‘ದೊಡ್ಮನೆ’ ಅಮ್ಮಂದಿರು!

ಸೋಮವಾರ, ಮಾರ್ಚ್ 25, 2019
28 °C

‘ದೊಡ್ಮನೆ’ ಅಮ್ಮಂದಿರು!

Published:
Updated:

ನನ್ನ ಬಾಲ್ಯದ ದಿನಗಳಿಗೆ ಹೊರಳಿದರೆ ಅಮ್ಮನನ್ನು ಬಿಟ್ಟರೆ ನನಗೆ ತುಂಬ ನೆನಪಾಗುವುದು ಅಪ್ಪಾಜಿಯ ತಂಗಿ. ಅವರ ಹೆಸರು ನಾಗಮ್ಮ.

ಕುಟುಂಬದಲ್ಲಿ ನಮ್ಮ ತಂದೆ ರಾಜ್‌ಕುಮಾರ್‌ಗೆ ತುಂಬ ಬೆಂಬಲವಾಗಿದ್ದವರು ಮೂರು ಜನ. ಒಬ್ಬರು ನಮ್ಮ ಚಿಕ್ಕಪ್ಪ, ಅಂದರೆ ಅಪ್ಪಾಜಿಯ ತಮ್ಮ, ವರದರಾಜ್‌. ಇನ್ನೊಬ್ಬರು ನಮ್ಮ ಅತ್ತೆ, ಅಂದರೆ ಅಪ್ಪಾಜಿಯ ತಂಗಿ. ಮತ್ತೊಬ್ಬರು ನಮ್ಮಮ್ಮ.

ನಮ್ಮ ಮನೆಯಲ್ಲಿ ನಾಲ್ಕು ಸಂಸಾರಗಳು ಒಟ್ಟಿಗೆ ಇದ್ದವು. ಅಪ್ಪಾಜಿಯದು, ಅವರ ಇಬ್ಬರು ತಂಗಿಯರು ಮತ್ತು ತಮ್ಮನ ಸಂಸಾರ. ನಾವೆಲ್ಲರೂ ಬೆಳೆದಿದ್ದು ಒಟ್ಟಿಗೆ. 23 ಜನ ಮಕ್ಕಳು ಮನೆಯಲ್ಲಿದ್ದರು. ಅಮ್ಮ ತುಂಬ ಬ್ಯುಸಿ ಇರುತ್ತಿದ್ದರು. ಅಪ್ಪಾಜಿಯನ್ನು ನೋಡಿಕೊಳ್ಳುವುದು, ಸಿನಿಮಾ ಚಿತ್ರೀಕರಣ, ವ್ಯವಹಾರಗಳನ್ನು ನಿಭಾಯಿಸುತ್ತಿದ್ದದ್ದು ಅವರೇ. ಆದ್ದರಿಂದ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮತ್ತೆಗೆ ವಹಿಸಿ ಹೋಗುತ್ತಿದ್ದರು.


ನಾಗಮ್ಮ, ರಾಜ್‌ಕುಮಾರ್‌ ತಂಗಿ

ಕುಟುಂಬದಲ್ಲಿ ಅಪ್ಪಾಜಿ ಒಬ್ಬರೇ ಸಂಪಾದನೆ ಮಾಡುತ್ತಿದ್ದವರು. ಸಿನಿಮಾ ಕಥೆಗಳನ್ನೆಲ್ಲ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ವ್ಯವಹಾರ ಅಮ್ಮ ನೋಡಿಕೊಳ್ಳುತ್ತಿದ್ದರು. ಮನೆಯನ್ನು ಅತ್ತೆ ನೋಡಿಕೊಳ್ಳುತ್ತಿದ್ದರು. ಈ ನಾಲ್ಕು ಶಕ್ತಿಗಳಿಂದಲೇ ನಮ್ಮ ಕುಟುಂಬ ಮೇಲೆ ಬಂದಿರುವುದು.

ನನ್ನ ಅತ್ತೆಯ ಬಗ್ಗೆ ಇನ್ನಷ್ಟು ಹೇಳಬೇಕು. ನಾನು ಹುಟ್ಟಿದ ಒಂದು ತಿಂಗಳಿಗೆ ನಾಗತ್ತೆಗೂ ಮಗಳು ಹುಟ್ಟಿದ್ದಳು. ಅವಳ ಹೆಸರು ಸರಸ್ವತಿ. ನಾನು ಆಗಸ್ಟ್‌ 15ಕ್ಕೆ ಹುಟ್ಟಿದರೆ ಸರಸ್ವತಿ ಸೆಪ್ಟೆಂಬರ್‌ 25ಕ್ಕೆ ಹುಟ್ಟಿದ್ದಳು. ನಾನಿನ್ನೂ ಒಂದೂವರೆ ತಿಂಗಳು ಮಗುವಾಗಿದ್ದಾಗಲೇ ಅಮ್ಮ ನನ್ನನ್ನು ಮನೆಯಲ್ಲಿ ಬಿಟ್ಟು ಶೂಟಿಂಗ್‌ಗೆ ಹೋಗಲಿಕ್ಕೆ ಶುರುಮಾಡಿದ್ದರು. ಆಗಿನ್ನೂ ನಾನು ಎದೆಹಾಲು ಕುಡಿಯುತ್ತಿದ್ದೆನಂತೆ. ಆಗ ಅತ್ತೆ ಅವರ ಮಗುವಿನ ಜೊತೆಗೆ ನನಗೂ ಅವರ ಎದೆಹಾಲು ಕುಡಿಸುತ್ತಿದ್ದರಂತೆ. ‘ಅವನು ಕುಡಿಯಲಿ, ಅವನು ಕುಡಿಯಲಿ’ ಎಂದು ನನಗೆ ಕುಡಿಸುತ್ತಿದ್ದರಂತೆ. ‘ಯಾಕೆ ಹಾಗೆ ಮಾಡ್ತೀಯಾ? ನಿನ್ನ ಮಗುವಿಗೆ ಕುಡಿಸು’ ಎಂದು ಅಪ್ಪಾಜಿ ಬೈಯುತ್ತಿದ್ದರಂತೆ. ಆದರೆ, ನಾಗಮ್ಮ, ‘ನೀನು ಸಿನಿಮಾ ಮಾಡು. ಮನೆ ವ್ಯವಹಾರ ನಮಗೆ ಬಿಟ್ಟುಬಿಡು’ ಎಂದು ಅವರಿಗೆ ಹೇಳಿ ನಮ್ಮನ್ನೆಲ್ಲ ನೋಡಿಕೊಳ್ಳುತ್ತಿದ್ದರಂತೆ.

ಎಂಥ ತಾಯಿ ನೋಡಿ ಅವರು ! ಇವತ್ತಿಗೂ ಅವರು ನನ್ನ ಜೊತೆಗೆ ಇದ್ದಾರೆ. ಮೊನ್ನೆ ನನ್ನ ‘ಅಮ್ಮನ ಮನೆ’ ಸಿನಿಮಾ ಟೀಸರ್‌ ಅವರಿಂದಲೇ ಬಿಡುಗಡೆ ಮಾಡಿಸಿದೆ. ನನ್ನನ್ನು ಕೊನೆಯವರೆಗೂ ಅವರೇ ಸಾಕಿದರು. ಈಗಲೂ ಸಾಕುತ್ತಿದ್ದಾರೆ. ಅವರನ್ನು ನೋಡಿದಾಗೆಲ್ಲ ನಮ್ಮಮ್ಮ ಎಲ್ಲಿಗೂ ಹೋಗಲಿಲ್ಲ; ಇಲ್ಲಿಯೇ, ಇವರಲ್ಲಿಯೇ ಇದ್ದಾರೆ ಅನಿಸುತ್ತದೆ.

ಅಮ್ಮನ ನೆನಪು

ನಾನು ಒಂಬತ್ತನೇ ಕ್ಲಾಸಿನಲ್ಲಿ ಓದುವವರೆಗೂ ಅಮ್ಮನ ಸೆರಗನ್ನು ಹಿಡಿದುಕೊಂಡೇ ಓಡಾಡುತ್ತಿದ್ದೆ. ಅವರು ಊರಿಗೆ ಹೋದಾಗ ‘ಯಾವಾಗ ಬರ್ತೀಯಾ?’ ಎಂದು ಅಳುತ್ತಿದ್ದೆ. ‘ನೀನು ಬರುವವರೆಗೆ ಊಟ ಮಾಡಲ್ಲ’ ಎಂದು ಹಟ ಮಾಡುತ್ತಿದ್ದೆ. ನಂತರ ನಾನು ಬೆಳೆದು ನಟನಾಗಿ ಹಲವು ಸಿನಿಮಾಗಳನ್ನು ಮಾಡಿದ ಮೇಲೆ, ಒಂದು ಹಂತದಲ್ಲಿ ನನ್ನನ್ನು ವಜ್ರೇಶ್ವರಿ ಕಂಬೈನ್ಸ್‌ಗೆ ತಂದು ಕೂರಿಸಿದ್ದು ಅವರೇ. ನಿರ್ಮಾಣ ಮತ್ತು ವಿತರಣೆಯ ಕೆಲಸವನ್ನು ಹೇಳಿಕೊಟ್ಟರು.


ಪಾರ್ವತಮ್ಮ ರಾಜ್‌ಕುಮಾರ್‌

ಅವರ ಬದುಕೇ ಒಂದು ಸಾಹಸಗಾಥೆ. ಆ ಕಾಲದಲ್ಲಿ ಸಿನಿಮಾ ಎಂದರೇ ಭಯ ಎಲ್ಲರಿಗೂ. ಅಂಥ ಸಂದರ್ಭದಲ್ಲಿ ಒಬ್ಬಳು ಹೆಣ್ಣುಮಗಳು ಸಿನಿಮಾರಂಗಕ್ಕೆ ಬಂದು ಇಲ್ಲಿ ಬೆರೆತು, ನಿರ್ಮಾಪಕಿಯಾಗಿ, 95 ಸಿನಿಮಾ ನಿರ್ಮಾಣ ಮಾಡುವುದು ಸಣ್ಣ ಸಾಧನೆಯೇ? ಇದನ್ನು ಅಮ್ಮ ಮಾಡಿದರು. ಬಹುಶಃ ಪ್ರಪಂಚದ ಯಾವ ಹೆಣ್ಣೂ ಇಷ್ಟೊಂದು ಸಿನಿಮಾ ನಿರ್ಮಾಣ ಮಾಡಿರಲಿಕ್ಕಿಲ್ಲ. ಗಂಡನ ಬೆನ್ನೆಲುಬಾಗಿ ನಿಂತು, ಮೂರು ಮಕ್ಕಳನ್ನು ಸಿನಿಮಾಗೆ ಸೇರಿಸಿ, ನಂತರ ಮೊಮ್ಮಕ್ಕಳೂ ಸಿನಿಮಾರಂಗಕ್ಕೆ ಬಂದಿದ್ದನ್ನು ನೋಡಿ ಹೋದರು ಅವರು. ಒಂದು ಸಂಸ್ಥೆಯನ್ನು ಬುಡಸಮೇತ ಕಟ್ಟಿ, ಬೆಳೆಸಿ, ಹಣ್ಣುಕೊಡುವ ಮರವನ್ನಾಗಿ ರೂಪಿಸಿ ಹೋದವರು ಅವರು. ನಾವೀಗ ಅವರು ಬೆಳೆಸಿದ ಮರದ ಹಣ್ಣು ತಿನ್ನುತ್ತಿದ್ದೇವಷ್ಟೆ.

ಅವರ ಜೀವನಚಕ್ರ ನೋಡಿ. ಅವರಿಗೆ ಎರಡು ತಿಂಗಳಾಗಿದ್ದಾಗ, ನನ್ನ ತಾತ ಹೋಗಿ ‘ಈ ಹುಡುಗಿಯೇ ನಮ್ಮನೆ ಸೊಸೆಯಾಗಿ ಬರಬೇಕು’ ಎಂದು ನಿಕ್ಕಿ ಮಾಡುತ್ತಾರೆ. ಈವತ್ತು ಅದ್ಭುತ ನೋಡಿ, ಅಪ್ಪಾಜಿ ಮತ್ತು ಅಮ್ಮ ಇಬ್ಬರೂ ಒಂದೇ ಮಣ್ಣಿನಲ್ಲಿ ಹೋಗಿ ಮಲಗಿದ್ದಾರೆ. ಬದುಕಿನುದ್ದಕ್ಕೂ ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತರು. ನಂತರ ಅಪ್ಪಾಜಿ ಅವರನ್ನು ಕಳೆದುಕೊಂಡು ಅಮ್ಮ ಹತ್ತು ವರ್ಷ ಬದುಕಿದರು. ಕ್ಯಾನ್ಸರ್‌ ಜೊತೆಗೆ ಹೊಡೆದಾಡಿಕೊಂಡು ಕುಟುಂಬವನ್ನು ಸಂಭಾಳಿಸಿದರು. ಮಕ್ಕಳಿಗೆಲ್ಲ ಒಂದು ನೆಲೆ ಮಾಡಿದರು. ಇಷ್ಟೆಲ್ಲ ಸಾಧನೆ ಮಾಡಿಯೂ, ‘ನಾನೇನೂ ಮಾಡಿಲ್ಲ, ನನಗೇನೂ ಗೊತ್ತಿಲ್ಲ’ ಎನ್ನುತ್ತಲೇ ತಂದೆಯ ಪಕ್ಕದಲ್ಲಿಯೇ ಹೋಗಿ ಮಲಗಿದ್ದಾರೆ. ತೊಟ್ಟಿಲಿಂದ ಹಿಡಿದು ಸಮಾಧಿಯವರೆಗೂ ಒಟ್ಟಿಗೇ ಇರುವ ದಾಂಪತ್ಯ ಅವರದ್ದು.

ಪತ್ನಿಯಲ್ಲಿ ತಾಯ್ತನದ ಬಿಂಬಗಳು

ಅಮ್ಮನ ನಂತರ ನನ್ನ ಬದುಕಿನಲ್ಲಿ ಇನ್ನೊಬ್ಬಳು ತಾಯಿ ಬಂದರು.

ಆರು ವರ್ಷಗಳ ಹಿಂದೆ ನನಗೆ ಸ್ಟ್ರೋಕ್ ಆಯ್ತು. ನನ್ನ ದೇಹದ ಎಡಭಾಗ ಪೂರ್ತಿ ನಿಶ್ಚಲವಾಗಿಬಿಟ್ಟಿತ್ತು. ಎಡಬದಿಗೆ ಕಿವಿ ಕೇಳಿಸುತ್ತಿರಲಿಲ್ಲ, ದೃಷ್ಟಿ ಮಂದವಿತ್ತು. ಕೈಕಾಲು ಎತ್ತಲಿಕ್ಕೇ ಆಗುತ್ತಿರಲಿಲ್ಲ. ಇಂಥ ಸಮಯದಲ್ಲಿ ಹೆಂಡತಿ ನನ್ನನ್ನು ನೋಡಿಕೊಂಡ ರೀತಿ ಇದೆಯಲ್ಲ, ಒಂದು ಕೈ ನನ್ನ ತಾಯಿಗಿಂತ ಜಾಸ್ತಿ ಅವಳು. ನನಗೆ ಬಾತ್‌ರೂಮ್‌ಗೆ ಹೋದರೆ ಸ್ನಾನ ಮಾಡಕ್ಕಾಗುತ್ತಿರಲಿಲ್ಲ. ತೊಳೆದುಕೊಳ್ಳಲಿಕ್ಕೂ ಆಗುತ್ತಿರಲಿಲ್ಲ. ಈ ಎಲ್ಲವನ್ನೂ ಅವಳು ಮಾಡಿದಳು. ನನ್ನ ತಾಯಿ ಇದನ್ನೆಲ್ಲ ಮಾಡುತ್ತಿದ್ದಾಗ ನಾನಿನ್ನೂ ಮಗುವಾಗಿದ್ದೆ. ಆದರೆ ಹೆಂಡತಿ ಮಾಡುವ ಸಂದರ್ಭದಲ್ಲಿ ನಾನು ಅವಳಿಗಿಂತ ದೊಡ್ಡವನಾಗಿದ್ದೆ.


ಮಂಗಳಾ, ರಾಘವೇಂದ್ರ ರಾಜ್‌ಕುಮಾರ್‌ ಪತ್ನಿ

‘ನಂಜುಂಡಿ ಕಲ್ಯಾಣ’ ಸಿನಿಮಾದ ಜನಪ್ರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಸಡನ್ನಾಗಿ ರೋಗಿಯಾಗಿಬಿಟ್ಟರೆ ಅವಳ ಮನಃಸ್ಥಿತಿ ಏನಾಗಿರಬೇಡ? ಎರಡು ಮಕ್ಕಳಿದ್ದಾರೆ. ಅಮ್ಮನಿಗೆ ಕ್ಯಾನ್ಸರ್‌ ಇದೆ. ಇಂಥ ಸಮಯದಲ್ಲಿ ಅವಳು ನನ್ನನ್ನು ಆರು ವರ್ಷ ಅಕ್ಷರಶಃ ಸಾಕಿದಳು. ನಾವು ಹಟ ಮಾಡಿದಾಗ ತಾಯಿಯಾದರೆ ಹೊಡೆದುಬಿಡುತ್ತಾಳೆ. ಆದರೆ ಇವಳು ಹೊಡೆಯುವ ಹಾಗಿಲ್ಲ. ನನ್ನ ಕೋಪವನ್ನೆಲ್ಲ ಸಹಿಸಿಕೊಂಡು ಸಲುಹಿದಳು. ನಾನು ಬೈದಿದ್ದು ಬೈಸಿಕೊಂಡು ಪೋಷಿಸಿದಳು.

ಈವತ್ತೂ ನನ್ನನ್ನು ನೋಡಿಕೊಳ್ಳುತ್ತಿರುವವಳು ಅವಳೇ. ಅವಳ ಧೈರ್ಯದಿಂದ ನಾನು ಈಗ ಮೂರು ಸಿನಿಮಾ ಮಾಡುತ್ತಿದ್ದೇನೆ. ಅವಳನ್ನು ನೋಡಿದಾಗ ನನಗನ್ನಿಸುತ್ತದೆ. ‘ಅಮ್ಮ ಎಲ್ಲಿಯೂ ಹೋಗಿಲ್ಲ. ನನ್ನ ಕಣ್ಣೆದುರಿಗೇ ಇದ್ದಾಳೆ’.

ನನಗೆ ಸ್ಟ್ರೋಕ್ ಆಗಿದ್ದರಿಂದ ಕಳೆದುಕೊಂಡಿದ್ದು ಕಮ್ಮಿ; ಪಡೆದುಕೊಂಡಿದ್ದೇ ಜಾಸ್ತಿ. ಇಂದು ನಾನು ಏನೇ ಸಾಧನೆ ಮಾಡಿದರೂ ಅದನ್ನು ನನ್ನ ಹೆಂಡತಿ ಪಾದಕ್ಕೆ ಹಾಕಬೇಕು. ಆರು ವರ್ಷಗಳಿಂದ ನಾನು ಅನುಭವಿಸುತ್ತಿರುವ ಸ್ಟ್ರೋಕ್ ನನ್ನ ಪಾಲಿಗೆ ವಿಶ್ವವಿದ್ಯಾಲಯ.

ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು; ‘ಹೆಂಡತಿಯಲ್ಲಿ ಬರೀ ಕಾಮವನ್ನು ಹುಡುಕಬೇಡ. ಅಮ್ಮನನ್ನು ಹುಡುಕು. ಸಿಕ್ತಾಳೆ. ಅವರೊಳಗಿರುವ ತಾಯಿತನವನ್ನು ನಾವು ಹೊರಗಡೆ ತರಬೇಕು. ಒಮ್ಮೆ ಆ ತಾಯ್ತನ ಹೊರಬಂದರೆ ಬರುತ್ತಲೇ ಇರುತ್ತದೆ. ಆಮೇಲೆ ಅಲ್ಲಿಯೇ ನಿನಗೆ ಮಗಳು ಸಿಕ್ತಾಳೆ; ಸೊಸೆ ಸಿಕ್ತಾಳೆ ಕಂದಾ... ನಾವು ಹುಡುಕಬೇಕು ಅಷ್ಟೆ.’ ಅವರ ಮಾತು ನನ್ನ ಬದುಕಿನಲ್ಲಿ ಅಕ್ಷರಶಃ ನಿಜವಾಗಿದೆ.

ನನಗೆ ಸ್ಟ್ರೋಕ್ ಆದಾಗ ಅಮ್ಮ ತುಂಬ ಬೇಜಾರು ಮಾಡಿಕೊಂಡಿದ್ದರು. ‘ನೀನು ಚೆನ್ನಾಗಿ ನಟನೆ ಮಾಡಿಕೊಂಡಿದ್ದೆ. ನಿನ್ನದೇ ಅಂತ ವೃತ್ತಿ ಇತ್ತು. ಅದನ್ನು ಬಿಡಿಸಿ ಮನೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿ ಟೆನ್ಷನ್‌ ಕೊಟ್ಟುಬಿಟ್ಟೆ. ನಿನ್ನನ್ನು ನಾನೇ ಸ್ಟ್ರೋಕ್‌ಗೆ ತಳ್ಳಿಬಿಟ್ಟೆ. ನನ್ನನ್ನು ಕ್ಷಮಿಸಿಬಿಡ್ತೀಯಾ?’ ಎಂದು ಕೇಳುತ್ತಿದ್ದರು. ‘ಹಂಗೆಲ್ಲ ಅನ್ಬೇಡ. ತಾಯಿ ಯಾವತ್ತೂ ಮಕ್ಕಳಿಗೆ ಕೇಡು ಮಾಡಕ್ಕೆ ಆಗಲ್ಲ. ನಾನು ಮತ್ತೆ ಆ್ಯಕ್ಟ್‌ ಮಾಡ್ತೀನಿ. ಇದರಿಂದ ಬೇರೆ ಏನೋ ಸಿಗುವುದಿದೆ ನನಗೆ ಅನಿಸುತ್ತದೆ’ ಎಂದು ಸಮಾಧಾನ ಮಾಡುತ್ತಿದ್ದೆ ನಾನು.

‘ಅಮ್ಮನ ಮನೆ’ ಸಿನಿಮಾ ಒಪ್ಪಿಕೊಂಡಿದ್ದೂ ಇದೇ ಕಾರಣಕ್ಕೆ. ತಾಯಿ, ಹೆಂಡತಿ ಮತ್ತು ಮಗಳನ್ನು ಒಬ್ಬ ಹೇಗೆ ಸಮದೂಗಿಸಿಕೊಂಡು ಹೋಗಬಹುದು ಎನ್ನುವುದೇ ಅಮ್ಮನ ಮನೆ ಸಿನಿಮಾದ ಕಥೆ. ಆ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡುಬಿಟ್ಟೆ. ಆ ಮೂರೂ ಪಾತ್ರಗಳನ್ನೂ ನೋಡಿದ ಹಾಗಾಯ್ತು. ಮತ್ತೆ ಅಮ್ಮನ ಜತೆ ಬದುಕಿದ ಹಾಗಾಯ್ತು ಈ ಸಿನಿಮಾದಿಂದ. ಈ ಸಿನಿಮಾದಲ್ಲಿ ನಾನು ನಟಿಸಿಲ್ಲ. ವರ್ತಿಸಿದ್ದೇನೆ.

ಮಕ್ಕಳಲ್ಲಿಯೂ ಅಮ್ಮನ ಅಕ್ಕರೆ

ನನಗೆ ಇಬ್ಬರು ಗಂಡುಮಕ್ಕಳು. ಶಿವಣ್ಣನಿಗೆ ಮತ್ತು ಅಪ್ಪುವಿಗೆ ಇಬ್ಬರಿಗೂ ಎರಡು ಹೆಣ್ಣುಮಕ್ಕಳು. ಆ ನಾಲ್ಕು ಹೆಣ್ಣುಮಕ್ಕಳೂ ನನ್ನ ಮಕ್ಕಳೇ. ನನಗೇ ಹೆಣ್ಣುಮಕ್ಕಳನ್ನು ಕೊಟ್ಟುಬಿಟ್ಟರೆ ಅವರ ಮೇಲೆ ಪ್ರೀತಿ ಕಮ್ಮಿಯಾಗುತ್ತದೆ ಎಂದು ದೇವರೇ ನನಗೆ ಹೆಣ್ಣುಮಕ್ಕಳನ್ನು ಕೊಟ್ಟಿಲ್ಲ ಅನಿಸುತ್ತದೆ. ನನ್ನ ಹೆಣ್ಣುಮಕ್ಕಳನ್ನು ಅವರಲ್ಲಿ ನೋಡುತ್ತೇನೆ. ಅಪ್ಪು ಮತ್ತು ಶಿವಣ್ಣ ಅವರು ಗಂಡುಮಕ್ಕಳನ್ನು ನನ್ನ ಮಕ್ಕಳಲ್ಲಿ ನೋಡುತ್ತಾರೆ. ಈ ಬಾಂಧವ್ಯ ಬಿಡಿಸಬಾರದು ಎಂಬ ಕಾರಣಕ್ಕಾಗಿಯೇ ದೇವರು ಹೀಗೆ ಮಾಡಿದ್ದಾನೆ ಅನಿಸುತ್ತದೆ.

ಅಪ್ಪುವಿನ ಇಬ್ಬರು ಹೆಣ್ಣುಮಕ್ಕಳೂ ನನ್ನ ಜೊತೆಗೇ ಬೆಳೆದಿದ್ದು. ಒಬ್ಬಳ ಹೆಸರು ಧೃತಿ, ಇನ್ನೊಬ್ಬಳು ವಂದಿತಾ. ಅವರಿಬ್ಬರೂ ನನ್ನ ಜೊತೆಗೇ ಇರ್ತಾರೆ. ನಮ್ಮ ಮನೆಯಲ್ಲಿಯೇ ಮಲಗುತ್ತಾರೆ. ಅಪ್ಪುವನ್ನು ಅವರು ‘ಪಪ್ಪಾ’ ಎಂದು ಕರೆಯುತ್ತಾರೆ; ನನ್ನನ್ನು ‘ಅಪ್ಪಾ’ ಅಂತ ಕರೀತಾರೆ.


‘ಅಮ್ಮನ ಮನೆ’ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್

ನಮ್ಮ ಕುಟುಂಬ ಇರುವುದೇ ಹಾಗೆ. ಕುಟುಂಬವೇ ನಮ್ಮ ಶಕ್ತಿ. ಅಪ್ಪಾಜಿ ನಮಗೆ ಯಾವುದನ್ನೂ ಹೇಳಿಕೊಟ್ಟಿಲ್ಲ. ಎಲ್ಲವನ್ನೂ ತೋರಿಸಿಕೊಟ್ಟಿದ್ದಾರೆ. ಹೇಳಿಕೊಡುವುದಕ್ಕೂ ತೋರಿಸಿಕೊಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ನಮ್ಮಮ್ಮನನ್ನು ಅವರು ಯಾವತ್ತೂ ‘ಹೋಗೇ ಬಾರೇ’ ಎಂದು ಕರೆದಿಲ್ಲ. ಅದಕ್ಕೆ ನಾನು ನನ್ನ ಹೆಂಡತಿಯನ್ನು ಯಾವತ್ತೂ ‘ಬಾರೆ ಹೋಗೆ’ ಎಂದು ಕರೆಯುವುದಿಲ್ಲ. ‘ಅಮ್ಮ’ ಅಂತಲೇ ಕರೆಯುತ್ತೇನೆ.

ನನಗೆ ಬದುಕನ್ನು ಹೀಗೆ ಬೇರೆಯದೇ ರೀತಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದ್ದು ಸ್ಕ್ರೋಕ್‌ನಿಂದ. ಹಾಗಾಗಿ ನಾನು ನನಗೆ ಸ್ಕ್ರೋಕ್‌ ಕೊಟ್ಟಿದ್ದಕ್ಕಾಗಿ ದೇವರಿಗೆ ಒಂದು ಥ್ಯಾಂಕ್ಸ್‌ ಹೇಳುತ್ತೇನೆ. ತೊಂದರೆಯನ್ನೂ ಎಂಜಾಯ್‌ ಮಾಡಲು ಶುರುಮಾಡಿದ್ದೇನೆ ಈಗ. ಕೆಲವು ವರ್ಷಗಳ ಹಿಂದೆ ಸ್ಕ್ರೋಕ್‌ ಆಗಿ ಸಿಂಗಪುರಕ್ಕೆ ವೀಲ್‌ಚೇರಿನಲ್ಲಿ ಹೋಗಿದ್ದೆ. ಈಗ ಅದೇ ದೇಶಕ್ಕೆ ನನ್ನ ಸಿನಿಮಾ ಜೊತೆಗೆ ಹೀರೊ ಆಗಿ ಹೋಗುತ್ತಿದ್ದೇನೆ. ಬದುಕು ಏನನ್ನೋ ಕಲಿಸಲಿಕ್ಕಾಗಿಯೇ ನಮಗೆ ತೊಂದರೆಗಳನ್ನು ಕೊಡುತ್ತದೆ. ಆ ಪಾಠಗಳನ್ನು ನಾವು ಕಲಿತುಕೊಳ್ಳಬೇಕಷ್ಟೆ.

ಬರಹ ಇಷ್ಟವಾಯಿತೆ?

 • 53

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !