ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದಾಗಿ ಕುಸಿದ ಮನೆಗಳು; ಬದುಕು ಬೀದಿಗೆ!

ನಗರದಲ್ಲಿ 1000ಕ್ಕೂ ಹೆಚ್ಚಿನ ಕಟ್ಟಡಗಳು ಬಿದ್ದಿವೆ, ಅಪಾರ ಹಾನಿ
Last Updated 12 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಆಗಿರುವ ಪರಿಣಾಮಗಳು ಈಗ ಗೋಚರಿಸುತ್ತಿವೆ. ಜಲಾವೃತವಾಗಿದ್ದ ಹಲವು ಬಡಾವಣೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಮನೆಗಳ ಗೋಡೆಗಳು ಕುಸಿದುಬಿದ್ದಿದ್ದು, ಜನರು ಬೀದಿಗೆ ಬಂದಿದ್ದಾರೆ. ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಪ್ರವಾಹದೊಂದಿಗೆ ಅವರ ಕನಸುಗಳು ಕೂಡ ಕೊಚ್ಚಿ ಹೋಗಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಇಲ್ಲಿನ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳಿಗೆ ನೀರು ನುಗ್ಗಿತ್ತು. ಬಹುತೇಕ ಕಡೆಗಳಲ್ಲಿ ಮಣ್ಣಿನಿಂದ ನಿರ್ಮಿಸಿದ ಗೋಡೆಗಳುಳ್ಳ, ಕೈಹೆಂಚಿನ ಮನೆಗಳಿವೆ. ಅವುಗಳು ಜಲಾವೃತವಾಗಿದ್ದರಿಂದ ಯಾವಾಗ ಕುಸಿದು ಬೀಳುತ್ತವೆಯೋ ಎನ್ನುವ ಆತಂಕ ಕೂಡ ಎದುರಾಗಿದೆ. ಸಾವಿರಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಬಿದ್ದಿದ್ದು, ಅಲ್ಲಿ ವಾಸ ಮಾಡಲು ಸಂಪೂರ್ಣ ದುರಸ್ತಿಯಾಗಬೇಕಾದ ಹಾಗೂ ಕೆಲವೆಡೆ ಮರುನಿರ್ಮಾಣವನ್ನೇ ಮಾಡಬೇಕಾದ ಅಗತ್ಯ ಕಂಡುಬಂದಿದೆ. 5ಸಾವಿರಕ್ಕೂ ಹೆಚ್ಚಿನ ಮನೆಗಳಿಗ ಭಾಗಶಃ ಹಾನಿಯಾಗಿದೆ.

ವಿವಿಧೆಡೆ ನಷ್ಟ:ಪಾಟೀಲ ಮಾಳ, ಕಪಿಲೇಶ್ವರ ಕಾಲೊನಿ, ಸಮರ್ಥನಗರ, ಶಾಸ್ತ್ರಿನಗರ, ಶಿವಾಜಿನಗರ, ಗಾಂಧಿನಗರ, ಅಶೋಕನಗರ, ಪೀರನವಾಡಿ, ವಡಗಾವಿ, ಖಾಸಬಾಗ್, ಕೋನವಾಳ ಗಲ್ಲಿ, ತಹಶೀಲ್ದಾರ್‌ ಗಲ್ಲಿ, ಬಾಂದೂರ್‌ ಗಲ್ಲಿ ಮೊದಲಾದ ಪ್ರದೇಶಗಳು ಜಲಾವೃತವಾಗಿದ್ದವು. ಹೀಗೆ ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ನೀರಿನ ‍ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಹೋಗಿ ನೋಡಿದರೆ ಮನೆಗಳು ನೆಲಕ್ಕುರುಳಿರುವುದು ಗೊತ್ತಾಗಿದೆ. ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಸೂಚನೆ ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ. ಹೀಗಾಗಿ, ಹಾನಿಯಾಗಿರುವ ಮನೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ಬಡಾವಣೆಗಳಲ್ಲಿ ರಸ್ತೆಗಳು ಕೂಡ ಹಾಳಾಗಿವೆ. ಮನೆಗಳಲ್ಲಿದ್ದ ಬಟ್ಟೆ–ಬರೆ, ಪಾತ್ರೆಗಳು, ಅಗತ್ಯ ವಸ್ತುಗಳು ನೀರು ಪಾಲಾಗಿವೆ. ಇಲ್ಲಿನ ಬಹುತೇಕರು ಮನೆಯಲ್ಲಿಟ್ಟಿದ್ದ ನಗದು, ಕಾಗದಪತ್ರಗಳು, ವಿವಿಧ ದಾಖಲೆಗಳು ಹಾಗೂ ಬೆಳ್ಳಿ–ಬಂಗಾರವನ್ನು ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸಿರುವ ಅವರು ದಿಕ್ಕು ತೋಚದಂತೆ ಆಗಿದ್ದಾರೆ. ತಮ್ಮ ಬೀದಿಯ ಪರಿಚಯದವರ, ನೆಂಟರಿಷ್ಟರ ಮನೆಗಳಲ್ಲಿ ‘ಆಶ್ರಯ’ ಪಡೆದಿರುವ ಅವರು ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಮದುವೆಗೆ ಮಾಡಿದ್ದ ಸಿದ್ಧತೆ ನೀರು ಪಾಲು!

ಮಗಳ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಪಾಟೀಲ ಮಾಳದಲ್ಲಿನ ಕುಟುಂಬವೊಂದರ ಕನಸು ಛಿದ್ರವಾಗಿದೆ. ಆ. 25ರಂದು ಮದುವೆಗೆ ನಿಶ್ಚಯಿಸಲಾಗಿತ್ತು. ತಯಾರಿ ಮಾಡಿಕೊಂಡಿದ್ದ ಮೌಲಾಸಾಬ್ ನದಾಫ ಕುಟುಂಬ ಅತಂತ್ರವಾಗಿದೆ. ಮನೆ ಸಂಪೂರ್ಣ ಕುಸಿದಿದ್ದು, ಅವರ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಬಕ್ರೀದ್ ಹಬ್ಬವನ್ನೂ ಆಚರಣೆ ಮಾಡಲಾಗದ ಸ್ಥಿತಿಯಲ್ಲಿ ಅವರಿದ್ದಾರೆ.

‘2ನೇ ಮಗಳಿಗೆ ಧಾರವಾಡದ ವರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಇದಕ್ಕಾಗಿ ಮನೆಯಲ್ಲಿ ನಗದು ಇಟ್ಟಿದ್ದೆವು. ಬಟ್ಟೆಗಳು, ಬಂಗಾರದ ಒಡವೆ ಎಲ್ಲವನ್ನೂ ಸಿದ್ಧತೆ ಮಾಡಿಟ್ಟುಕೊಂಡಿದ್ದೆವು. ಅವೆಲ್ಲವೂ ಈಗ ನೀರು ಪಾಲಾಗಿವೆ’ ಎಂದು ಕಣ್ಣೀರಿಟ್ಟರು.

‘ದೇವರೆಲ್ಲಿದ್ದಾನೆ? ಇದ್ದಿದ್ದರೆ ನಮ್ಮ ಬಾಳು ಈ ರೀತಿಯಾಗುತ್ತಿರಲಿಲ್ಲ. ನಾವೀಗ ಇರುವುದೆಲ್ಲಿ, ಬಾಡಿಗೆ ಕಟ್ಟಲು ಹಣ ತರುವುದೆಲ್ಲಿ. ಪರಿಚಯಸ್ಥರ ಮನೆಯಲ್ಲಿ ಎಷ್ಟು ದಿನ ಇರುವುದು?’ ಯಾರಿಗೂ ಇಂಥ ಸ್ಥಿತಿ ಬರಬಾರದು. ಮುಂದೇನು ಎನ್ನುವುದೇ ತಿಳಿಯುತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಸರ್ಕಾರ ನೆರವಾಗಬೇಕು. ಮನೆ ಕಟ್ಟಿಸಿಕೊಡಬೇಕು’ ಎಂದು ಮೌಲಾಸಾಬ್‌ ಅಕ್ಕ ಆಶಾಬಿ ಬೆಂಗೇರಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT