ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಐಟಿ: ಇಲ್ಲಿ ಏನಿಲ್ಲ; ಹೈದರಾಬಾದ್‌ನಲ್ಲಿಯೇ ಎಲ್ಲ!

ರಾಯಚೂರಿನ ಐಐಐಟಿ ಕಾಲೇಜಿಗೆ 30 ವಿದ್ಯಾರ್ಥಿಗಳಿಗೆ ಪ್ರವೇಶಾಕಾಶ
Last Updated 22 ಜುಲೈ 2019, 19:33 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರಿಗೆ ಮಂಜೂರಿಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿದ್ದು 30 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಸದ್ಯ ತಾತ್ಕಾಲಿಕವಾಗಿ ಹೈದರಾಬಾದ್‌ನ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿಯೇ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಹಾಸ್ಟೇಲ್‌ ವ್ಯವಸ್ಥೆ ಆಗಿದೆ. ಆದರೆ, ರಾಯಚೂರಿನಲ್ಲಿ ಶಾಶ್ವತ ಐಐಐಟಿ ಕಟ್ಟಡ ನಿರ್ಮಾಣ ಕಾರ್ಯ ಇನ್ನೂ ಆರಂಭಿಸಿಲ್ಲ. ಇವರೆಗೂ ಜಾಗ ಗುರುತಿಸುವ ಕೆಲಸ ಮಾತ್ರ ಮುಗಿದಿದೆ.

ಹೈದರಾಬಾದ್‌ ಹತ್ತಿರ ಸಂಗಾರೆಡ್ಡಿ ಜಿಲ್ಲೆಯ ಕಾಂಡಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ವಿಶಾಲವಾದ ಕ್ಯಾಂಪಸ್‌ನಲ್ಲಿ ರಾಯಚೂರು ಐಐಐಟಿಗಾಗಿ ಕಟ್ಟಡ ನೀಡಲಾಗಿದೆ. ಪ್ರವೇಶ ಪಡೆಯುವ ಹೊಸ ವಿದ್ಯಾರ್ಥಿಗಳಿಗೆ ಜುಲೈ 29 ರಿಂದಲೆ ಪಾಠ ಪ್ರವಚನಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕೂ ಪೂರ್ವ 26 ಮತ್ತು 27 ರಂದು ನೋಂದಣಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ (ಓರಿಯೆಂಟೆಷನ್‌) ನಿಗದಿಯಾಗಿದೆ.

ರಾಯಚೂರು ಐಐಐಟಿ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ, ಪ್ರವೇಶ ನೋಂದಣಿ, ಬೋಧನೆ ಹಾಗೂ ಒಂದು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಸಂಪೂರ್ಣ ವಿವರಕ್ಕಾಗಿ ಪ್ರತ್ಯೇಕ ಅಂತರ್ಜಾಲ ತಾಣವೊಂದನ್ನು ಸಿದ್ಧಪಡಿಸಲಾಗಿದೆ. ವಿ. ವೆಂಕಟರಾವ್‌ ಅವರು ರಾಯಚೂರು ಐಐಐಟಿಗೆ ಜಂಟಿ ಕುಲಸಚಿವ ಹುದ್ದೆಗೆ ನೇಮಕವಾಗಿದ್ದಾರೆ.

ನಾಲ್ಕು ವರ್ಷ ಅವಧಿಯುಳ್ಳ ಬಿ.ಟೆಕ್‌ ಕೋರ್ಸ್‌ (ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌) ಮಾತ್ರ ಪ್ರಾರಂಭವಾಗುತ್ತಿದೆ. ಶಾಶ್ವತ ನೆಲೆಗೆ ಸ್ಥಳಾಂತರವಾದ ಬಳಿಕ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯು 100 ಕ್ಕೆ ಏರಿಕೆಯಾಗಲಿದೆ ಹಾಗೂ ಇನ್ನಷ್ಟು ಹೊಸ ಕೋರ್ಸ್‌ಗಳ ಆಯ್ಕೆಯು ದೊರೆಯಲಿದೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿದೆ.

ಐಐಟಿ ಹೈದರಾಬಾದ್‌ ಕ್ಯಾಂಪಸ್‌ನಲ್ಲಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲು ಈ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿದೆ. ಉಚಿತ ವೈ–ಫೈ, ಸೋಲಾರ್‌ ಹೀಟರ್‌, ಸೋಲಾರ್‌ ಲ್ಯಾಂಪ್‌, ಕ್ರೀಡಾ ಪರಿಕರಗಳು, ರಿಕ್ರಿಯೇಷನ್‌ ರೂಮ್ಸ್‌, ಡಾನ್ಸ್‌ ರೂಮ್‌, ಮ್ಯೂಜಿಕ್‌ ರೂಮ್‌, ರೊಬೊಟಿಕ್‌ ರೂಮ್‌, ಟಿವಿರೂಮ್‌.. ಹತ್ತಾರು ಸೌಲಭ್ಯಗಳು ಅಲ್ಲಿವೆ. ರಾಯಚೂರಿನಲ್ಲಿ ನಿರ್ಮಾಣವಾಗುವ ಐಐಐಟಿ ಕ್ಯಾಂಪಸ್‌ನಲ್ಲೂ ಈ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕಿದೆ.

ವಿಳಂಬ ಸಾಧ್ಯತೆ:ರಾಯಚೂರು ತಾಲ್ಲೂಕಿನ ಸಿಂಗನೋಡಿ ಗ್ರಾಮದ ಸಮೀಪ 60 ಎಕರೆ ಜಮೀನನ್ನು ಐಐಐಟಿ ಸ್ಥಾಪನೆಗೆ ಮೀಸಲಿಡಲಾಗಿದೆ. ಕೇಂದ್ರದಿಂದ ಬಂದಿದ್ದ ಅಧಿಕಾರಿಗಳ ತಂಡವು ಜಾಗವನ್ನು ಪರಿಶೀಲಿಸಿ ಅನುಮೋದನೆ ನೀಡಿದೆ. ಕ್ಯಾಂಪಸ್‌ಗೆ ಸಂಪರ್ಕ ರಸ್ತೆ, ವಿದ್ಯುತ್‌ ಸಂಪರ್ಕ ಹಾಗೂ ನಾಲ್ಕು ಎಂಎಲ್‌ಡಿ ನೀರು ಸರಬರಾಜು ಸೌಲಭ್ಯವನ್ನು ಮಾಡಿಕೊಡುವಂತೆ ಕೇಂದ್ರ ತಂಡವು ಕೋರಿದೆ.

ಈ ಸಂಬಂಧ ರಾಯಚೂರು ಜಿಲ್ಲಾಧಿಕಾರಿ ಕ್ರಮ ವಹಿಸಿ, ಕೇಂದ್ರ ತಂಡದಿಂದ ಕೋರಿದ ಸೌಲಭ್ಯಗಳ ಅಭಿವೃಧ್ಧಿಗೆ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ. ಯೋಜನೆಗೆ ಇವರೆಗೂ ಒಪ್ಪಿಗೆ ಸಿಕ್ಕಿಲ್ಲ. ಇದರಿಂದ ರಾಯಚೂರಿನಲ್ಲಿ ಐಐಐಟಿ ಕಟ್ಟಡ ನಿರ್ಮಾಣ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣವಾಗುವುದು ಅಸಾಧ್ಯವಾಗಲಿದೆ.

ಕಾಯುವುದು ತಪ್ಪಲ್ಲ!

‘ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸಲು 2016ರಲ್ಲಿಯೇ ಕೇಂದ್ರ ಒಪ್ಪಿಕೊಂಡಿತ್ತು. ಆದರೆ, ಅಧಿಸೂಚನೆ ಹೊರಡಿಸಲು ಎರಡು ವರ್ಷ (2018 ಜನವರಿ 24) ಕಾಯಬೇಕಾಯಿತು. ಜಾಗ ಗುರುತಿಸಿದ್ದು,ಕಟ್ಟಡ ಕಾಮಗಾರಿ ಪೂರ್ಣವಾಗಲು ವಿದ್ಯಾರ್ಥಿಗಳು ಕಾಯಲೇಬೇಕು. ಇದು ಅನಿವಾರ್ಯವೂ ಹೌದು’ ಎಂದುಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಸೀಟು ಹಂಚಿಕೆ

ವಿದ್ಯಾರ್ಥಿಗಳು: 26 (ಸಾಮಾನ್ಯ–9, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ–3, ಸಾಮಾನ್ಯ ಅಂಗವಿಕಲ–1, ‍ಪರಿಶಿಷ್ಟ ಜಾತಿ–4, ಪರಿಶಿಷ್ಟ ಪಂಗಡ–2, ಕೆನೆಪದರವಲ್ಲದ ಹಿಂದುಳಿದ ವರ್ಗ–6, ಕೆನೆಪದರವಲ್ಲದ ಹಿಂದುಳಿದ ವರ್ಗದ ಅಂಗವಿಕಲ–1)

ವಿದ್ಯಾರ್ಥಿನಿಯರು: 4 (ಸಾಮಾನ್ಯ–2, ಪರಿಶಿಷ್ಟ ಜಾತಿ–1, ಕೆನೆಪದರವಲ್ಲದ ಹಿಂದುಳಿದ ವರ್ಗ–1)

***

ಧಾರವಾಡದ ಐಐಟಿ ಕ್ಯಾಂಪಸ್‌ ಅಥವಾ ರಾಯಚೂರಿನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ತರಗತಿ ಆರಂಭಿಸಬಹುದು ಎಂದು ಕೇಂದ್ರ ತಂಡಕ್ಕೆ ರಾಜ್ಯದಿಂದ ಪತ್ರ ಹೋಗಿತ್ತು. ಆದರೆ, ಹೈದರಾಬಾದ್‌ನಲ್ಲಿ ಆರಂಭವಾದ ಬಗ್ಗೆ ಅಧಿಕೃತ ಮಾಹಿತಿ ಜಿಲ್ಲಾಡಳಿತಕ್ಕೆ ತಲುಪಿಲ್ಲ

-ಶರತ್‌ ಬಿ.,ಜಿಲ್ಲಾಧಿಕಾರಿ ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT