₹ 2 ಕೋಟಿ ಲಂಚ ಕೊಟ್ಟ ಆರೋಪ ನಿರಾಕರಣೆ

7
ಎಸಿಬಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ ಪುಗಳೇಂದಿ

₹ 2 ಕೋಟಿ ಲಂಚ ಕೊಟ್ಟ ಆರೋಪ ನಿರಾಕರಣೆ

Published:
Updated:

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಇಲ್ಲಿಯ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಗೆಳತಿ ವಿ. ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲು ₹ 2 ಕೋಟಿ ಲಂಚ ನೀಡಲಾಯಿತು ಎಂಬ ಆರೋಪವನ್ನು ಎಐಎಡಿಎಂಕೆ ರಾಜ್ಯ ಕಾರ್ಯದರ್ಶಿ ವಿ. ಪುಗಳೇಂದಿ ನಿರಾಕರಿಸಿದ್ದಾರೆ.

ಜೈಲಿನೊಳಗೆ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಒದಗಿಸಲು ಹಿಂದಿನ ಬಂದೀಖಾನೆ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಅವರಿಗೆ ₹ 2 ಕೋಟಿ ಲಂಚ ಪಾವತಿಸಲಾಗಿತ್ತು ಎಂದು ಡಿಐಜಿ ಡಿ. ರೂಪಾ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಮುಂದೆ ಸೋಮವಾರ ಹಾಜರಾಗಿ ಹೇಳಿಕೆ ನೀಡಿರುವ ಪುಗಳೇಂದಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

‘ನಾನು, ಸತ್ಯನಾರಾಯಣರಾವ್‌ ಅವರಿಗೆ ಯಾವುದೇ ಲಂಚ ನೀಡಿಲ್ಲ. ವೈಯಕ್ತಿಕ ದ್ವೇಷದಿಂದಾಗಿ ಅವರ ವಿರುದ್ಧ ರೂಪಾ ಆರೋಪ ಮಾಡಿದ್ದಾರೆ. ಕಾನೂನು ಚೌಕಟ್ಟಿನೊಳಗೆ ಏನೆಲ್ಲಾ ಸೌಲಭ್ಯಗಳನ್ನು ಕೊಡಬಹುದಿತ್ತೋ ಅಷ್ಟನ್ನು ಮಾತ್ರ ಶಶಿಕಲಾ ಅವರಿಗೆ ಕೊಡಲಾಗಿದೆ’ ಎಂದು ಪುಗಳೇಂದಿ ವಿವರಿಸಿದ್ದಾರೆ.

ಬೆಳಿಗ್ಗೆ 11.30ರ ಸುಮಾರಿಗೆ ಎಸಿಬಿ ಅಧಿಕಾರಿ ಬಾಲರಾಜ್‌ ಅವರ ಮುಂದೆ ಹಾಜರಾದ ಪುಗಳೇಂದಿ ಅವರನ್ನು ಮಧ್ಯಾಹ್ನ 2 ಗಂಟೆವರೆಗೂ ಪ್ರಶ್ನಿಸಲಾಯಿತು. ‘ಶಶಿಕಲಾ ಅವರ ಮೇಲೆ ಆರೋಪ ಮಾಡಿದರೆ ದೇಶಾದ್ಯಂತ ಜನಪ್ರಿಯತೆ ಪಡೆಯಬಹುದು ಎಂಬ ಏಕೈಕ ಉದ್ದೇಶದಿಂದ ರೂಪಾ ಇಂಥ ಆರೋಪ ಮಾಡಿರಬಹುದು’ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ಅವರ ಸಮಿತಿ ಮುಂದೆಯೂ, ‘ರೂಪಾ ಅವರು ಪ್ರಚಾರ ಪಡೆಯುವ ಉದ್ದೇಶದಿಂದ ಈ ಆರೋಪ ಮಾಡಿರುವುದಾಗಿ ಹೇಳಿರುವುದಾಗಿ ಎಐಎಡಿಎಂಕೆ ನಾಯಕರು ಎಸಿಬಿ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ’ ಎಂದು ಮೂಲಗಳು ವಿವರಿಸಿವೆ.

‘ಆರಂಭದಲ್ಲಿ ಶಶಿಕಲಾ ಅವರನ್ನು ನೋಡಲು ತಮಿಳುನಾಡಿನ ಸಚಿವರು, ಶಾಸಕರು ಬರುತ್ತಿದ್ದರು. ಈಗ ಟಿ.ಟಿ.ವಿ ದಿನಕರನ್‌ ಅವರನ್ನು ಬಿಟ್ಟರೆ ಬೇರೆ ಯಾರೂ ಬರುತ್ತಿಲ್ಲ. ನಾನೂ ಐದು ತಿಂಗಳಿಂದ ಜೈಲಿಗೆ ಭೇಟಿ ಕೊಟ್ಟಿಲ್ಲ’ ಎಂದೂ ಅವರು ವಿವರಿಸಿದ್ದಾರೆ ಎಂದೂ ಮೂಲಗಳು ವಿವರಿಸಿವೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !