ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಕಾಲೇಜು: 222 ಹುದ್ದೆಗಳು ಖಾಲಿ!

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 125, ಬೆಳಗಾವಿಯಲ್ಲಿ 97
Last Updated 20 ಜೂನ್ 2019, 11:21 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಪಿಯು ಕಾಲೇಜುಗಳಲ್ಲಿ ಒಟ್ಟು 222 ಉಪನ್ಯಾಸಕರ ಹುದ್ದೆಗಳು ಖಾಲಿ ಇರುವುದು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಫಲಿತಾಂಶ ಸುಧಾರಣೆಗೂ ತೊಡಕಾಗಿ ಪರಿಣಮಿಸಿದೆ. ಹುದ್ದೆಗಳ ಭರ್ತಿ ಬದಲಿಗೆ, ನಿಯೋಜನೆ ಅಥವಾ ಅತಿಥಿ ಉಪನ್ಯಾಸಕರ ನೇಮಕಕ್ಕೆ ಗಮನಹರಿಸಲಾಗುತ್ತಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ವಿವಿಧ ವಿಷಯಗಳ 97 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 125 ಹುದ್ದೆಗಳು ಖಾಲಿ ಇವೆ. ಗಡಿ ಜಿಲ್ಲೆಯಾದ ಇಲ್ಲಿ ಕನ್ನಡ ವಿಷಯದ ಉಪನ್ಯಾಸಕರ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವುದು ಆತಂಕಕ್ಕೆ ಕಾರಣವಾಗಿದೆ. ನಂತರದ ಸ್ಥಾನದಲ್ಲಿ ಇತಿಹಾಸ, ವ್ಯವಹಾರ ಅಧ್ಯಯನ ಹಾಗೂ ರಾಜ್ಯಶಾಸ್ತ್ರ ವಿಷಯಗಳಿವೆ. ಕೊರತೆಯ ಪ್ರಮಾಣ ಕಲಾ ವಿಭಾಗದಲ್ಲಿ ಜಾಸ್ತಿ ಇದೆ. ಇದು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಮೇ ಅಂತ್ಯದವರೆಗೆ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಬಹಳಷ್ಟು ಸಂಖ್ಯೆಯ ಹುದ್ದೆಗಳು ಭರ್ತಿಯೇ ಆಗದಿರುವುದು ದಿಗಿಲು ಉಂಟು ಮಾಡುತ್ತಿದೆ. ಬೆಳಗಾವಿಯಲ್ಲಿ 145 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 182 ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷವೂ ಇಲ್ಲಿ ಬೋಧನೆಗಾಗಿ ‘ಅತಿಥಿಗಳ’ ಮೊರೆ ಹೋಗುವುದು ತ‍ಪ್ಪುತ್ತಿಲ್ಲ.

ಪ್ರಾಂಶುಪಾಲರ ಹುದ್ದೆಗಳೂ ಖಾಲಿ!

ಸರ್ಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳು ಕೂಡ ಶೇ 50ರಷ್ಟು ಖಾಲಿ ಇರುವುದು ಮತ್ತಷ್ಟು ಅತಂಕ ಮೂಡಿಸುತ್ತದೆ. ಆಯಾ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರೇ ‘ಪ್ರಭಾರ’ ವಹಿಸಿಕೊಂಡು ಪ್ರಾಂಶುಪಾಲರ ಪಾತ್ರ ನಿರ್ವಹಿಸಬೇಕಾದ ಸ್ಥಿತಿ ಇದೆ. ಅಲ್ಲದೇ, ವಿವಿಧ ಕಾರಣಗಳಿಂದಾಗಿ ಡಿಡಿಪಿಯು (ಇಲಾಖೆಯ ಉಪನಿರ್ದೇಶಕರು) ಹುದ್ದೆಗಳಲ್ಲಿ ಯಾರೂ ಹೆಚ್ಚಿನ ಸಮಯದವರೆಗೆ ಉಳಿಯುತ್ತಿಲ್ಲ!

ಬೆಳಗಾವಿ ಜಿಲ್ಲೆಯಲ್ಲಿ ಇಲಾಖೆ ನೇತೃತ್ವ ವಹಿಸಿದವರನ್ನು ಕಡಿಮೆ ಸಮಯದಲ್ಲೇ ಪದೇ ಪದೇ ವರ್ಗಾವಣೆ ಮಾಡುತ್ತಿರುವುದು ಕೂಡ ಶೈಕ್ಷಣಿಕ ಪ್ರಗತಿಯ ಮೇಲೆ ಭಾರಿ ಪೆಟ್ಟು ನೀಡುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ವರ್ಷದ ಅವಧಿಯಲ್ಲೇ ನಾಲ್ವರು ಬದಲಾಗಿದ್ದಾರೆ! ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲೂ ಈಚೆಗೆ ಹೊಸ ಡಿಡಿಪಿಐ ಅಧಿಕಾರಿ ಸ್ವೀಕರಿಸಿದ್ದಾರೆ.

‘ಡಿಡಿಪಿಯುಗಳನ್ನು ದೀರ್ಘ ಸಮಯದವರೆಗೆ ಉಳಿಸಿದರೆ ಏನಾದರೂ ಬದಲಾವಣೆ, ಸುಧಾರಣೆ ತರಲು ಸಾಧ್ಯವಿದೆ. ಕೆಲವೇ ತಿಂಗಳಲ್ಲಿ ವರ್ಗಾವಣೆಯಾದರೆ ಏನು ಮಾಡಲಾದೀತು?’ ಎಂದು ಪ್ರಾಂಶುಪಾಲರೊಬ್ಬರು ಅನಿಸಿಕೆ ಹಂಚಿಕೊಂಡರು.

ಫಲಿತಾಂಶದ ಮೇಲೆ ಪರಿಣಾಮ

ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ 56.18ರಷ್ಟು ಫಲಿತಾಂಶ ಗಳಿಸಿ ರಾಜ್ಯದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 28ನೇ ಸ್ಥಾನ ಗಳಿಸಿತ್ತು. ಎರಡು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 60.86ರಷ್ಟು ಫಲಿತಾಂಶ ಗಳಿಸಿ 25ನೇ ಸ್ಥಾನದಲ್ಲಿದೆ. ಪಲಿತಾಂಶದಲ್ಲಿ ಗಣನೀಯ ಸುಧಾರಣೆ ಕಾಣದಿರುವುದಕ್ಕೆ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇರುವುದೂ ಪ್ರಮುಖ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಆದರೂ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿಲ್ಲ.

ನಿಯೋಜನೆ ನಡೆದಿಲ್ಲ

‘ಕೆಲವು ವಿಷಯಗಳ ಉಪನ್ಯಾಸಕರ ಹುದ್ದೆಗಳು ಖಾಲಿ ಇರುವುದು ನಿಜ. ನಿವೃತ್ತಿಯೂ ಇದಕ್ಕೆ ಕಾರಣವಿರಬಹುದು. ಕೆಲವು ಕಾಲೇಜುಗಳಲ್ಲಿ ಎಲ್ಲ ವಿಷಯಗಳವರೂ ಇದ್ದಾರೆ. ಪ್ರಥಮ ಪಿಯುಸಿ ಪ್ರವೇಶಕ್ಕೆ ಇನ್ನೂ ಸಮಯಾವಕಾಶ ಇರುವುದರಿಂದ (ದಂಡವಿಲ್ಲದೇ ಜೂನ್ 30ರವರೆಗೆ) ಇನ್ನೂ ನಿಯೋಜನೆ ಪ್ರಕ್ರಿಯೆ ನಡೆಸಿಲ್ಲ. ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಯೋಜನೆ ಆರಂಭಿಸಲಾಗುವುದು. ಕಾರ್ಯಭಾರ ಇಲ್ಲದವರನ್ನು ಬೇರೆ ಕಾಲೇಜುಗಳಿಗೆ ನಿಯೋಜಿಸಲಾಗುವುದು. ಅವರು ವಾರದಲ್ಲಿ ಮೂರು ದಿನ ಬೋಧಿಸುತ್ತಾರೆ’ ಎಂದು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಯು ಎಸ್.ಎಸ್. ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮಾಂತರ ಪ್ರದೇಶದ ಕೆಲವು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಕ್ಕೆ ಶೂನ್ಯ ದಾಖಲಾತಿ ಇರುತ್ತದೆ. ಅಲ್ಲಿನ ಉಪನ್ಯಾಸಕರನ್ನು ಇತರ ಕಾಲೇಜುಗಳಿಗೆ ನಿಯೋಜಿಸಲಾಗುವುದು. ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೆಲವರು ಸಿಗಬಹುದು. ಇದಾದ ಮೇಲೂ ಕೊರತೆ ಉಂಟಾದರೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶವಿದ್ದು, ಅದಕ್ಕೂ ಕ್ರಮ ವಹಿಸಲಾಗುವುದು. ಹೋದ ಸಾಲಿನಲ್ಲಿ 75 ಮಂದಿ ನೇಮಿಸಿಕೊಳ್ಳಲಾಗಿತ್ತು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT