ಮಳೆಯಿಂದ ಗ್ರಾಮಸ್ಥರ ಬದುಕು ಬೀದಿಗೆ

7

ಮಳೆಯಿಂದ ಗ್ರಾಮಸ್ಥರ ಬದುಕು ಬೀದಿಗೆ

Published:
Updated:
Deccan Herald

ಸೋಮವಾರಪೇಟೆ: ತರಕಾರಿಗಳನ್ನು ಬೆಳೆದು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗೆ  ಸರಬರಾಜು ಮಾಡುತ್ತಿದ್ದ ಗರ್ವಾಲೆ ಗ್ರಾಮ ಪಂಚಾಯಿತಿಯ ಹಲವು ಗ್ರಾಮಗಳಲ್ಲೀಗ ಮನೆಗೇ ತರಕಾರಿಯನ್ನು ಮಾರುಕಟ್ಟೆಯಿಂದ ತಂದು ತಿನ್ನುವಂತಹ ಪರಿಸ್ಥಿತಿ ಬಂದಿದೆ.

ಈ ಭಾಗದ ಗ್ರಾಮಸ್ಥರ ಬದುಕು ಅಕ್ಷರಶಃ ನಲುಗಿ ಹೋಗಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ಸೇರಿದಂತೆ ಪುಷ್ಪಗಿರಿ ಬೆಟ್ಟಸಾಲಿನ ಹಲವು ಗ್ರಾಮಗಳಲ್ಲಿ ಸಾಕಷ್ಟು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಭಾಗದಲ್ಲಿ ಬೆಟ್ಟ ಗುಡ್ಡಗಳು ಕುಸಿದು ಭತ್ತದ ಗದ್ದೆ ಸೇರಿದಂತೆ ಕಾಫಿ ತೋಟಗಳು ನೆಲಕಚ್ಚಿವೆ. ತಿನ್ನುವ ಅನ್ನಕ್ಕೂ ಪರಿತಪಿಸಬೇಕಿದೆ.

ಈ ಸಾಲಿನಲ್ಲಿ ಎರಡು ಮೂರು ಪಟ್ಟು ಅಧಿಕ ಮಳೆ ಸುರಿದಿದ್ದು, ಗದ್ದೆಗಳಲ್ಲಿ ನಾಟಿ ಮಾಡಿದ್ದ ಪೈರು ನಾಶವಾಗಿದೆ. ತರಕಾರಿಯಂತೂ ಹೇಳ ಹೆಸರಿಲ್ಲದಂತಾಗಿದೆ. ಕಿಕ್ಕರಳ್ಳಿ ಗ್ರಾಮದ ಕೊಚ್ಚೇರ ಗಣಪತಿ, ಕೊಚ್ಚೇರ ರಾಮಪ್ಪ ಅವರ ಗದ್ದೆ ಸಂಪೂರ್ಣ ಹಾನಿಗೀಡಾಗಿವೆ. ತಮ್ಮ ಪಾಲಿನ ಅಕ್ಕಿಯನ್ನು ತಾವೇ ಬೆಳೆಯುತ್ತಿದ್ದ ಮಂದಿ ಇಂದು ನ್ಯಾಯಬೆಲೆ ಅಂಗಡಿಯ ಅಕ್ಕಿ, ಪರಿಹಾರವಾಗಿ ಬರುವ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳಿಗಾಗಿ ಕಾಯುವಂತಾಗಿದೆ.

'ನನಗೆ ವಯಸ್ಸಾಯ್ತು, ಇದ್ದ ಗದ್ದೆಯಲ್ಲೇ ಉಳುಮೆ ಮಾಡಿ ನಾಟಿ ಪೂರ್ಣಗೊಳಿಸಿದ್ದೆ. ಮಳೆಗೆ ಬರೆ ಕುಸಿದು ಗದ್ದೆ ಮೇಲೆ ಮಣ್ಣು ನಿಂತಿದೆ. ಇದೀಗ ಗದ್ದೆಯೇ ಇಲ್ಲವಾಗಿದೆ. ಜೀವನಾಧಾರವೇ ಕೈಬಿಟ್ಟು ಹೋಗಿದೆ’ ಎಂದು ವೃದ್ಧ ಗಣಪತಿ ಅವರು ಅಳಲು ತೋಡಿಕೊಳ್ಳುತ್ತಾರೆ.

ಸರ್ಕಾರದಿಂದ ಗಂಡ ಹೆಂಡತಿಗೆ ತಲಾ ₹ 600 ವೃದ್ಧಾಪ್ಯ ವೇತನ ಬರುತ್ತಿದೆ. ಇದರಲ್ಲಿಯೇ ಜೀವನ ಸಾಗಿಸಬೇಕು. ಇದ್ದ ಕೃಷಿ ಭೂಮಿಯೂ ಈಗ ಇಲ್ಲವಾಗಿದೆ. ಮುಂದಿನ ಜೀವನದ ಬಗ್ಗೆ ಯೋಚನೆ ಪ್ರಾರಂಭವಾಗಿದೆ ಎಂದು ಗಣಪತಿ ಅವರ ಪತ್ನಿ ಸೀತಮ್ಮ ಬೇಸರಿಸುತ್ತಾರೆ.

ಕೊಟ್ಟಿಗೆ ಮೇಲೆ ಮರ ಬಿದ್ದ ಸಂದರ್ಭ ತಲೆ ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದ್ದು, ಬದುಕುಳಿದಿದ್ದೇ ಹೆಚ್ಚು ಎಂದು ಕಿಕ್ಕರಳ್ಳಿ ಗ್ರಾಮದ  78ರ ಪ್ರಾಯದ ಅಜ್ಜಮಕ್ಕಡ ಬೋಜಮ್ಮ ನೆನಪಿಸಿಕೊಳ್ಳುತ್ತಾರೆ.

ಕೆ.ಬಿ. ಉತ್ತಪ್ಪರವರು ನಾಟಿ ಮಾಡಿದ ಗದ್ದೆ ಮೇಲೆ ರಾಮಪ್ಪರವರ ಗದ್ದೆಯ ಬದು ಕುಸಿದು ನಾಟಿ ಮಾಡಿದ ಗದ್ದೆ ನಾಶವಾಗಿದೆ. ಇರುವ ಒಂದೆರಡು ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಗದ್ದೆ ಮತ್ತು ತೋಟ ಮಾಡಿಕೊಂಡಿದ್ದಾರೆ. ಆದರೆ, ಈಗ ಮಳೆಯಿಂದ ಸಮಸ್ಯೆ ಎದುರಾಗಿದೆ.

ಕೆಸುವಿನ ಕೃಷಿ ಫಸಲು, ಭತ್ತ, ಬಾಳೆ ಸೇರಿದಂತೆ ಎಲ್ಲ ಬೆಳೆಗಳು ನಷ್ಟವಾಗಿದೆ. ಗದ್ದೆಯಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ.

‘ನನ್ನ ಜೀವಮಾನದಲ್ಲಿಯೇ ಇಂತಹ ಮಳೆ ನೋಡಿಲ್ಲ. ಸರ್ಕಾರ ಈ ಭಾಗದ ಬಗ್ಗೆ ಗಮನ ಹರಿಸಬೇಕು. ನಷ್ಟಕ್ಕೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !