ಉಪ ಕಸುಬು ಕೈಗೊಳ್ಳಲು ಉತ್ತೇಜನ

7
ಮತ್ಸ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಸಚಿವ ವೆಂಕಟರಾವ್ ನಾಡಗೌಡ ಹೇಳಿಕೆ

ಉಪ ಕಸುಬು ಕೈಗೊಳ್ಳಲು ಉತ್ತೇಜನ

Published:
Updated:
Prajavani

ರಾಯಚೂರು: ರೈತರ ಆತ್ಮಹತ್ಯೆ ತಡೆಗಟ್ಟುವ ಚಿಂತನೆ ಮಾಡುತ್ತಿರುವ ರಾಜ್ಯ ಸರ್ಕಾರ ಉಪ ಕಸುಬುಗಳಿಂದ ರೈತರು ಲಾಭ ಮಾಡಿಕೊಳ್ಳಲು ಉತ್ತೇಜನ ನೀಡುತ್ತಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ ನಾಡಗೌಡ ಹೇಳಿದರು.

ಸಿಂಧನೂರು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಎರಡನೇ ರಾಜ್ಯ ಮಟ್ಟದ ಪಶು ಮತ್ತು ಮತ್ಸ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಾಗ ಹಾಗೂ ಮಳೆಯಿಲ್ಲದೆ ಬೆಳೆಹಾನಿ ಆಗಿರುವ ಸಂದರ್ಭದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಉಪ ಕಸುಬುಗಳ ಮೂಲಕ ರೈತರ ಆತ್ಮಹತ್ಯೆ ತಡೆಗಟ್ಟುವ ಉದ್ದೇಶದಿಂದ ರಾಜ್ಯದಲ್ಲಿನ ಮಾದರಿ ರೈತರನ್ನು ಕರೆಸಿ ಮೇಳ ನಡೆಸಲಾಗಿದೆ ಎಂದರು.

ಹಿರಿಯರು ಯೋಜನಾಬದ್ಧ ಕೃಷಿ ಮಾಡುತ್ತಿದ್ದರು. ಈಗ ಯೋಜನೆಯಿಲ್ಲದೆ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ, ಕೃಷಿ ಯೋಜನಾಬದ್ಧವಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಯೋಜನೆಗಳು ರೂಪಿಸಲಾಗುತ್ತಿದೆ ಎಂದು ನುಡಿದರು.

ನಾರಿ ಸುವರ್ಣ ಕುರಿ ಹಂಚಲು ₹5 ಕೋಟಿ ಅನುದಾನ ವೆಚ್ಚ ಮಾಡಲು ನಿರ್ಧರಿಸಲಾಗಿದ್ದು, ಯೋಜನೆಗಾಗಿ ಇನ್ನಷ್ಟು ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ತಿಳಿಸಿದರು.

ಇಲಾಖೆಯ ನಿರ್ದೇಶಕರಿಂದ ಹಿಡಿದು ಜವಾನನವರೆಗೂ ಶ್ರಮ ಹಾಕಿದ್ದರಿಂದ ಮೇಳವು ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಲು ವಿವಿಧ ಇಲಾಖೆಗಳು ಸಹಕಾರ ನೀಡಿವೆ. ಪ್ರತಿಯೊಬ್ಬ ವಿಭಾಗದವರು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರು.

ಮತ್ಸ್ಯಗಳನ್ನು ನೋಡಲು ಶಾಲಾ ವಿದ್ಯಾರ್ಥಿಗಳು ದೂರದ ಊರುಗಳಿಗೆ ಹೋಗುತ್ತಾರೆ. ಆದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳೆಲ್ಲ ನೋಡಲಿ ಎನ್ನುವ ಕಾರಣಕ್ಕಾಗಿ ಮೇಳವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಮಂಜುನಾಥ ನಾಯಕ್, ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆ ಆಯುಕ್ತ ಯು.ಪಿ.ಸಿಂಗ್, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಕೃಷ್ಣ ಇದ್ದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಿರ್ದೇಶಕ ಎಂ.ಟಿ.ಮಂಜುನಾಥ ಸ್ವಾಗತಿಸಿದರು. ಲಾವಣ್ಯ ಭಟ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !