ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಪಸರಿಸಿದ ಕೆ.ವಿ.ರಾಜಮ್ಮ

ಕೇರಳದಿಂದ ಬಂದು ಕನ್ನಡಕ್ಕೆ ಕೊಡುಗೆ ನೀಡಿದ ಪತ್ರಿಕಾ ವಿತರಕಿ
Last Updated 9 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಹಿಂದಿ ಶಿಕ್ಷಕಿ ಹುದ್ದೆಯನ್ನು ಅರಸಿಕೊಂಡು ಕೇರಳದಿಂದ ವಿಟ್ಲಕ್ಕೆ ಬಂದಿದ್ದ ಮಲೆಯಾಳಿ ಮಾಧ್ಯಮದಲ್ಲಿ ಕಲಿತ ಕೆ.ವಿ.ರಾಜಮ್ಮ ಕನ್ನಡ ಪತ್ರಿಕೆಗಳ ಪ್ರಸಾರಕ್ಕೆ ನೀಡಿದ ಕೊಡುಗೆ ಅನನ್ಯ. ಸುಮಾರು 50 ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ಅವರ ಕೊಡುಗೆಯ ಇಣುಕು ನೋಟ ಇಲ್ಲಿದೆ...

ಭಾಷಾಭಿವೃದ್ಧಿಯಲ್ಲಿ ಪತ್ರಿಕೆಗಳ ಪ್ರಸಾರವು ಕ್ರಿಯಾಶೀಲ ಪಾತ್ರ ನಿರ್ವಹಿಸುತ್ತವೆ. ದಿನಪತ್ರಿಕೆಗಳು, ವಾರ ಪತ್ರಿಕೆಗಳು, ಕತೆ, ಕವನ, ಕಾದಂಬರಿಗಳು, ಮಕ್ಕಳ ಪತ್ರಿಕೆಗಳು ಸೇರಿದಂತೆ ಬಹುತೇಕ ಕೃತಿ–‍ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವವರು ಮಾರಾಟಗಾರರು (ವಿತರಕರು). ಹೀಗೆ ವಿವಿಧ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಪತ್ರಿಕಾ ಸರಸ್ವತಿಯ ಸೇವೆಯಲ್ಲಿ ನಿರತರಾದವರು ವಿಟ್ಲದ ವಿಠಲ್ ನ್ಯೂಸ್ ಏಜೆನ್ಸಿಸ್‌ನ ಕೆ.ವಿ.ರಾಜಮ್ಮ.

ನೆರೆಯ ಕೇರಳದಿಂದ ಬಂದ ರಾಜಮ್ಮ, ಕನ್ನಡ ಓದಲು, ಬರೆಯಲು, ಮಾತನಾಡಲು ಕಲಿತು ಕನ್ನಡ ಪ್ರೀತಿ ಮೆರೆದದ್ದು ಅಭಿನಂದನಾರ್ಹ.

ರಾಜಮ್ಮ ಅವರು ಮಲೆಯಾಳ ಮಾಧ್ಯಮದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಹಿಂದಿ ಸ್ನಾತಕೋತ್ತರ ಪದವಿ ಮತ್ತು ಹಿಂದಿ ಪ್ರವೀಣ ವಿದ್ಯಾರ್ಹತೆಯನ್ನು ಗಳಿಸಿ, 1970ರ ದಶಕದಲ್ಲಿ ಹಿಂದಿ ಶಿಕ್ಷಕಿ ಹುದ್ದೆಯ ಸಂದರ್ಶನಕ್ಕಾಗಿ ವಿಟ್ಲಕ್ಕೆ ಆಗಮಿಸಿದರು. ಕಾರಣಾಂತರಗಳಿಂದ ಶಿಕ್ಷಕಿಯಾಗುವ ಅವರ ಆಸೆಯು ಈಡೇರಲಿಲ್ಲ. ವಿಟ್ಲಕ್ಕೆ ಅವರನ್ನು ಕರೆತಂದ ಕಬಕದ ಅಧ್ಯಾಪಕರಾಗಿದ್ದ ಕುಂಞಂಬು ಕನ್ನಡದ ನೆಲದಲ್ಲಿ ಹೊಸ ಉದ್ಯೋಗಕ್ಕಾಗಿ ಪ್ರೇರೇಪಿಸಿದರು. ಶಿಕ್ಷಕಿ ಮೂಕಾಂಬಿಕಾ ಅವರು ಸ್ಫೂರ್ತಿ ನೀಡಿದರು.

ಕೋರನ್ ಗುರುಕಲ್ ಮತ್ತು ಜಾನಕಿ ದಂಪತಿ ಪುತ್ರಿ ರಾಜಮ್ಮ ವಿಟ್ಲದ ಜನತಾ ಬುಕ್ ಸ್ಟಾಲಿನಲ್ಲಿ ಉದ್ಯೋಗಕ್ಕೆ ಸೇರಿದರು. ಅದರೊಂದಿಗೆ ಕನ್ನಡ ಟೈಪ್ ರೈಟಿಂಗ್ ಅಭ್ಯಾಸ ಮಾಡಿದರು. ಕನ್ನಡ ಟೈಪ್ ರೈಟಿಂಗ್‍ನಲ್ಲಿ ರಾಜ್ಯಮಟ್ಟದಲ್ಲಿ 8ನೇ ರ್‍ಯಾಂಕ್ ಗಳಿಸಿದ ಇವರು, ವಿಟ್ಲದಲ್ಲಿ ಕರ್ನಾಟಕ ಟೈಪ್ ರೈಟಿಂಗ್ ಶಾಲೆ ತೆರೆದರು. ಜತೆಗೆ ಪತ್ರಿಕಾ ಮಾರಾಟದ ಪ್ರಮುಖ ಏಜೆಂಟ್ ಆಗಿ ಕಾರ್ಯಾರಂಭಿಸಿದರು.

ಇವರು ಪ್ರಾರಂಭಿಸಿದ ವಿಠಲ್ ನ್ಯೂಸ್ ಏಜೆನ್ಸೀಸ್, ವಿಟ್ಲ ಪರಿಸರದ ಕೆಲವಾರು ಗ್ರಾಮಗಳಿಗೆ ಪತ್ರಿಕೆಗಳನ್ನು ಪೂರೈಸುತ್ತಿದೆ. ಸವಾಲುಗಳನ್ನು ಎದುರಿಸಿ ಮುನ್ನಡೆದ ಇವರು, ಕನ್ನಡ ಪತ್ರಿಕಾ ಸರಸ್ವತಿಯ ಸೇವೆಯಲ್ಲಿ ಸದ್ದಿಲ್ಲದ ಸಾಧನೆ ಮಾಡುತ್ತಿದ್ದಾರೆ. ಬೆಳಿಗ್ಗೆ ಬಹುಬೇಗನೆ ಅಂಗಡಿ ತೆರೆದು ಕಾರ್ಯಶೀಲರಾಗುತ್ತಾರೆ. ವರ್ಷದುದ್ದಕ್ಕೂ ಕ್ಲುಪ್ತ ಸಮಯಕ್ಕೆ ಪತ್ರಿಕೆಗಳು ಅಪೇಕ್ಷಿತ ಗ್ರಾಹಕರ ಕೈಸೇರಲು ಸಹಕರಿಸುತ್ತಿದ್ದಾರೆ.

‘ಪ್ರಜಾವಾಣಿ’, ‘ಸುಧಾ’, ‘ಮಯೂರ’ ಹಾಗೂ ಇತರ ನಿಯತಕಾಲಿಕೆಗಳು ಹಾಗೂ ಧಾರ್ಮಿಕ ಗ್ರಂಥಗಳು ಇವರಲ್ಲಿ ಲಭ್ಯ. ಭಾಷಾ ಸಾಮರಸ್ಯವನ್ನೂ ಕಂಡುಕೊಂಡ ಇವರು ‘ಡೆಕ್ಕನ್ ಹೆರಾಲ್ಡ್‌’ ಮತ್ತಿತರ ಇಂಗ್ಲಿಷ್‌ ಪತ್ರಿಕೆಗಳನ್ನೂ ಮಾರಾಟ ಮಾಡುತ್ತಾರೆ.

ಸಾಹಿತ್ಯಾತ್ಮಕ ಪುಸ್ತಕಗಳನ್ನೂಅಪೇಕ್ಷೆಗೆ ತಕ್ಕಂತೆ ಒದಗಿಸಿ ಕೊಡುತ್ತಾರೆ. ವಿಠಲ್ ನ್ಯೂಸ್ ಏಜೆನ್ಸೀಸ್‍ ಪತ್ರಿಕಾ
ಮಾರಾಟ ಸೇವೆಯನ್ನು ಪ್ರಶಂಸಿಸಿ ಹಲವು ಪತ್ರಿಕಾ ಸಂಸ್ಥೆಗಳು ಪ್ರಶಂಸಾಪತ್ರ ನೀಡಿ ಗೌರವಿಸಿವೆ.

ಇವರ ಪತ್ರಿಕಾ ಸೇವಾ ಕೈಂಕರ್ಯಕ್ಕೆ ಸಹೋದರ ಕೆ.ವಿ.ಬಾಲಕೃಷ್ಣ ಮತ್ತು ಭಾನುಪ್ರಕಾಶ, ಜಯಾನಂದ, ಪ್ರಕಾಶ್, ಸುಶೀಲ ಸಹಕರಿಸುತ್ತಿದ್ದಾರೆ.

ರಾಜಮ್ಮ ಅವರು ಭಜನೆ,ಸ್ತೋತ್ರಗಳು, ಮಕ್ಕಳ ಕತೆಗಳು ಇತ್ಯಾದಿ ಪುಸ್ತಕಗಳನ್ನೂ ಮಾರಾಟ ಮಾಡುತ್ತಾರೆ. ಅಂಗಡಿಗೆ ಬರುವ ಪುಟ್ಟ ಮಕ್ಕಳಿಗೆ ಟಬಾಲಮಂಗಳ’, ‘ತುಂತುರು’ ಮುಂತಾದ ಮಕ್ಕಳ ಪಾಕ್ಷಿಕಗಳನ್ನು ನೀಡಿ ಓದುವ ಹವ್ಯಾಸವನ್ನು ಬೆಳೆಸುವ ಇವರ ಸೇವೆ ಶ್ಲಾಘನೀಯ. ಜ್ಯೋತಿಷ್ಯಶಾಸ್ತ್ರವನ್ನೂ ಅವರು ಅಭ್ಯಾಸ ಮಾಡಿದ್ದಾರೆ.

ಭಾಷಾ ಸಾಮರಸ್ಯ ಸೇವೆಗೆ 50 ವರ್ಷ

ಕೇರಳದಿಂದ ಬಂದು ವಿಟ್ಲದಲ್ಲಿ ಟೈಪ್ ರೈಟಿಂಗ್ ಶಾಲೆಯನ್ನೂ ನಡೆಸುತ್ತಾ ಪತ್ರಿಕಾ ಮಾರಾಟವನ್ನೂ ಮಾಡಿದ ಇವರು ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಮಲೆಯಾಳಂ ಮಾತೃಭಾಷೆಯ ಇವರ ಪತ್ರಿಕಾ ಸರಸ್ವತಿಯ ಸೇವೆಯು ಭಾಷಾ ಸಾಮರಸ್ಯಕ್ಕೂ ಪೂರಕವಾಗಿದೆ. ಕೆ.ವಿ.ರಾಜಮ್ಮ ಮತ್ತು ಬಳಗದವರ ಪತ್ರಿಕಾ ಮಾರಾಟ ಸೇವೆ ವಂದನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT