಗಾರಪೇಟೆ: ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಆದರೆ ಕೆಲವೆಡೆ ಇವಿಎಂ ಯಂತ್ರಗಳಲ್ಲಿ ದೋಷ ಉಂಟಾಗಿ ಸಕಾಲಕ್ಕೆ ಮತದಾನ ಆರಂಭವಾಗಿಲ್ಲ.

ಕ್ಷೇತ್ರದ ಬತ್ತಲಹಳ್ಳಿ ಗ್ರಾಮದ ಮತಗಟ್ಟೆಯ ಇವಿಎಂ ಯಂತ್ರದಲ್ಲಿ ಆರಂಭದಲ್ಲೇ ದೋಷ ಕಾಣಿಸಿಕೊಂಡಿದ್ದು, ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಬೇಕಿದ್ದ ಮತದಾನ 8.20ಕ್ಕೆ ತಡವಾಗಿ ಆರಂಭವಾಗಿದೆ. ಬೆಳಿಗ್ಗೆ 5.40ಕ್ಕೆ ಯಂತ್ರದಲ್ಲಿ ದೋಷ ಇರುವುದು ಖಾತರಿಯಾಗಿದ್ದು, ಕೂಡಲೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಬೇರೆ ಯಂತ್ರ ತಂದು ಬದಲಾಯಿಸುವಲ್ಲಿ ತಡವಾಯಿತು..

ತಾಲ್ಲೂಕಿನ ಬೆಂಗನೂರು ಗ್ರಾಮದಲ್ಲಿಯೂ ಇವಿಎಂ ಯಂತ್ರದಲ್ಲಿ ಕಂಡುಬಂದ ದೋಷದಿಂದಾಗಿ ಮುಕ್ಕಾಲು ಗಂಟೆ ತಡವಾಗಿ ಮತದಾನ ಆರಂಭವಾಗಿದೆ. ಬೆಳಿಗ್ಗೆ ಮತದಾನ ಮಾಡಲು ಬೂತ್‌ಗೆ ತೆರಳಿದ ಅದೇ ಗ್ರಾಮದ ಬಿಜೆಪಿ ಅಭ್ಯರ್ಥಿ ಬಿ.ಪಿ.ವೆಂಕಟಮುನಿಯಪ್ಪ ಅವರು ಕೂಡ ಕಾದು ಮತ ಚಲಾಯಿಸಿದರು.

ಇನ್ನೂ ಕೆಲವೆಡೆ ಆರಂಭದಲ್ಲಿ ಯಂತ್ರಗಳು ಕಾರ್ಯ ನಿರ್ವಹಿಸಿದರೂ ಮಧ್ಯದಲ್ಲಿ ಕೈಕೊಟ್ಟಿದೆ. ಹುದುಕುಳ ಗ್ರಾಮದಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತಾದರೂ ಸುಮಾರು 8.30 ರಷ್ಟೊತ್ತಿಗೆ ಇವಿಎಂ ಯಂತ್ರದಲ್ಲಿ ದೋಷ ಕಾಣಿಸಿಕೊಂಡು 1 ಗಂಟೆ ಕಾಲ ಮತದಾನ ಸ್ಥಗಿತಗೊಂಡಿತು. ಅದೇ ರೀತಿ ಸೋರೇಗೌಡನ ಕೋಟೆ, ಉತ್ತೂರು ಗ್ರಾಮದ ಮತಗಟ್ಟೆಯ ಇವಿಎಂ ಯಂತ್ರಗಳಲ್ಲಿ ದೋಷ ಉಂಟಾಗಿತ್ತು. ಸರಿಪಡಿಸಿದ ನಂತರ ಮತದಾನ ನಡೆಯಿತು.

ಬೆಳಿಗ್ಗೆ 9ರಿಂದ 12 ಗಂಟೆಯವರೆಗೆ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನ ಬಿಸಿಲಿನ ತಾಪಕ್ಕೆ ಮನೆಯಿಂದ ಹೊರಬರಲು ಮತದಾರರು ಹಿಂಜರಿದ ಕಾರಣ ಮಂದಗತಿಯಲ್ಲಿ ಸಾಗಿತು. ಸಂಜೆಯಾದಂತೆ ಮತ್ತೆ ಜನರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು.

ಮಹಿಳಾ ಮತದಾರರನ್ನು ಆಕರ್ಷಿಸುವ ಸಲುವಾಗಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ್ದ ದೊಡ್ಡಚಿನ್ನಹಳ್ಳಿ ಮತ್ತು ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಸಖಿ ಮತಗಟ್ಟೆ ಕೇಂದ್ರಗಳು ಪಿಂಕ್ ಬಣ್ಣದಿಂದ ಕಂಗೊಳಿಸಿದವು. ಆ ಬೂತ್‌ಗಳಲ್ಲಿ ಮತ ಚಲಾಯಿಸಿದ ಮಹಿಳೆಯರು ಸಂತಸ ಹಂಚಿಕೊಂಡರು.

ವಿವಿಧ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪಟ್ಟಣದ ಮತಗಟ್ಟೆಯೊಂದರ ಸಮೀಪ ನಿಂತು ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರನ್ನು ಓಲೈಸುತ್ತಿದ್ದರು. ಕೆಲ ಪಕ್ಷದವರು ಇವಿಎಂ ಯಂತ್ರದ ಮಾದರಿ ಹಿಡಿದು ಇಂತಹ ಗುರುತಿಗೆ ಮತ ಚಲಾಯಿಸಿ ಎಂದು ತೋರಿಸಿ ಮನವಿ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT