ವಿವೇಕಾನಂದ ಕಾಲೇಜಿಗೆ ರಾಜ್ಯಮಟ್ಟದ ಹೆಗ್ಗಳಿಕೆ:ಜಾಗೃತಿಗೆ ವಿಜ್ಞಾನದಲ್ಲಿ 3ನೇಸ್ಥಾನ

ಶುಕ್ರವಾರ, ಏಪ್ರಿಲ್ 26, 2019
24 °C

ವಿವೇಕಾನಂದ ಕಾಲೇಜಿಗೆ ರಾಜ್ಯಮಟ್ಟದ ಹೆಗ್ಗಳಿಕೆ:ಜಾಗೃತಿಗೆ ವಿಜ್ಞಾನದಲ್ಲಿ 3ನೇಸ್ಥಾನ

Published:
Updated:
Prajavani

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಜೆ.ನಾಯಕ್ ಅವರು 592 ಅಂಕಗಳನ್ನು ಗಳಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ತೃತೀಯ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಜಾಗೃತಿ ಜೆ.ನಾಯಕ್ ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ತಲಾ 100 ಅಂಕ, ಜೀವಶಾಸ್ತ್ರದಲ್ಲಿ 96, ಇಂಗ್ಲಿಷ್ 97 ಮತ್ತು ಸಂಸ್ಕೃತದಲ್ಲಿ 99 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ 3ನೇ ಸ್ಥಾನದ ಸಾಧನೆ ದಾಖಲಿಸಿದ್ದಾರೆ.

ಜಾಗೃತಿ ಅವರು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಉದ್ಯೋಗಿಯಾಗಿರುವ ಪುತ್ತೂರು ನಗರದ ಕಲ್ಲಾರೆ ನಿವಾಸಿ ಜಗನ್ನಾಥ ನಾಯಕ್ ಮತ್ತು ಜ್ಯೋತಿ ನಾಯಕ್ ದಂಪತಿ ಪುತ್ರಿ. ಈ ದಂಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಇವರು ಮೊದಲನೆಯವರು.

‘595 ಅಂಕ ಪಡೆಯುವ ಗುರಿ ಹೊಂದಿದ್ದೆ. ನಿರೀಕ್ಷಿಸಿದ ಗುರಿಯ ಸಮೀಪ ಅಂಕ ಬಂದಿದೆ. ಕಷ್ಟಪಟ್ಟು ಮಾಡಿದ ಅಭ್ಯಾಸಕ್ಕೆ ತಕ್ಕ ಫಲ ಬಂದಿದೆ’ ಎಂದಿರುವ ಜಾಗೃತಿ ಅವರು, ‘ನೀಟ್ ಪರೀಕ್ಷೆ ಬರೆದಿದ್ದೇನೆ. ಅದರಲ್ಲಿಯೂ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ’ ಎಂದಿದ್ದಾರೆ.

ಮುಂದೆ ಸರ್ಕಾರಿ ಸೀಟು ಪಡೆದುಕೊಂಡು ಅವರು ವೈದ್ಯರಾಗುವ ಕನಸು ಕಾಣುತ್ತಿದ್ದಾರೆ.

ತಾಯಿಯ ಸಹಕಾರ: ‘ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕರು ಹಾಗೂ ಪೋಷಕರ ಪ್ರೇರಣೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಾನು ಮನೆಯಲ್ಲಿ ರಾತ್ರಿ ಬಹಳ ಹೊತ್ತಿನ ತನಕ ಓದುತ್ತಿದ್ದ ವೇಳೆ ತಾಯಿ ಕಥೆ ಪುಸ್ತಕ ಓದುವ ಮೂಲಕ ನನ್ನ ಓದಿಗೆ ಸಹಕಾರ ನೀಡುತ್ತಿದ್ದರು. ಅವರೆಲ್ಲರ ಪ್ರೇರಣೆಯಿಂದ ನನಗೆ ಸಾಧಿಸುವ ಛಲ, ಹುಮ್ಮಸ್ಸು ಬಂದಿದ್ದು, ಗರಿಷ್ಠ ಅಂಕ ಪಡೆಯಲು ಸಾಧ್ಯವಾಗಿದೆ’ ಎಂದು ಜಾಗೃತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !