ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯ್‌’ ಯೋಜನೆ: ರಾಹುಲ್ ಪತ್ರ

16 ಲಕ್ಷ ಕುಟುಂಬಗಳಿಗೆ ಮಾಹಿತಿ ರವಾನೆ
Last Updated 20 ಏಪ್ರಿಲ್ 2019, 20:16 IST
ಅಕ್ಷರ ಗಾತ್ರ

ನವದೆಹಲಿ: ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ಮಾಸಿಕ ₹ 6,000 ಧನಸಹಾಯ ನೀಡುವ ‘ನ್ಯಾಯ್’ ಯೋಜನೆ ಆರಂಭಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಕಾಂಗ್ರೆಸ್, ಈ ಕುರಿತು ಉತ್ತರ ಕರ್ನಾಟಕ ಭಾಗದ 16 ಲಕ್ಷ ಕುಟುಂಬಗಳಿಗೆ ಪತ್ರ ಬರೆದು ವೈಯಕ್ತಿಕವಾಗಿ ಮಾಹಿತಿ ನೀಡಲು ಮುಂದಾಗಿದೆ.

ಇದೇ 23ರಂದು ದ್ವಿತೀಯ ಹಂತದ ಮತದಾನ ನಡೆಯಲಿರುವ ರಾಜ್ಯದ ಉತ್ತರ ಭಾಗದ 14 ಲೋಕಸಭೆ ಕ್ಷೇತ್ರಗಳಲ್ಲಿನ 16 ಲಕ್ಷ ಕುಟುಂಬಗಳ ಮುಖ್ಯಸ್ಥರ ಹೆಸರಿನಲ್ಲಿ ಬರೆದಿರುವ ಈ ಪತ್ರಗಳನ್ನು ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ತಲುಪಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಹಿ ಇರುವ ಈ ಪತ್ರವು ಕನಿಷ್ಠ ಆದಾಯ ಖಾತರಿಯ ಈ ಯೋಜನೆಯ ಬಗ್ಗೆ ವಿವರಣೆಯನ್ನು ಒಳಗೊಂಡಿದೆ.

ಬಡವರು, ದಿನಗೂಲಿ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರು ಹಾಗೂ ವ್ಯಾಪಾರಸ್ಥರು ಈ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಈ ವರ್ಗದವರ ದನಿಯನ್ನು ಅಡಗಿಸಿ, 15ರಿಂದ 20 ಜನ ಉದ್ಯಮಿಗಳ ಪರ ಕಾರ್ಯ ನಿರ್ವಹಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅತ್ಯಂತ ಬಡ ಕುಟುಂಬದ ಮಹಿಳೆಯ ಖಾತೆಗೆ ಮಾಸಿಕ ₹ 6,000ದಂತೆ ವಾರ್ಷಿಕ ₹ 72,000 ಜಮೆ ಮಾಡುವ ಈ ಯೋಜನೆಯನ್ನು ದೇಶದ ಜನರಿಗೆ ಯಾವುದೇ ರೀತಿಯ ಹೊಸ ತೆರಿಗೆಯನ್ನು ಹೇರದೆ ಆರಂಭಿಸಲಾಗುತ್ತದೆ. ಈ ಯೋಜನೆ ಸಾಕಾರಗೊಳಿಸಿ ಬಡತನ ಹೋಗಲಾಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಬೇಕಿದೆ ಎಂಬ ಒಕ್ಕಣಿಕೆ ಈ ಪತ್ರದಲ್ಲಿದೆ.

ಪ್ರತಿ ಮತಗಟ್ಟೆ ವ್ಯಾಪ್ತಿಯ ಬಡ ಕುಟುಂಬಗಳ ವಿಳಾಸ ಸಂಗ್ರಹಿಸಿ, ಶುಕ್ರವಾರದಿಂದಲೇ ಈ ಪತ್ರವನ್ನು ತಲುಪಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಎಐಸಿಸಿ ಮಾಹಿತಿ ವಿಶ್ಲೇಷಣೆ ವಿಭಾಗದ ಅಧ್ಯಕ್ಷ ಪ್ರವೀಣ್‌ ಚಕ್ರವರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇತರ ರಾಜ್ಯಗಳಲ್ಲೂ ಇರುವ 1.20 ಕೋಟಿ ಕುಟುಂಬಗಳಿಗೆ ಇಂತಹ ಪತ್ರ ತಲುಪಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT