ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಚ ಪ್ರಕರಣ’: ಪುಟ್ಟರಂಗಶೆಟ್ಟಿ ವಿಚಾರಣೆ?

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಟೈಪಿಸ್ಟ್‌ ಬಳಿ ₹ 25.76 ಲಕ್ಷ ಹಣ
Last Updated 8 ಜನವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯದ ಟೈಪಿಸ್ಟ್‌ ಎಸ್‌.ಜೆ. ಮೋಹನ್‌ ಕುಮಾರ್‌ ಅವರ ಬಳಿ ₹25.76 ಲಕ್ಷ ಹಣ ಸಿಕ್ಕಿರುವಪ್ರಕರಣ ಕುರಿತು ತನಿಖೆ ಆರಂಭಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಸಚಿವ ಪುಟ್ಟರಂಗಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಹೀಗಾದಲ್ಲಿ ಸಚಿವರಿಗೆ ಸಂಕಷ್ಟ ಎದುರಾಗಲಿದೆ.

ವಿಧಾನಸೌಧ ಪೊಲೀಸರಿಗೆ ಮೋಹನ್‌ ಕುಮಾರ್‌ ನೀಡಿರುವ ಹೇಳಿಕೆಯಲ್ಲಿ, ‘ಕೆಲವು ಗುತ್ತಿಗೆದಾರರು ಹಾಗೂ ಅವರ ಆಪ್ತರಿಂದ ಪಡೆದಿದ್ದ ಹಣವನ್ನು ಸಚಿವರಿಗೆ ಲಂಚವಾಗಿ ಕೊಡಲು ಹೊರಟಿದ್ದೆ’ ಎಂದು ತಿಳಿಸಿರುವುದರಿಂದ ಸಚಿವರನ್ನು ವಿಚಾರಣೆಗೆ ಒಳ‍ಪಡಿಸುವ ಸಾಧ್ಯತೆಗಳಿವೆ ಎಂದು ಎಸಿಬಿ ಮೂಲಗಳು ‘‍‍ಪ್ರಜಾವಾಣಿ’ಗೆ ತಿಳಿಸಿವೆ.

ಈಗಾಗಲೇ ಮೋಹನ್‌ ಕುಮಾರ್‌ ಅವರನ್ನು ಬಂಧಿಸಿರುವ ಅಧಿಕಾರಿಗಳು, ಸಚಿವರ ಕಚೇರಿ ಶೋಧಿಸಿದ್ದು, ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ವಶಪಡಿಸಿಕೊಂಡಿದ್ದಾರೆ. ಆರೋಪಿ ಮೋಹನ್‌ ಕುಮಾರ್‌ ಅವರ ಮೊಬೈಲ್‌ನ ಕರೆ ವಿವರಗಳು, ಮೆಸೇಜ್‌ಗಳು ಹಾಗೂ ವಾಟ್ಸ್ಆ್ಯಪ್‌ ಸಂದೇಶಗಳನ್ನು ಪರಿಶೀಲಿಸುತ್ತಿದ್ದಾರೆ.

ಮಲ್ಲೇಶ್ವರದಲ್ಲಿರುವ ಮೋಹನ್‌ ಕುಮಾರ್‌ ಮನೆಯನ್ನು ಶೋಧಿಸಲಾಗಿದೆ. ಎಸಿಬಿಯ ಡಿಎಸ್‌‍ಪಿಗಳಾದ ರಾಜೇಂದ್ರ, ತಮ್ಮಯ್ಯ, ವಜೀರ್‌ ಅಹಮದ್‌ ಹಾಗೂ ಲಕ್ಷ್ಮೀನಾರಾಯಣ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ. ಐಜಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಡಾ. ಸಂಜೀವ್‌ ಪಾಟೀಲ್‌ ವಹಿಸಿದ್ದರು.

ಸಚಿವರಿಗೆ ತಲುಪಿಸಲು ಮೋಹನ್‌ ಕುಮಾರ್‌ ಅವರಿಗೆ ಹಣ ನೀಡಿದ್ದನ್ನಲಾದ ಗುತ್ತಿಗೆದಾರರಾದ ನಂದ, ಶ್ರೀನಿಧಿ, ಅನಂತು ಮತ್ತು ಕೃಷ್ಣಮೂರ್ತಿ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದ್ದು, ಬುಧವಾರ ಅವರ ವಿಚಾರಣೆ ನಡೆಯಲಿದೆ. ಕೃಷ್ಣಮೂರ್ತಿಯು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರ ಕಚೇರಿ ನೌಕರ ಎನ್ನಲಾಗಿದ್ದು,
ಈ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

‘ಹಣ ನಮಗೆ ಸಂಬಂಧಿಸಿದ್ದಲ್ಲ’

ಚಿತ್ರದುರ್ಗ: ‘ವಿಧಾನಸೌಧದಲ್ಲಿ ಈಚೆಗೆ ಸಿಕ್ಕಂಥ ಹಣ ನನಗಾಗಲೀ, ಸಚಿವ ಪುಟ್ಟರಂಗಶೆಟ್ಟಿ ಅವರಿಗಾಗಲೀ ಸಂಬಂಧಿಸಿದ್ದಲ್ಲ’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಪ್ರತಿಕ್ರಿಯಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೊಲೀಸರ ಸರ್ಪಗಾವಲಿನ ನಡುವೆಯೂ ವಿಧಾನಸೌಧದೊಳಗೆ ಇಷ್ಟುಹಣ ಹೋಗಿರುವುದು ನನಗೂ ಆಶ್ಚರ್ಯ ಉಂಟು ಮಾಡಿದೆ. ನನ್ನ ಆಪ್ತ,ನಾನೂ ಶಾಮೀಲಾಗಿದ್ದೇವೆ ಎಂಬುದು ಸತ್ಯಕ್ಕೆ ದೂರವಾದುದು’ ಎಂದು ಹೇಳಿದರು.

ತನಿಖೆಯನ್ನು ಎಸಿಬಿಗೆ ವಹಿಸಲಾಗಿದ್ದು, ಪರಿಶೀಲನೆ ನಂತರ ಬಹಿರಂಗವಾಗಲಿದೆ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT